More

    ದೇಹಬಾಧೆ ನಿವಾರಣೆಗೂ ಇಲ್ಲಿ ಸಂಕಷ್ಟ

    ನಿಡಗುಂದಿ: ನೀವೇನಾದ್ರೂ ನಿಡಗುಂದಿ ಬಸ್‌ ನಿಲ್ದಾಣದಿಂದ ಬೇರೆಡೆ ಪ್ರಯಾಣಿಸಬೇಕಾ ? ಹಾಗಿದ್ರೆ, ಮನೆಯಲ್ಲಿಯೇ ಶೌಚಕ್ಕೆ ಹೋಗಿಬನ್ನಿ, ನೀವೇನಾದ್ರೂ ಬೇರೆ ಕಡೆಯಿಂದ ಆಗಮಿಸುವ ಪ್ರಯಾಣಿಕರಾದರೆ ನಿಡಗುಂದಿ ಬಸ್ ನಿಲ್ದಾಣ ಬರುವ ಮುನ್ನವೇ ಶೌಚ ಮುಗಿಸಿಬನ್ನಿ. ಏಕೆಂದ್ರೆ, ಇಲ್ಲಿಯ ಬಸ್ ನಿಲ್ದಾಣದಲ್ಲಿ ಶೌಚಕ್ಕೂ ನೀರಿಲ್ಲ.

    ಹೌದು, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಇಲ್ಲಿನ ಬಸ್ ನಿಲ್ದಾಣದಲ್ಲಿ ಹನಿ ನೀರಿಲ್ಲದ ಪರಿಣಾಮ ಧೂಳು ಮೆತ್ತಿಕೊಂಡು ನಿಂತಿರುವ ನಲ್ಲಿಗಳಿವೆ. ತುಕ್ಕು ಹಿಡಿದು ರೋಗಗ್ರಸ್ತವಾಗಿ ಮೂಲೆ ಸೇರಿರುವ ನೀರಿನ ತೊಟ್ಟಿಗಳಿವೆ. ಇಂತಹ ಶೌಚಗೃಹಕ್ಕೆ ಹೋಗುವ ಬದಲು ನೈಸರ್ಗಿಕ ಕರೆಯನ್ನು ಅದಮಿಟ್ಟುಕೊಳ್ಳುವ ಸ್ಥಿತಿ ಪ್ರಯಾಣಿಕರಿಗೆ ಬಂದಿದೆ.

    ನಿಡಗುಂದಿ ತಾಲೂಕು ಕೇಂದ್ರವಾಗಿ ವೇಗವಾಗಿ ಬೆಳೆಯುತ್ತಿದ್ದರೂ ಕೆಲ ಸಮಸ್ಯೆಗಳಿಗೆ ಮಾತ್ರ ಪರಿಹಾರ ಕಂಡಿಲ್ಲ. ಹೈಟೆಕ್ ಬಸ್ ನಿಲ್ದಾಣ ಕನಸು ಹೊತ್ತ ಇಲ್ಲಿನ ಜನತೆಗೆ ಸರ್ಕಾರ ಮಾತ್ರ ಇರುವ ಬಸ್ ನಿಲ್ದಾಣವನ್ನು ನವೀಕರಣಗೊಳಿಸಿ ಕೈತೊಳೆದುಕೊಂಡಿದೆ. ಸದ್ಯ ಇರುವ ಬಸ್ ನಿಲ್ದಾಣದಲ್ಲಿ ಶೌಚಕ್ಕೂ ನೀರು ಇಲ್ಲದೆ ಜನತೆ ಪರಿತಪಿಸುವಂತಾಗಿದೆ.

    ತಾಲೂಕಿನಲ್ಲಿ ವಿಶ್ವವಿಖ್ಯಾತ ಆಲಮಟ್ಟಿ ಜಲಾಶಯ, ಸಮೀಪದ ಕೂಡಗಿ ಎನ್‌ಟಿಪಿಸಿ ಉಷ್ಣವಿದ್ಯುತ್ ಸ್ಥಾವರ ಹಾಗೂ ನೆರೆ ರಾಜ್ಯಗಳಿಗೆ ಸಂಪರ್ಕದ ಕೊಂಡಿಯಾದ ನಿಡಗುಂದಿ ಬಸ್ ನಿಲ್ದಾಣ ಸದಾ ಜನರಿಂದ ಗಿಜಿಗುಡುತ್ತಿರುತ್ತದೆ. ಆದರೆ, ಜನದಟ್ಟಣೆಯ ನಿಲ್ದಾಣದಲ್ಲಿ ಕುಡಿಯುವ ನೀರಿಲ್ಲ. ಪಾರ್ಕಿಂಗ್ ಇಲ್ಲ. ಅಷ್ಟೆ ಅಲ್ಲದೆ ಪ್ರಯಾಣಿಕರು ನೆಮ್ಮದಿಯಾಗಿ ಶೌಚಕ್ಕೂ ಹೋಗದ ಸ್ಥಿತಿ ನಿರ್ಮಾಣವಾಗಿದೆ. ಆವರಣದಲ್ಲಿ ಸ್ವಚ್ಚತೆ ಮರೀಚಿಕೆಯಾಗಿದೆ. ನಿಲ್ದಾಣದಲ್ಲಿನ ಮಳಿಗೆಗಳಿಂದಲೇ ಪ್ರತಿತಿಂಗಳು ಅರ್ಧ ಲಕ್ಷಕ್ಕೂ ಹೆಚ್ಚಿನ ಆದಾಯ ಪಡೆಯುವ ಸಾರಿಗೆ ಇಲಾಖೆ ನಿಲ್ದಾಣಕ್ಕೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ಹಿಂದೇಟು ಹಾಕುತ್ತಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಇಲ್ಲಿನ ಶೌಚಗೃಹ ನೀರಿಲ್ಲದೇ ಗಬ್ಬೆದ್ದು, ನಾರುತ್ತಿದೆ. ನಿರಂತರ ನೀರಿನ ವ್ಯವಸ್ಥೆಯಿದ್ದರೆ ಶೌಚಗೃಹ ಶುಚಿಯಾಗಿರಲು ಸಾಧ್ಯ. ನೀರಿನ ವ್ಯವಸ್ಥೆ ಕಲ್ಪಿಸದ ಪರಿಣಾಮ ನೆಮ್ಮದಿ ಶೌಚಕ್ಕೂ ಪರದಾಡುವ ಸ್ಥಿತಿ ಪ್ರಯಾಣಿಕರದ್ದಾಗಿದೆ. ಆವರಣದಲ್ಲಿ ಬೈಕ್ ಪಾರ್ಕಿಂಗ್ ಇಲ್ಲದೇ ಬೈಕ್ ಸವಾರರು ಅಡ್ಡಾದಿಡ್ಡಿ ಬೈಕ್ ನಿಲ್ಲಿಸುವುದು ಸಾಮಾನ್ಯವಾಗಿದೆ. ಇದರಿಂದ ಬಸ್ ಚಾಲಕರು, ಬೈಕ್ ಸವಾರರ ಮಧ್ಯೆ ಸಾಕಷ್ಟು ವಾಗ್ವಾದ ನಡೆದಿದೆ. ಯಾರೇನೇ ಅಂದ್ರು ನಮ್ಮ ನೆಮ್ಮದಿಗೆ ಭಂಗವಿಲ್ಲ ಎನ್ನುವಂತೆ ಸಾರಿಗೆ ಇಲಾಖೆ ಅಧಿಕಾರಿಗಳು ಮಾತ್ರ ಗಾಢನಿದ್ರೆಗೆ ಜಾರಿದ್ದಾರೆ ಎನ್ನುವ ಆರೋಪ ಜನರಿಂದ ಕೇಳಿಬರುತ್ತಿವೆ.

    ಸಿಸಿ ಕ್ಯಾಮರಾ ಅಳವಡಿಗೆ ಒತ್ತಾಯ: ಬಸ್‌ನಿಲ್ದಾಣದ ಆವರಣದಲ್ಲಿ ನಿರಂತರ ಮೊಬೈಲ್ ಹಾಗೂ ಬೈಕ್‌ಗಳು ಕಳ್ಳತನವಾಗುತ್ತವೆ. ಮೊಬೈಲ್ ಕಳ್ಳರ ಕೈಚಳಕವಂತು ವೇಗವಾಗಿದ್ದು, ಕ್ಷಣಾರ್ಧದಲ್ಲಿ ಮೊಬೈಲ್ ಕಳ್ಳತನವಾಗುತ್ತದೆ. ಪ್ರಯಾಣಿಕರು ಎಷ್ಟೆ ಎಚ್ಚರಿಕೆಯಿಂದ ಇದ್ದರೂ ಮೊಬೈಲ್ ಕಳ್ಳರ ಜಾಲದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ನಿಲ್ದಾಣದಲ್ಲಿ ಸಿಸಿ ಕ್ಯಾಮರಾ ಅಳವಡಿಸದ ಪರಿಣಾಮ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ. ಕಳ್ಳರ ಪತ್ತೆಗೆ ಸಿಸಿ ಕ್ಯಾಮರಾ ಅಳವಡಿಕೆಯ ಅವಶ್ಯತೆ ಹೆಚ್ಚಾಗಿದ್ದು, ಕೂಡಲೇ ಸಿಸಿ ಕ್ಯಾಮರಾ ಅಳವಡಿಕೆಗೆ ಜನತೆ ಒತ್ತಾಯಿಸುತ್ತಿದ್ದಾರೆ.

    ಬಸ್ ನಿಲ್ದಾಣದ ಸಮಸ್ಯೆ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಆಗೊಮ್ಮೆ ಇಗೊಮ್ಮೆ ಕರೆ ಸ್ವೀಕರಿಸುವ ಅಧಿಕಾರಿಗಳು ಜನರ ಸಮಸ್ಯೆ ಪರಿಹಾರ ಮಾಡುತ್ತಿಲ್ಲ. ಶೌಚಗೃಹ ನಿರ್ವಹಣೆ ಪಡೆದವರಿಗೆ ನೀರಿನ ವ್ಯವಸ್ಥೆಯಿಲ್ಲದ ಪರಿಣಾಮ ಶೌಚಗೃಹ ಮಲೀನವಾಗಿದೆ. ಸಮಸ್ಯೆಗಳನ್ನು ಶೀಘ್ರ ಪರಿಹಾರ ಮಾಡಬೇಕು.
    ಪ್ರಲ್ಹಾದ ಕರಿಯಣ್ಣವರ, ಸಾಮಾಜಿಕ ಹೋರಾಟಗಾರ ನಿಡಗುಂದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts