More

    ಧರೆಗುರುಳುವಂತಿದೆ ವಾಟರ್ ಟ್ಯಾಂಕ್!, ಆತಂಕದಲ್ಲಿ ತೂಬಗೆರೆ ನಿವಾಸಿಗಳು, ಕುಡಿವ ನೀರಿಗೆ ಎದುರಾಗಲಿದೆಯೇ ಪರದಾಟ

    ಶಿವಕುಮಾರ್ ತೂಬಗೆರೆ
    ದೊಡ್ಡಬಳ್ಳಾಪುರ ತಾಲೂಕು ತೂಬಗೆರೆಯಲ್ಲಿ ಸುಮಾರು 35 ವರ್ಷದ ಹಿಂದೆ ನಿರ್ಮಾಣವಾಗಿದ್ದ ಓವರ್ ಹೆಡ್ ಟ್ಯಾಂಕ್ ಶಿಥಿಲಗೊಂಡಿದ್ದು, ಯಾವುದೇ ಕ್ಷಣದಲ್ಲಾದರೂ ಧರೆಗುರುಳುವ ಪರಿಸ್ಥಿತಿ ನಿರ್ಮಾಣವಾಗಿದೆ.

    5 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮದಲ್ಲಿ ಮೂಲಸೌಕರ್ಯಗಳಿಗೆ ಪರದಾಟ ತಪ್ಪಿಲ್ಲ. ಇದರ ನಡುವೆ ಇರುವ ಓವರ್‌ಹೆಡ್ ಟ್ಯಾಂಕ್ ಸಹ ಧರೆಗುರುಳಿದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ ಎಂಬುದು ಗ್ರಾಮಸ್ಥರ ಆತಂಕವಾಗಿದೆ.

    ಟ್ಯಾಂಕ್‌ನ ಸಿಮೆಂಟ್ ಕಿತ್ತುಬರುತ್ತಿದ್ದು, ಅಳವಡಿಸಿರುವ ಕಬ್ಬಿಣದ ಸರಳುಗಳು ತುಕ್ಕು ಹಿಡಿದಿವೆ. ಟ್ಯಾಂಕ್ ಒಂದೆಡೆ ವಾಲಿದಂತೆ ಭಾಸವಾಗುತ್ತಿದೆ. ಈ ಹಿಂದಿನಿಂದಲೂ ಅಧಿಕಾರಿಗಳು ಇದರ ನಿರ್ವಹಣೆಗೆ ಗೊಡವೆಗೆ ಹೋಗಿಲ್ಲ. ಬಣ್ಣ ಸುಣ್ಣ ಸಣ್ಣಪುಟ್ಟ ದುರಸ್ತಿ ಕಾರ್ಯಗಳೂ ನಡೆದಿಲ್ಲ, ಪರಿಣಾಮವಾಗಿ ಟ್ಯಾಂಕ್ ಶಿಥಿಲಗೊಂಡಿದೆ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.

    ಎತ್ತ ವಾಲಿ ಎತ್ತ ಬೀಳುವುದೋ?: ಎತ್ತರವಾಗಿರುವ ಟ್ಯಾಂಕ್ ಎತ್ತ ಬೀಳುವುದೋ ಎಂಬ ಆತಂಕ ಸೃಷ್ಟಿಸಿದೆ. ವಾಟರ್ ಟ್ಯಾಂಕ್ ಸಮೀಪವೇ ಮನೆಗಳಿದ್ದು, ಮನೆಗಳ ಮೇಲೆ ಉರುಳಿ ಬಿದ್ದರೆ ಗತಿ ಏನು ಎಂಬ ಆತಂಕದಿಂದ ಸ್ಥಳೀಯ ನಿವಾಸಿಗಳಿಗೆ ರಾತ್ರಿ ನಿದ್ರೆ ಬರುತ್ತಿಲ್ಲ. ಅನಾಹುತವಾಗುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂಬುದು ಗ್ರಾಮಸ್ಥರ ಮನವಿಯಾಗಿದೆ.

    ಕುಡಿವ ನೀರಿಗೆ ಹಾಹಾಕಾರ: ಬರಪೀಡಿತ ತಾಲೂಕಿನಲ್ಲಿರುವ ತೂಬಗೆರೆಯಲ್ಲಿ ಬೇಸಿಗೆ ಸಮೀಪಿಸುತ್ತಿದ್ದಂತೆ ಪ್ರತಿವರ್ಷ ಕುಡಿವ ನೀರಿಗೆ ಸಮಸ್ಯೆ ಎದುರಾಗುತ್ತದೆ, ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಕಸರತ್ತು ನಡೆಯುತ್ತದೆ. ಟ್ಯಾಂಕರ್ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ಈಗಾಗಲೇ ಬೇಸಿಗೆ ಸಮೀಪಿಸುತ್ತಿರುವುದರಿಂದ ನೀರಿನ ಸಮಸ್ಯೆ ಎದುರಾಗುವ ಭೀತಿ ಗ್ರಾಮಸ್ಥರಲ್ಲಿ ಮನೆಮಾಡಿದೆ.

    ಹಲವು ವರ್ಷದಿಂದ ತೂಬಗೆರೆಯ ಮನೆಗಳಿಗೆ ನೀರು ಸರಬರಾಜು ಮಾಡುತ್ತಿದ್ದ ಈ ಓವರ್‌ಹೆಡ್ ಟ್ಯಾಂಕ್‌ನ ಆಯಸ್ಸು ಮುಗಿದಿದೆ. ಮನೆಯ ಪಕ್ಕದಲ್ಲೇ ಇರುವುದರಿಂದ ಆತಂಕ ಎದುರಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಕೂಡಲೇ ಕ್ರಮಕ್ಕೆ ಮುಂದಾಗಬೇಕು.
    ನರಸಿಂಹಮೂರ್ತಿ, ತೂಬಗೆರೆ ನಿವಾಸಿ

    ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಜತೆ ಮಾತನಾಡಿ ಶೀಘ್ರದಲ್ಲೆ ಕ್ರಮಕೈಗೊಳ್ಳಲಾಗುವುದು. ಗ್ರಾಮಕ್ಕೆ ಕುಡಿವ ನೀರಿನ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಲಾಗುವುದು.
    ಸುರೇಶ್‌ಬಾಬು, ಗ್ರಾಪಂ ಅಧ್ಯಕ್ಷ

    ಬೇಸಿಗೆ ಆರಂಭವಾಗುವುದರಿಂದ ಕುಡಿಯುವ ನೀರಿನ ತೊಂದರೆ ಎದುರಾಗಲಿದೆ. ಇಂಥ ಸಂದರ್ಭದಲ್ಲಿ ಟ್ಯಾಂಕ್ ಧರೆಗುರುಳಿದರೆ ಮತ್ತಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ, ಕೂಡಲೇ ಸಂಬಂಧಪಟ್ಟವರು ಕ್ರಮಕ್ಕೆ ಮುಂದಾಗಬೇಕು.
    ನಾಗಮ್ಮ, ಸ್ಥಳೀಯ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts