More

    ಧಾರವಾಡದಲ್ಲಿ ಅವೈಜ್ಞಾನಿಕ ಉಬ್ಬು ತೆರವಿಗೆ ನಿರ್ಲಕ್ಷ್ಯ

    ಮಂಜುನಾಥ ಅಂಗಡಿ ಧಾರವಾಡ

    ಪ್ರಮುಖ ರಸ್ತೆಗಳಲ್ಲಿನ ಅವೈಜ್ಞಾನಿಕ ಉಬ್ಬುಗಳನ್ನು (ರೋಡ್ ಹಂಪ್ಸ್) ತೆಗೆದುಹಾಕಿ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಜಿಲ್ಲಾಧಿಕಾರಿ ಆದೇಶವಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರಸ್ತೆ ಉಬ್ಬುಗಳು ಹಾಗೇ ಉಳಿದಿದ್ದು, ವಾಹನ ಸವಾರರ ಪ್ರಾಣಕ್ಕೆ ಕುತ್ತು ತರುತ್ತಿವೆ.

    ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರಸ್ತೆ ಸುರಕ್ಷತೆ ಸಮಿತಿ ರಚಿಸಲಾಗಿದೆ. ಅದು ಅಸ್ತಿತ್ವದಲ್ಲಿ ಇದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಸಮಿತಿಯು ಸಭೆ, ಕಾರ್ಯಾಗಾರಗಳಿಗೆ ಮಾತ್ರ ಸೀಮಿತವಾಗಿದ್ದು, ಜಿಲ್ಲಾಧಿಕಾರಿ ಆದೇಶಕ್ಕೂ ಕಿಮ್ಮತ್ತಿಲ್ಲ ಎಂಬಂತಾಗಿದೆ.

    ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧ್ಯಕ್ಷರಾಗಿರುವ ರಸ್ತೆ ಸುರಕ್ಷತೆ ಸಮಿತಿ ಸಭೆಯಲ್ಲಿ ಜಿಲ್ಲೆಯ ಇಬ್ಬರು ಆರ್​ಟಿಒಗಳು ಸದಸ್ಯ ಕಾರ್ಯದರ್ಶಿಗಳಾಗಿದ್ದಾರೆ. ಪಾಲಿಕೆ ಆಯುಕ್ತ, ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ಆಯುಕ್ತರಾದಿಯಾಗಿ ಸದಸ್ಯರಾಗಿದ್ದಾರೆ. ಸಮಿತಿ ಅಧ್ಯಕ್ಷರು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ರಸ್ತೆ ಸುರಕ್ಷತೆ ಕ್ರಮ ಕೈಗೊಳ್ಳಲು ಸೂಚಿಸಿದರೂ ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರಿದಿದೆ. ಅವೈಜ್ಞಾನಿಕ ಉಬ್ಬುಗಳನ್ನು ತೆರವು, ಅಪಾಯಕಾರಿ ತಿರುವುಗಳಲ್ಲಿ ಫಲಕ ಅಳವಡಿಕೆ ಸೇರಿದಂತೆ ಹಲವು ನಿರ್ದೇಶನಗಳನ್ನು ರಸ್ತೆ ಸುರಕ್ಷತೆ ಸಮಿತಿಯ ಸಭೆಯಲ್ಲಿ ನೀಡಲಾಗಿತ್ತು. ಜಿಲ್ಲೆಯನ್ನು ಸಂರ್ಪಸುವ ಮುಖ್ಯ ರಸ್ತೆಗಳು, ತಾಲೂಕು ಮುಖ್ಯ ರಸ್ತೆಗಳಲ್ಲಿನ ಉಬ್ಬುಗಳನ್ನು ತೆರವು ಮಾಡಬೇಕು ಎಂಬ ಆದೇಶ ಪಾಲನೆಯಾಗುತ್ತಿಲ್ಲ. ಧಾರವಾಡ- ನವಲಗುಂದ ರಸ್ತೆ, ಅಳ್ನಾವರ ರಸ್ತೆ, ಕಲಘಟಗಿಯಂಥ ಪ್ರಮುಖ ರಸ್ತೆಗಳಲ್ಲಿ ಅವೈಜ್ಞಾನಿಕ ಉಬ್ಬುಗಳಿದ್ದವು. ಜಿಲ್ಲಾಧಿಕಾರಿ ಸೂಚನೆಯಂತೆ ಅವುಗಳನ್ನು ತೆಗೆದುಹಾಕಲಾಗಿದೆ. ಆದರೆ, ಜೆಸಿಬಿ ಬಳಸಿ ಅರೆಬರೆ ತೆಗೆಯಲಾಗಿದ್ದು, ದ್ವಿಚಕ್ರ ವಾಹನಗಳ ಸಂಚಾರಕ್ಕೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಇತ್ತೀಚೆಗೆ ನವಲಗುಂದ ರಸ್ತೆಯಲ್ಲಿ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಧಾರವಾಡ- ಕಲಘಟಗಿ ರಸ್ತೆಯಲ್ಲೂ ಹಲವಾರು ಅವೈಜ್ಞಾನಿಕ ಹಂಪ್​ಗಳಿವೆ. ಪೇವರ್​ಗಳನ್ನು ಅಳವಡಿಸಲಾಗಿದ್ದು, ಅಪಘಾತಗಳಿಗೆ ಆಹ್ವಾನ ನೀಡುತ್ತಿವೆ. ವಾಹನಗಳ ವೇಗ ನಿಯಂತ್ರಿಸಲು ಹಂಪ್ ಅಗತ್ಯವಿದ್ದರೆ ಸಣ್ಣ ಹಾಗೂ ವೈಜ್ಞಾನಿಕವಾಗಿ ಹಾಕಬೇಕು. ಅವುಗಳ ಮೇಲೆ ಬಿಳಿ ಪಟ್ಟಿ ಬಳಿಯಬೇಕು. ಆದರೆ, ಈ ನಿಯಮ ಎಲ್ಲೂ ಪಾಲನೆಯಾಗುತ್ತಿಲ್ಲ.

    ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ: ಹುಬ್ಬಳ್ಳಿ- ಧಾರವಾಡ ಮಹಾನಗರವು ಸ್ಮಾರ್ಟ್ ಸಿಟಿ ಯೋಜನೆಗೊಳಪಟ್ಟಿದೆ. ರಾಜ್ಯದ ಬೇರೆ ಎಲ್ಲಿಯೂ ಇಲ್ಲದ ಬಿಆರ್​ಟಿಎಸ್ ಯೋಜನೆಯ ಭಾಗ್ಯ ಅವಳಿನಗರದಲ್ಲಿ ಅನುಷ್ಠಾನಗೊಂಡಿದೆ. ‘ಅಭಿವೃದ್ಧಿಯ ಹರಿಕಾರರು’ ಎಂದು ಕೊಚ್ಚಿಕೊಳ್ಳುವ, ಬ್ಯಾನರ್​ಗಳಲ್ಲಿ ಮಿಂಚುವ ಜನಪ್ರತಿನಿಧಿಗಳಿದ್ದಾರೆ. ಅವರಿಗೆ ಅವೈಜ್ಞಾನಿಕ ಉಬ್ಬುಗಳು ಕಾಣುವುದಿಲ್ಲವೇ? ಎಂದು ಜನಸಾಮಾನ್ಯರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ. ವಿಡಿಯೋ ತುಣುಕುಗಳನ್ನು ಪೋಸ್ಟ್ ಮಾಡಿ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.

    ಇತ್ತೀಚೆಗೆ ರಸ್ತೆ ಸುರಕ್ಷತೆ ಸಮಿತಿ ಸಭೆ ನಡೆಸಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಅವೈಜ್ಞಾನಿಕ ಹಂಪ್​ಗಳನ್ನು ಸಂಪೂರ್ಣ ತೆಗೆದು ಹಾಕಲು ಸೂಚಿಸಲಾಗುವುದು. ಹಂಪ್​ಗಳ ಅಗತ್ಯವಿದ್ದರೆ ಅವುಗಳ ಮೇಲೆ ಬಿಳಿ ಬಣ್ಣ ಬಳಿಯುವುದು ಹಾಗೂ ರಿಫ್ಲೆಕ್ಟರ್​ಗಳನ್ನು ಅಳವಡಿಸುವಂತೆ ಕ್ರಮ ಕೈಗೊಳ್ಳಲಾಗುವುದು.
    ಗುರುದತ್ತ ಹೆಗಡೆ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts