More

    ಧಾರವಾಡ ಜಿಲ್ಲೆಯಲ್ಲಿ ಶೇ. 95.2ರಷ್ಟು ಸಾಧನೆ

    ಮಂಜುನಾಥ ಅಂಗಡಿ ಧಾರವಾಡ

    ಇಂಗು ಗುಂಡಿ ನಿರ್ಮಾಣ ಅಭಿಯಾನದಲ್ಲಿ ಜಿಲ್ಲೆ ಅದ್ಭುತ ಪ್ರಗತಿ ಸಾಧಿಸಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೊಸದಾಗಿ ಪರಿಚಯಿಸಿರುವ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿ.ಪಂ. ಜಾಗೃತಿ ಅಭಿಯಾನದ ಪರಿಣಾಮ ಜಿಲ್ಲೆಯ ಗುರಿ ಸಾಧನೆ ಶೇ. 95.2ರಷ್ಟಾಗಿದೆ.

    ನರೇಗಾ ಉದ್ಯೋಗ ಚೀಟಿ ಹೊಂದಿರುವ ಕೂಲಿ ಕಾರ್ವಿುಕರಿಗೆ ಮಳೆಗಾಲದಲ್ಲೂ ಕೂಲಿ ಕೆಲಸ ನೀಡುವ ಉದ್ದೇಶದಿಂದ ಸರ್ಕಾರ ಇಂಗು (ಬಚ್ಚಲು) ಗುಂಡಿ ನಿರ್ಮಾಣ ಯೋಜನೆ ಜಾರಿಗೊಳಿಸಿತ್ತು. ಆಗಸ್ಟ್- ಸೆಪ್ಟೆಂಬರ್​ನಲ್ಲಿ ಯೋಜನೆ ಅನುಷ್ಠಾನಗೊಂಡಾಗ ರಾಜ್ಯಾದ್ಯಂತ ಪ್ರತಿ ಗ್ರಾ.ಪಂ.ಗೆ ಆರಂಭಿಕವಾಗಿ 50 ಇಂಗು ಗುಂಡಿ ನಿರ್ವಣದ ಗುರಿ ನೀಡಲಾಗಿತ್ತು.

    2020ರ ಮಾರ್ಚ್ 3ನೇ ವಾರದಲ್ಲಿ ಕರೊನಾದಿಂದಾಗಿ ಲಾಕ್​ಡೌನ್ ಘೋಷಣೆಯಾಯಿತು. ನರೇಗಾ ಸಾಮೂಹಿಕ ಕಾಮಗಾರಿಗಳ ಮೇಲೂ ಕರೊನಾ ಕರಿಛಾಯೆ ಆವರಿಸಿ ಕೆಲಸಗಳು ಸ್ಥಗಿತಗೊಂಡವು. ಹಾಗಾಗಿ ಸರ್ಕಾರ ಸಾಮೂಹಿಕ ಕಾಮಗಾರಿಗಳ ಬದಲು ವೈಯಕ್ತಿಕ ಅಥವಾ ಕಡಿಮೆ ಪ್ರಮಾಣದಲ್ಲಿ ಕೂಲಿಕಾರರನ್ನು ಬಳಸಿಕೊಂಡು ಕೂಲಿ ನೀಡುವ ಉದ್ದೇಶದಿಂದ ಇಂಗು ಗುಂಡಿ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಸೂಚಿಸಿತ್ತು. ಅಲ್ಲದೆ, 4-5 ತಿಂಗಳು ಕೂಲಿ ಇಲ್ಲದೆ ಕುಳಿತ ಕೂಲಿ ಕಾರ್ವಿುಕರಿಗೆ ಮಳೆಗಾಲದಲ್ಲೂ ಉದ್ಯೋಗ ಕಲ್ಪಿಸಿ ಕೂಲಿ ನೀಡಲು ಈ ಯೋಜನೆ ಜಾರಿಗೆ ತರಲಾಗಿತ್ತು.

    14,000 ರೂ. ಅನುದಾನ: ಗ್ರಾಮೀಣ ಪ್ರದೇಶದಲ್ಲಿ ಮನೆಯ ಹಿತ್ತಲು, ಬಚ್ಚಲು ನೀರು ರಸ್ತೆ ಮೇಲೆ ಹರಿದು ಗಲೀಜಾಗುತ್ತಿತ್ತು. ಸ್ವಚ್ಛತೆ ಕಾಪಾಡುವುದು, ಸಾಂಕ್ರಾಮಿಕ ರೋಗಗಳಿಗೆ ಕಡಿವಾಣ ಹಾಕಲು ಗ್ರಾ.ಪಂ.ಗಳ ಮೂಲಕ ಇಂಗು ಗುಂಡಿ ನಿರ್ವಿುಸಿಕೊಳ್ಳಲು ಫಲಾನುಭವಿಗೆ 14,000 ರೂ. ನೀಡಲಾಗುತ್ತಿದೆ. 55 ಅಡಿ ಉದ್ದ-ಅಗಲ ಅಥವಾ ಅಗತ್ಯಕ್ಕೆ ಅನುಗುಣವಾಗಿ ಮಾರ್ಪಾಡು ಮಾಡಿಕೊಳ್ಳಲು ಅವಕಾಶವಿದೆ. 6 ರಿಂದ 8 ಅಡಿ ಆಳದ ಗುಂಡಿ ತೋಡಿ ಸಿಮೆಂಟ್ ರಿಂಗ್​ಗಳನ್ನು ಜೋಡಿಸಿ ಸುತ್ತಲೂ ಜಲ್ಲಿ ಕಲ್ಲು ಹಾಕಿ ಸಿಮೆಂಟ್ ಮುಚ್ಚಳ ಅಳವಡಿಸಿ ಪ್ಯಾಕ್ ಮಾಡಲಾಗುತ್ತದೆ. ಬಚ್ಚಲು ನೀರು ಇಂಗುವ ಮೂಲಕ ಗಲೀಜಾಗುವುದನ್ನು ತಡೆಗಟ್ಟಲಾಗುತ್ತದೆ.

    * 3,388 ಇಂಗುಗುಂಡಿ ನಿರ್ಮಾಣ ಹಂತದಲ್ಲಿ: ಆಗಸ್ಟ್ ಅಂತ್ಯದಿಂದ ಆರಂಭವಾದ ಇಂಗು ಗುಂಡಿ ನಿರ್ಮಾಣ ಯೋಜನೆ ಈಗಲೂ ಚಾಲ್ತಿಯಲ್ಲಿದೆ. ಜಿಲ್ಲೆಯ 7 ತಾಲೂಕುಗಳಲ್ಲಿ ಜ. 14ರವರೆಗೆ 6,855 ಇಂಗು ಗುಂಡಿ ನಿರ್ವಣವಾಗಿವೆ. ಕಾರ್ಯಾದೇಶ ನೀಡಲಾಗಿದ್ದು, ಅಳ್ನಾವರದಲ್ಲಿ 114, ಅಣ್ಣಿಗೇರಿ 445, ಧಾರವಾಡ 112, ಹುಬ್ಬಳ್ಳಿ 490, ಕಲಘಟಗಿ 250, ಕುಂದಗೋಳ 642, ನವಲಗುಂದದಲ್ಲಿ 806 ಸೇರಿ 3,388 ಇಂಗು ಗುಂಡಿಗಳ ನಿರ್ಮಾಣ ಹಂತದಲ್ಲಿದೆ. ಕಾಮಗಾರಿಗಳು ಶೀಘ್ರವೇ ಮುಗಿಯಲಿದ್ದು, ಜಿಲ್ಲೆ ಗುರಿ ಮೀರಿ ಪ್ರಗತಿ ಸಾಧಿಸಿದ ಹಿರಿಮೆಗೆ ಪಾತ್ರವಾಗಲಿದೆ.

    ಇಂಗು ಗುಂಡಿ ನಿರ್ವಣದಲ್ಲಿ ಧಾರವಾಡ ಜಿಲ್ಲೆಯ ಸಾಧನೆ ಬಗ್ಗೆ ಇಲಾಖೆಯ ಸಚಿವರಿಂದ ಪ್ರಶಂಸೆ ವ್ಯಕ್ತವಾಗಿದೆ. ಗ್ರಾ.ಪಂ.ಗಳಲ್ಲಿ ಚುನಾಯಿತ ಸದಸ್ಯರಿಲ್ಲದ ಸಂದರ್ಭದಲ್ಲೂ ಪಿಡಿಒಗಳು ಯೋಜನೆ ಅನುಷ್ಠಾನಕ್ಕೆ ಶ್ರಮಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಉಳಿದವರು ಆಯಾ ಪಂಚಾಯಿತಿಯಿಂದ ಇಂಗು ಗುಂಡಿ ನಿರ್ವಿುಸಿಕೊಳ್ಳಬಹುದು. |ಡಾ. ಬಿ. ಸುಶೀಲಾ, ಜಿ.ಪಂ. ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts