More

    ದೊಡ್ಡಬಳ್ಳಾಪುರ ಕೆರೆಗಳಲ್ಲಿ ಜಲರಾಶಿ: ಬಿಡ್‌ದಾರರ ಕೈಹಿಡಿದ ಮತ್ಸೋದ್ಯಮ, ಜುಲೈನಲ್ಲಿ 11.3 ಸೆಂ.ಮೀ ಮಳೆ

    ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
    ಬರಪೀಡಿತ ಜಿಲ್ಲೆಯೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ದೊಡ್ಡಬಳ್ಳಾಪುರ ತಾಲೂಕಿನ ಕೆರೆ-ಕಟ್ಟೆಗಳು ಮಳೆ ನೀರಿನಿಂದ ಭರ್ತಿಯಾಗಿವೆ. ಜುಲೈ ಮೊದಲ ವಾರದ ಆರಂಭದ 7 ದಿನಗಳಲ್ಲಿ 11.3 ಸೆಂ.ಮೀ ಮಳೆ ಸುರಿದಿದ್ದು, ಕಳೆದ ಮೂರ‌್ನಾಲ್ಕು ವರ್ಷದಲ್ಲೇ ಅತಿ ಹೆಚ್ಚು ದಾಖಲೆ ಎನ್ನಲಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ಕೆರೆ-ಕಟ್ಟೆಗಳಲ್ಲಿ ಜಲರಾಶಿ ಕಂಡುಬರುತ್ತಿದೆ.
    ಕರೊನಾ ಲಾಕ್‌ಡೌನ್‌ನಿಂದ ಕಂಗೆಟ್ಟಿದ್ದ ಮೀನುಸಾಕಣೆ ಬಿಡ್‌ದಾರರರನ್ನು ಮಳೆರಾಯ ಕೈಹಿಡಿದಿದ್ದಾನೆ. ಕಳೆದ ವರ್ಷ ಕೈಸುಟ್ಟುಕೊಂಡಿದ್ದ ಬಿಡ್‌ದಾರರು ಕೊಂಚ ನಿರಾಳರಾಗಿದ್ದಾರೆ. ಇದರೊಂದಿಗೆ ಸರ್ಕಾರ ಮುಂದಿನ ವರ್ಷದವರೆಗೆ ಟೆಂಡರ್ ಮುಂದುವರಿಸಿರುವುದು ಹಾಗೂ ಇಲಾಖೆಯಿಂದ ಶೇ.25 ಸಬ್ಸಿಡಿ ನೀಡಿರುವುದು ಮತ್ಸ್ಯೋದ್ಯಮದ ಚಟುವಟಿಕೆ ಗರಿಗೆದರುವಂತೆ ಮಾಡಿದೆ.

    ನವೀಕರಣ ಮುಂದುವರಿಕೆ:
    ಮೀನುಗಾರಿಕೆ ಇಲಾಖೆಯಿಂದ ಐದು ವರ್ಷದ ಹಿಂದೆ ಸಣ್ಣ ನೀರಾವರಿ ಇಲಾಖೆ ಹಾಗೂ ಪಂಚಾಯಿತಿ ವ್ಯಾಪ್ತಿಯ ಕೆರೆಗಳಲ್ಲಿ ಮೀನುಸಾಕಣೆಗೆ ಟೆಂಡರ್ ಕರೆಯಲಾಗಿತ್ತು. 2021ರ ಏಪ್ರಿಲ್ ಅಂತ್ಯಕ್ಕೆ ಟೆಂಡರ್ ಮುಕ್ತಾಯವಾಗಿತ್ತು. ಆದರೆ ಕಳೆದೆರಡು ವರ್ಷದಿಂದ ಕರೊನಾ ಕಾರಣದಿಂದ ಮೀನಿನ ನಿರೀಕ್ಷಿತ ವಹಿವಾಟು ನಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಜಿಲ್ಲಾ ಮೀನುಗಾರಿಕೆ ಇಲಾಖೆ ಹಳೇ ಟೆಂಡರ್‌ದಾರರಿಗೆ ಮತ್ತೊಂದು ವರ್ಷದ ಟೆಂಡರ್ ನವೀಕರಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಇದರೊಂದಿಗೆ ಜೂನ್‌ನಿಂದ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಮಳೆರಾಯ ಆರ್ಭಟಿಸುತ್ತಿದ್ದು ಕೆರೆ-ಕಟ್ಟೆಗಳಲ್ಲಿ ನೀರು ತುಂಬಿ ಮೀನುಗಾರಿಕೆ ಚುರುಕು ಪಡೆಯತೊಡಗಿದೆ.

    ಪೌಷ್ಟಿಕ ಆಹಾರದೊಂದಿಗೆ ಕಡಿಮೆ ದರ:
    ಕರೊನಾ ಲಾಕ್‌ಡೌನ್ ಬಳಿಕ ಕೋಳಿ ಹಾಗೂ ಮಾಂಸ ದರ ಏರಿಕೆಯಾಗಿದೆ. ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ ಕೋಳಿ ಹಾಗೂ ಮಾಂಸ ಖರೀದಿ ದುಬಾರಿ ಎನಿಸಿದೆ. ಇದರ ನಡುವೆ ಕಡಿಮೆ ದರದಲ್ಲಿ ಸಿಗುವ ಮೀನಿಗೆ ಬೇಡಿಕೆ ಹೆಚ್ಚಿದೆ. ಕರೊನಾ ನಿಯಂತ್ರಣಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆಂಬ ತಜ್ಞರ ಸಲಹೆ ಹಿನ್ನೆಲೆಯಲ್ಲಿ ಪೌಷ್ಟಿಕಾಂಶಯುಕ್ತ ಮೀನಿನ ಖಾದ್ಯಕ್ಕೆ ಎಲ್ಲ ಕಡೆ ಬೇಡಿಕೆ ಹೆಚ್ಚಿದ್ದು, ಮತ್ಸ್ಯೋದ್ಯಮ ಮತ್ತಷ್ಟು ಚುರುಕುಪಡೆಯಲು ಅವಕಾಶವಾಗಿದೆ.

    ವಾರದಲ್ಲಿ 113.0 ಮಿ.ಮೀ ಮಳೆ
    ಜು.1ರಿಂದ 7 ರವರೆಗೆ 7 ದಿನಗಳಲ್ಲಿ ಜಿಲ್ಲೆಯಲ್ಲಿಯೇ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 11.3 ಸೆಂ.ಮೀ ಮಳೆ ಸುರಿದಿದೆ. ಅದೇ ರೀತಿ ದೊಡ್ಡಬೆಳವಂಗಲದಲ್ಲಿ 10.2 ಸೆಂ.ಮೀ ಮಳೆ ಸುರಿದಿದೆ. ಮಧುರೆಯಲ್ಲಿ 68.6 ಸೆ.ಮೀ, ಸಾಸಲು 13.9 ಸೆಂ.ಮೀ ಹಾಗೂ ತೂಬಗೆರೆ ಹೋಬಳಿಯಲ್ಲಿ 12.3 ಸೆಂ.ಮೀ ಹೆಚ್ಚು ಮಳೆಯಾಗಿದೆ.
    ———-

    ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಈಗಾಗಲೇ ಬಿಡ್‌ದಾರರು ಮೀನು ಹಿಡಿಯಲು ಆರಂಭಿಸಿದ್ದಾರೆ. ಉತ್ತಮ ಆದಾಯ ಬರುವ ನಿರೀಕ್ಷೆ ಇದೆ. ಕರೊನಾ ಲಾಕ್‌ಡೌನ್ ಕಾರಣದಿಂದ ಮತ್ತೊಂದು ವರ್ಷ ಹಳೇ ಬಿಡ್‌ದಾರರಿಗೆ ಟೆಂಡರ್ ನವೀಕರಣಕ್ಕೆ ಅವಕಾಶ ಮಾಡಿಕೊಡಲಾಗಿದೆ ಜತೆಗೆ ಶೇ.25 ಸಬ್ಸಿಡಿ ಕೊಡಲಾಗಿದೆ. ಇದರಿಂದ ಮತ್ಯೋದ್ಯಮ ಆರ್ಥಿಕವಾಗಿ ಚೇತರಿಕೆ ಕಾಣಲಿದೆ.
    ಎನ್.ಸುಬ್ರಹ್ಮಣ್ಯ, ಸಹಾಯಕ ನಿರ್ದೇಶಕ ಮೀನುಗಾರಿಕೆ ಇಲಾಖೆ ಬೆಂ.ಗ್ರಾಮಾಂತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts