More

    ನಡವಳಿಕೆ ಕಲಿಸುವುದೂ ಪಾಲಕರ ಹೊಣೆ- ಆರೆಸ್ಸೆಸ್ ಮುಖಂಡ ಪಟ್ಟಾಭಿರಾಮ್ ಹೇಳಿಕೆ

    ದಾವಣಗೆರೆ: ಮಕ್ಕಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವುದಷ್ಟೇ ಪಾಲಕರ ಜವಾಬ್ದಾರಿಯಲ್ಲ; ನಡವಳಿಕೆಯನ್ನು ಕಲಿಸದೆ ಹೋದರೆ ನಿರರ್ಥಕ ಎಂದು ಆರೆಸ್ಸೆಸ್‌ನ ದಕ್ಷಿಣ ಕರ್ನಾಟಕ ಸಹಪ್ರಾಂತ ಕಾರ್ಯವಾಹ ಪಟ್ಟಾಭಿರಾಮ್ ಹೇಳಿದರು.

    ಸೋಮೇಶ್ವರ ವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜನ್ಮಭೂಮಿ ಮತ್ತು ಜನ್ಮದಾತರಿಗೊಂದು ನಮನ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದರು.
    ವೃದ್ಧಾಶ್ರಮವಾಗಿರುವ ಚೀನಾ ದೇಶದಲ್ಲಿ ಹೆಚ್ಚು ಮಕ್ಕಳನ್ನು ಹೊಂದಿದ್ದರೆ ಸೌಲಭ್ಯ ನೀಡುವುದಾಗಿ ಅಲ್ಲಿನ ಸರ್ಕಾರ ಹೇಳುತ್ತಿದೆ. ಗಂಡಿರಲಿ, ಹೆಣ್ಣಿರಲಿ ಒಂದೇ ಮಗು ಇರಲಿ ಎಂಬುದು ಭಾರತದಲ್ಲೀಗ ಕೇಳಿ ಬರುತ್ತಿರುವ ಘೋಷಣಾ ವಾಕ್ಯ. ಇದು ಮತ್ತಷ್ಟು ಕಠಿಣ ಸ್ಥಿತಿಗೆ ತಲುಪಿದರೆ ಭಾರತ ಇನ್ನು 20 ವರ್ಷದಲ್ಲಿ ವೃದ್ಧಾಶ್ರಮ ಆದೀತು ಎಂದು ಎಚ್ಚರಿಸಿದರು.
    ಇಲ್ಲಿನ ಸಂಸ್ಕೃತಿ ಹಾಗೂ ಕೌಟುಂಬಿಕ ವ್ಯವಸ್ಥೆ ಕಾರಣಕ್ಕೆ ಭಾರತ ದೇಶ ಉಳಿದಿದೆ. ಶೇ.25ರಷ್ಟು ವೆಚ್ಚ ವೃದ್ಧಾಶ್ರಮಕ್ಕೆ ಬಳಸುವ ಅಮೆರಿಕ ಕೂಡ ಇದೀಗ ಭಾರತದ ಕೌಟುಂಬಿಕ ವ್ಯವಸ್ಥೆಯನ್ನು ಬಯಸುತ್ತಿದೆ. ಇಂಗ್ಲೆಂಡಿನಲ್ಲೂ ಅದೇ ಸ್ಥಿತಿ ಇದೆ. ಹೆತ್ತವರು- ಮಕ್ಕಳಿಗೆ ಹಣ ಬೇಕಿಲ್ಲ. ಬೇಕಾಗಿರುವುದು ಪ್ರೀತಿ-ಸಂಸ್ಕಾರ. ಈ ಆಶಯದ ಕುಟುಂಬ ವ್ಯವಸ್ಥೆ ಬಹುತೇಕ ಪಾಲಕರಿಗೆ ಅರ್ಥವೇ ಆಗಿಲ್ಲ ಎಂದು ವಿಷಾದಿಸಿದರು.
    ಭಾರತದಲ್ಲಿ ಓದಿದ ಶೇ.90ರಷ್ಟು ಮಕ್ಕಳಿಗೆ ವಿದೇಶಗಳಿಗೆ ಹಾರುವ ಮನಸ್ಸಿದೆಯೆ ಹೊರತು ಇಲ್ಲಿರುವ ಇಚ್ಛೆ ಇಲ್ಲ. ಇಲ್ಲಿ ಕಲಿತ ಮಕ್ಕಳು ಭಾರತದಲ್ಲಿ ಇರುವುದಿಲ್ಲ ಎಂದಾದರೆ ಭಾರತ ದೇಶ, ನಮ್ಮ ಊರು ಮಾತ್ರವಲ್ಲ, ಕುಟುಂಬಗಳೂ ಇರುವುದಿಲ್ಲ. ಹೀಗಾಗಿ ಮಕ್ಕಳಲ್ಲಿ ದೊಡ್ಡ ಕಲ್ಪನೆಗಳನ್ನು ಬಿತ್ತಬೇಕು ಎಂದು ಆಶಿಸಿದರು.
    ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಕಂಚಿಕೆರೆ ಸುಶೀಲಮ್ಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವೃದ್ಧಾಶ್ರಮದಲ್ಲಿರುವ ಹೆತ್ತವರು ಮೃತರಾದರೆ ಕನಿಷ್ಠಪಕ್ಷ ಅಂತ್ಯಸಂಸ್ಕಾರ ಮಾಡಲು ಬಾರದ ಮಕ್ಕಳೂ ಇದ್ದಾರೆ. ಶಾಲೆಗಳಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕ ಪಾಲಕರ ಬಗ್ಗೆ ಗೌರವ ಮೂಡಿಸಿದರೆ ಸಂಸ್ಕಾರ ಬೆಳೆಯಲಿದೆ ಎಂದರು.
    ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಜಿ.ಆರ್. ಸುಕೃತಾ ಅವರನ್ನು ಸನ್ಮಾನಿಸಲಾಯಿತು. ರುದ್ರಯ್ಯ, ಶಾಲಾಡಳಿತ ಮಂಡಳಿ ಗೌರವ ಕಾರ್ಯದರ್ಶಿ ಕೆ.ಎಂ ಸುರೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts