More

    ನಂದಿ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್, ರೂ.10 ಕೋಟಿ ಅನುದಾನ ಬಿಡುಗಡೆ

    ಚಿಕ್ಕಬಳ್ಳಾಪುರ: ಅಂತಾರಾಷ್ಟ್ರೀಯ ಪ್ರವಾಸಿ ತಾಣ ನಂದಿ ಗಿರಿಧಾಮದ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ಸಿದ್ಧವಾಗಿದ್ದು, ತ್ವರಿತವಾಗಿ ಕಾಮಗಾರಿಗಳನ್ನು ಪ್ರಾರಂಭಿಸಲು ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ.ಸುಧಾಕರ್ ನೇತೃತ್ವದಲ್ಲಿ ಗುರುವಾರ ಏರ್ಪಡಿಸಿದ್ದ ಸಭೆಯಲ್ಲಿ ನಿರ್ಧರಿಸಲಾಯಿತು.

    ರೋಪ್ ವೇ ನಿರ್ಮಾಣ, ಎಕೋ ಟೂರಿಸಂ, ಪುರಾತತ್ವ ಸ್ಮಾರಕಗಳು, ಗಿರಿಚಾರಣ ಮಾರ್ಗಗಳು, ನೆಲ್ಲಿಕಾಯಿ ಬಸವಣ್ಣ ಮತ್ತು ಮಂಟಪಗಳ ಸಂರಕ್ಷಣೆ ಮತ್ತು ಸುಂದರೀಕರಣ, ಪ್ಲಾಸ್ಟಿಕ್‌ಮುಕ್ತ ಪ್ರದೇಶ, ವಿಶೇಷ ಪಾರ್ಕಿಂಗ್ ವ್ಯವಸ್ಥೆ, ವಿಶ್ವದರ್ಜೆಯ ಸವಲತ್ತುಗಳ ಮೂಲಕ ನಂದಿ ಬೆಟ್ಟವನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಾಸ್ಟರ್ ಪ್ಲ್ಯಾನ್ ರೂಪಿಸಲಾಗಿದೆ.

    ಈ ಹಿನ್ನೆಲೆಯಲ್ಲಿ ಸರ್ಕಾರ ಮೊದಲ ಹಂತದಲ್ಲಿ 10 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದು ಟೆಂಡರ್ ಕರೆದು ತ್ವರಿತವಾಗಿ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲು ತೀರ್ಮಾನಿಸಲಾಯಿತು.

    ಗಿರಿಯಲ್ಲಿ ಪ್ರವಾಸೋದ್ಯಮ, ಜಿಲ್ಲಾಡಳಿತ ಮತ್ತು ತೋಟಗಾರಿಕೆ ಸೇರಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಕಾಲ್ನಡಿಗೆಯಲ್ಲಿ ಸಂಚರಿಸಿದ ಸಚಿವ ಡಾ.ಸುಧಾಕರ್, ಬೆಟ್ಟದಲ್ಲಿನ ಸಮಸ್ಯೆ ಮತ್ತು ನಿರೀಕ್ಷಿತ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

    ರೋಪ್ ವೇ ಸನ್ನಿಹಿತ : ಕಳೆದ 15 ವರ್ಷಗಳಿಂದಲೂ ನಂದಿ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣ ಚರ್ಚೆ ಮತ್ತು ಯೋಜನೆ ಪರಿಶೀಲನೆ ನಡೆಯುತ್ತಿದೆ. ನಂದಿ ಅಭಿವೃದ್ಧಿ ಪ್ರಾಧಿಕಾರ ರಚನೆ ಸೇರಿ ಹಲವು ಪ್ರಗತಿದಾಯಕ ಅಂಶಗಳನ್ನೊಳಗೊಂಡ ಮಾಸ್ಟರ್ ಪ್ಲ್ಯಾನ್ ರೂಪಿಸಲಾಗಿತ್ತು. ಆದರೆ, ಕೆಲ ತಾಂತ್ರಿಕ ಸಮಸ್ಯೆಯಿಂದ ಅನುಷ್ಠಾನಗೊಳ್ಳುವಲ್ಲಿ ವಿಳಂಬವಾಗಿದೆ. ಅಂತಾರಾಷ್ಟ್ರೀಯ ಕಂಪನಿಯೊಂದು ಗುತ್ತಿಗೆ ಪಡೆದು, ಬಳಿಕ ಹಿಂದೇಟು ಹಾಕಿದ್ದರಿಂದ ರೋಪ್ ವೇ ನಿರ್ಮಾಣಕ್ಕೆ ಚಾಲನೆ ಸಿಗಲಿಲ್ಲ. ಇದೀಗ ಸಮಗ್ರ ಅಭಿವೃದ್ಧಿ ಯೋಜನೆ ಅನುಷ್ಠಾನಕ್ಕೆ ಇನ್ ಟೆಕ್ ಸಂಸ್ಥೆ ಮುಂದೆ ಬಂದಿದೆ ಎಂದು ಸುಧಾಕರ್ ತಿಳಿಸಿದರು.

    ಬಜೆಟ್‌ನಲ್ಲಿ ವಿಶೇಷ ಆದ್ಯತೆ : ರಾಜ್ಯ ಬಜೆಟ್‌ನಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ಸಿಗುವ ನಿರೀಕ್ಷೆ ಇದೆ ಎಂದು ಡಾ ಕೆ.ಸುಧಾಕರ್ ತಿಳಿಸಿದರು. ನಂದಿ ಗಿರಿಧಾಮದ ನೆಹರೂ ನಿಲಯದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಚಿವರು, ಪ್ರವಾಸಿ ತಾಣಗಳ ಅಭಿವೃದ್ಧಿಯ ಮಹತ್ವದ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಗಮನ ಸೆಳೆಯಲಾಗಿದೆ. ಹಾಗೆಯೇ ಆದ್ಯತೆ ನೀಡುವ ಭರವಸೆ ಸಿಕ್ಕಿದೆ ಎಂದು ತಿಳಿಸಿದರು.

    ಅಧಿಕಾರಿಗಳ ವಿರುದ್ಧ ಗರಂ: ನಂದಿ ಗಿರಿಧಾಮದ ಪಾಥ್ ವೇನಲ್ಲಿ ಅಸಮರ್ಪಕ ನಿರ್ವಹಣೆ, ತ್ಯಾಜ್ಯ ಗಿಡಗಳ ತೆರವಿಗೆ ನಿರ್ಲಕ್ಷೃ, ಟಿಪ್ಪು ಸುಲ್ತಾನ್ ಕೋಟೆ ಗೋಡೆ ಮೇಲೆ ಅಶ್ಲೀಲ ಬರಹ ಕಂಡು ಅಧಿಕಾರಿಗಳ ಮೇಲೆ ಗರಂ ಆದ ಸಚಿವ ಸುಧಾಕರ್, ಇದು ದೇಶ ವಿದೇಶಗಳಿಂದ ಪ್ರವಾಸಿಗರನ್ನು ಸೆಳೆಯುವ ತಾಣ. ಇಲ್ಲಿ ಉತ್ತಮ ನಿರ್ವಹಣೆಯ ಮೂಲಕ ತಾಣವನ್ನು ಮತ್ತಷ್ಟು ಆಕರ್ಷಣೀಯವಾಗಿಸಬೇಕು ಎಂದು ತಾಕೀತು ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts