More

    ದೇಶವನ್ನು ಅಪೌಷ್ಟಿಕತೆಯಿಂದ ಮುಕ್ತಗೊಳಿಸಿ

    ಗದಗ: ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಪೌಷ್ಟಿಕ ಆಹಾರದ ಜತೆಗೆ ಸೂಕ್ತ ಚಿಕಿತ್ಸೆ ನೀಡಬೇಕು. ಈ ಮೂಲಕ ದೇಶವನ್ನು ಅಪೌಷ್ಟಿಕತೆಯಿಂದ ಮುಕ್ತಗೊಳಿಸಿ ಬಲಿಷ್ಠ ರಾಷ್ಟ್ರ ನಿರ್ವಿುಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ರಾಜಶೇಖರ ಪಾಟೀಲ ಹೇಳಿದರು.

    ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಪೋಷಣ ಮಾಸಾಚರಣೆ ಹಾಗೂ ಪೋಷಣ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಬಡತನ ರೇಖೆಗಿಂತ ಕೆಳಗಿರುವ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಆರೋಗ್ಯವಂತರಾದರೆ, ದೇಶ ಉಜ್ವಲ ಭವಿಷ್ಯ ಹೊಂದಲು ಸಾಧ್ಯ ಎಂದರು. ಅಭಿಯಾನದ ಉದ್ದೇಶ ಪ್ರತಿ ಹಳ್ಳಿಗಳ ಮನೆ ಮನೆಗೂ ತಲುಪಬೇಕು. ಇದೊಂದು ನಿರಂತರ ಅಭಿಯಾನವಾಗಿದ್ದು, ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಜತೆಗೆ, ಜನರಲ್ಲಿ ಅರಿವು ಮೂಡಿಸಬೇಕು. ಪೋಷಣ ಅಭಿಯಾನವು ಕೇವಲ ಒಂದು ಕಾರ್ಯಕ್ರಮವಲ್ಲ, ಬದಲಿಗೆ ಅದೊಂದು ಜನಾಂದೋಲನ ಮತ್ತು ಸಹಭಾಗಿತ್ವ ಆಗಿದೆ. ಸಂಬಂಧಿಸಿದ ಅಧಿಕಾರಿಗಳ ಸಮನ್ವಯತೆ, ಜನರ ಸಹಕಾರದೊಂದಿಗೆ ಕಾರ್ಯ ನಿರ್ವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ನ್ಯಾಯಾಧೀಶರು ಸಲಹೆ ನೀಡಿದರು.

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಎಚ್.ಎಚ್. ಕುಕನೂರ ಮಾತನಾಡಿ, ಅಪೌಷ್ಟಿಕತೆಯನ್ನ ದೂರಗೊಳಿಸಿ ದೇಶದ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕಬೇಕು. ದೇಶದಲ್ಲಿ ಕುಬ್ಜ, ಅಪೌಷ್ಟಿಕ, ರಕ್ತಹೀನ, ತೂಕ ಕಡಿಮೆ ಇರುವ ಶಿಶುಗಳ ಸಂಖ್ಯೆಯ ಪ್ರಮಾಣ ಕಡಿಮೆಗೊಳಿಸವುದು ಪೋಷಣ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

    ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಆನಂದ್ ಕೆ. ಪೋಷಣ್ ಮಾಸಾಚರಣೆಯ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿದರು. ಅಂಗನವಾಡಿ ಮೇಲ್ವಿಚಾರಕಿಯರು, ಕಾರ್ಯಕರ್ತೆಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿ ಇದ್ದರು.

    ಮನೆ ಮನೆಗೆ ತಲುಪಲಿ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ. ಸಲಗರೆ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದಲ್ಲಿ ಅಪೌಷ್ಟಿಕತೆಯಿಂದ ಮಕ್ಕಳ ಸಾವು ತಡೆಗಟ್ಟುವ ಸಲುವಾಗಿ ಪ್ರತಿವರ್ಷ ದೇಶಾದ್ಯಂತ ಸೆಪ್ಟೆಂಬರ್ ತಿಂಗಳನ್ನು ರಾಷ್ಟ್ರೀಯ ಪೋಷಣ ಮಾಸವನ್ನಾಗಿ ಆಚರಿಸಲಾಗುತ್ತದೆ. ಇದರ ಉದ್ದೇಶ ಎಲ್ಲರನ್ನೂ ತಲುಪಬೇಕು. ಜನರಲ್ಲಿ ಪೌಷ್ಟಿಕ ಆಹಾರದ ಬಗ್ಗೆ ಜಾಗೃತಿ ಮೂಡಿಸಬೇಕು. ಈ ಹಿನ್ನೆಲೆಯಲ್ಲಿ ಪೋಷಣಾ ರಥದ ಮೂಲಕ ಪ್ರತಿ ಮನೆ ಮನೆಗೂ ಕಾರ್ಯಕ್ರಮ ತಲುಪಿಸಲಾಗುತ್ತಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts