More

    ಧಾರಾಕಾರ ಮಳೆಯಿಂದ ಹಲವು ಗ್ರಾಮಗಳು ಕಗ್ಗತ್ತಲು

    ಸೋಮವಾರಪೇಟೆ: ಅತಿ ಹೆಚ್ಚು ಮಳೆ ಬೀಳುವ ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರಗಡಿಗೆ, ಮುಟ್ಲು, ಹಮ್ಮಿಯಾಲ, ಸೂರ್ಲಬ್ಬಿ, ಕಿಕ್ಕರಳ್ಳಿ, ಮಂಕ್ಯಾ ಗ್ರಾಮಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು ಕಳೆದ ಆರೇಳು ದಿನಗಳಿಂದ ಗ್ರಾಮಗಳು ಕತ್ತಲೆಯಲ್ಲಿ ಮುಳುಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.


    ಹೊಳೆ, ಕೊಲ್ಲಿ, ತೋಡುಗಳು ಉಕ್ಕಿ ಹರಿಯುತ್ತಿದ್ದು, ಭತ್ತ ಸಸಿ ನಾಟಿ ಮಾಡಿದ ಗದ್ದೆಗಳು ಜಲಾವೃತಗೊಂಡಿವೆ. ಜನರು ಮನೆಯಿಂದ ಹೊರಬರದಂತಹ ಪರಿಸ್ಥಿತಿ ಒದಗಿದೆ. ಏಳು ದಿನಗಳಿಂದ ವಿದ್ಯುತ್ ಇಲ್ಲದೆ, ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೊಬೈಲ್ ಫೋನ್‌ಗಳಿಲ್ಲದೆ, ಜನರ ಸಂಪರ್ಕ ಇಲ್ಲದಂತಾಗಿದೆ. ಬಹುತೇಕ ಕಡೆ ವಿದ್ಯುತ್ ಮಾರ್ಗದ ಮೇಲೆ ಮರಗಳು ಮುರಿದು ಬಿದ್ದಿವೆ.


    ಸೂರ್ಲಬ್ಬಿ ರಸ್ತೆಯಲ್ಲಿ ಒಂದು ಸರ್ಕಾರಿ ಬಸ್ ಸಂಚರಿಸುತ್ತದೆ. ರಸ್ತೆಗೆ ಅಡ್ಡಲಾಗಿ ಮರ ಬಿದ್ದಾಗ ಬಸ್ ಸಂಚಾರವೂ ಇಲ್ಲದಂತಾಗುತ್ತದೆ. ರಸ್ತೆಯಲ್ಲಿ ಮರ ಬಿದ್ದರೆ ಗ್ರಾಮಸ್ಥರೇ ಮರವನ್ನು ತೆರವುಗೊಳಿಸಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡುತ್ತಾರೆ.
    ಸೂರ್ಲಬ್ಬಿ ಸುಬ್ರಮಣ್ಯ ದೇವಾಲಯ ಹಾಗು ಅಂಗನವಾಡಿ ಹತ್ತಿರ ಕಾಡಾನೆಗಳು ವಾಸ್ತವ್ಯ ಹೂಡಿದ್ದು, ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಹಗಲಿನ ವೆಳೆಯಲ್ಲಿ ರಸ್ತೆಯಲ್ಲಿ ತೆರಳಲು ಭಯಪಡುವಂತಾಗಿದೆ.


    ಮುಟ್ಟು ಗ್ರಾಮದಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು 5 ಕಿ.ಮೀ. ಕಾಲ್ನಡಿಗೆಯಲ್ಲಿ ಸೂರ್ಲಬ್ಬಿಗೆ ಬಂದು ಬಸ್ ಹತ್ತಬೇಕಿದೆ. ಮಳೆಯಲ್ಲಿ ಮಂಜು ಮುಸುಕಿನಲ್ಲಿ ರಸ್ತೆಯೂ ಕಾಣುತ್ತಿಲ್ಲ. ಕಾಡಾನೆಗಳು ಅಡ್ಡಬಂದರೆ ಪ್ರಾಣ ಕಳೆದುಕೊಳ್ಳುವಂತಹ ಪರಿಸ್ಥಿತಿ ಇದೆ ಎಂದು ಸೂರ್ಲಬ್ಬಿ ಗ್ರಾಮ ನಿವಾಸಿ ಜಯಂತಿ ಹೇಳಿದರು.


    ಕುಂಬಾರಗಡಿಕೆ, ಮುಟ್ಲು, ಕಿಕ್ಕರಳ್ಳಿ ಗ್ರಾಮಗಳಲ್ಲಿ ಅನೇಕರು ಶಿಥಿಲಾವಸ್ಥೆ ತಲುಪಿರುವ ಮನೆಯಲ್ಲಿ ವೃದ್ಧರು ವಾಸ ಮಾಡುತ್ತಿದ್ದಾರೆ. ಕೆಲ ಕುಟುಂಬಗಳು ಪಟ್ಟಣದ ಸಂಪರ್ಕವನ್ನೇ ಕಳೆದುಕೊಂಡಿದ್ದಾರೆ. ಪ್ರತಿದಿನ 10ರಿಂದ 15 ಇಂಚಿನಷ್ಟು ಮಳೆ ಸುರಿಯುತ್ತಿದೆ. ಜಿಲ್ಲಾಡಳಿತ ಈ ಗ್ರಾಮಗಳಿಗೆ ವಿಶೇಷ ಕಾಳಜಿ ವಹಿಸಿ, ಆಹಾರ ಸಾಮಗ್ರಿಗಳನ್ನು ಉಚಿತವಾಗಿ ವಿತರಣೆ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts