More

    ದೇಶಪ್ರೇಮ ನಿತ್ಯ ಆಚರಣೆ ಆಗಲಿ

    ಶಿವಮೊಗ್ಗ: ನಾವು ಪ್ರತಿಕ್ಷಣ ಸಮಾಜದ ಹಿತಕ್ಕಾಗಿ ಬದುಕಬೇಕು. ದಾವೂದ್ ಇಬ್ರಾಹಿಂನಂತೆ ಜೀವನ ಸಾಗಿಸದೆ ಅಬ್ದುಲ್ ಕಲಾಂರಂತೆ ಬದುಕು ನಡೆಸಬೇಕು ಎಂದು ಶಿಕ್ಷಣ ಸಚಿವ ಎಸ್.ಸುರೇಶ್​ಕುಮಾರ್ ಸಲಹೆ ನೀಡಿದರು.

    ಶಿಕಾರಿಪುರದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆಯಲ್ಲಿ ವಿವೇಕಾನಂದರ ಕುರಿತ ‘ವಿವೇಕಾಂಜಲಿ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳುವುದೇ ನಿಜವಾದ ದೇಶಪ್ರೇಮ ಎಂದರು.

    ಇಂದು ನೀರಿನ ಸಂರಕ್ಷಣೆ ಅವಶ್ಯಕವಾಗಿದೆ. ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಹೀಗಾಗಿ ಜಲ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಅರಣ್ಯ ಸಂರಕ್ಷಣೆಗೆ ಒತ್ತು ನೀಡಬೇಕು. ಗುರು-ಹಿರಿಯರನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಸದೃಢ ಸಮಾಜಕ್ಕಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು.

    ಭಾರತ ಎಂಬುದು ಕೇವಲ ಭೂ ಭಾಗವಲ್ಲ. ಇಲ್ಲಿನ ಹನಿ ನೀರಿನಲ್ಲಿ ಗಂಗೆ ಇದ್ದಾಳೆ. ಮಣ್ಣಿನ ಕಣಕಣದಲ್ಲೂ ದೇವರಿದ್ದಾನೆ. ಈ ನೆಲದಲ್ಲಿ ಮಹಾನ್ ಪುರುಷರು ಆಗಿ ಹೋಗಿದ್ದಾರೆ. ಆದರೆ ನಮ್ಮ ಸಂಸ್ಕೃತಿಯನ್ನು ನಾವು ಮರೆಯುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

    ಸ್ವಾತಂತ್ರ್ಯೊತ್ಸವದ ಸಂಭ್ರಮಾಚರಣೆ, ನಮ್ಮ ದೇಶದ ಕ್ರಿಕೆಟ್ ತಂಡ ಪಾಕಿಸ್ತಾನದ ವಿರುದ್ಧ ಸಂಭ್ರಮಿಸುವುದು ದೇಶ ಪ್ರೇಮ. ಆದರೆ ದೇಶ ಪ್ರೇಮವೆಂಬುದು ಪ್ರತಿ ನಿತ್ಯದ ಆಚರಣೆಯಲ್ಲಿ ಕಾಣುವಂತಾಗಬೇಕು. ನಾವು ಒಳ್ಳೆಯವರಾಗಿದ್ದು ಸಮಾಜಕ್ಕೆ ಒಳಿತನ್ನು ಮಾಡಿದಾಗ ದೇಶಪ್ರೇಮ ಸಾಕಾರಗೊಳ್ಳುತ್ತದೆ ಎಂದರು.

    ಕಾರ್ಯಕ್ರಮ ಉದ್ಘಾಟಿಸಿದ ವಿವೇಕಾನಂದ ವಿದ್ಯಾಸಂಸ್ಥೆ ಕಾರ್ಯದರ್ಶಿ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಪಾಶ್ಚಿಮಾತ್ಯರ ಅನುಕರಣೆಯಿಂದ ನಮ್ಮ ಸಂಸ್ಕೃತಿ ಮರೆಯುತ್ತಿದ್ದೇವೆ. ಫಾದರ್ಸ್ ಡೇ, ಮದರ್ಸ್ ಡೇ, ನ್ಯೂ ಇಯರ್ ಆಚರಣೆಗಳು ಹೆಚ್ಚುತ್ತಿವೆ. ಯುವಕರಲ್ಲಿ ದೇಶಪ್ರೇಮ ಮೂಡಿಸುವ ಸಲುವಾಗಿ ವಿವೇಕಾನಂದರ ಜನ್ಮದಿನವನ್ನು ಯುವ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.

    ಮಾನವ ಜನ್ಮ ಪಡೆದಿರುವ ನಾವು ಉತ್ತಮ ಜೀವನ ಸಾಗಿಸಬೇಕು. ಹರೆಯದಲ್ಲಿ ಶಿಕ್ಷಕರು, ಪಾಲಕರು ನೀಡುವ ಸಲಹೆ ಸ್ವೀಕರಿಸಬೇಕು. ಎಲ್ಲವನ್ನೂ ತಿರಸ್ಕರಿಸುವ, ನಕಾರಾತ್ಮಕ ದೃಷ್ಟಿಯಿಂದ ನೋಡುವ ಮನೋಭಾವ ಬಿಡಬೇಕು ಎಂದು ತಿಳಿಸಿದರು.

    ಅಲ್ಪಕಾಲ ಜೀವಿಸಿದ್ದ ಸ್ವಾಮಿ ವಿವೇಕಾನಂದರು ಭಾರತದ ಪ್ರತಿಷ್ಠೆಯನ್ನು ವಿಶ್ವದಲ್ಲಿಯೇ ಎತ್ತಿ ಹಿಡಿದಿದ್ದರು. ಭಾರತ ಎಂಬುದು ಹಾವಾಡಿಗರ ದೇಶ ಎಂದು ಗೇಲಿ ಮಾಡುತ್ತಿದ್ದ ವಿದೇಶಿಯರು ನಮ್ಮ ಸಂಸ್ಕೃತಿಯನ್ನು ಕಂಡು ನಿಬ್ಬೆರಗಾಗಿದ್ದರು. ಭಾರತದಲ್ಲಿ ಅಧ್ಯಾತ್ಮ ಶಕ್ತಿ ಜೀವಂತವಾಗಿರುವವರೆಗೂ ಈ ದೇಶಕ್ಕೆ ಸಾವಿಲ್ಲ ಎಂದು ಪ್ರತಿಪಾದಿಸಿದ್ದು ಸ್ವಾಮಿ ವಿವೇಕಾನಂದರು. ಅವರ ಮಾತುಗಳು ಎಂದಿಗೂ ಸ್ಮರಣೀಯವಾಗಿದೆ ಎಂದರು.

    ವಿವೇಕಾನಂದರು ಚೈತನ್ಯದ ಸ್ವರೂಪ: ವಿವೇಕಾನಂದರು ನಡೆಯುತ್ತಿದ್ದರೆ ಇಡೀ ಭಾರತವೇ ನಡೆದಂತಾಗುತ್ತಿತ್ತು. ವಿವೇಕಾನಂದರು ಉಸಿರಾಡಿದರೆ ಇಡೀ ಭಾರತವೇ ಉಸಿರಾಡಿದಂತೆ ವಿದೇಶಿಗರಿಗೆ ಭಾಸವಾಗುತ್ತಿತ್ತು. ಅವರು ಚೈತನ್ಯದ ಸ್ವರೂಪವಾಗಿದ್ದರು, ಆಧ್ಯಾತ್ಮಿಕ ಲೋಕದ ಸೂರ್ಯಪ್ರಭೆಯಾಗಿ ಕಂಗೊಳಿಸಿದ್ದರು. ಅವರೊಬ್ಬ ಅಪರೂಪದ ಚೇತನವಾಗಿದ್ದರು ಎಂದು ಶ್ರೀ ವಿನಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ಆಶೀರ್ವಚನ ನೀಡಿದ ಅವರು, ವಿವೇಕಾನಂದರನ್ನು ಯಾವುದೇ ಜಾತಿ, ಧರ್ಮ, ಪಂಥಗಳ ಮೂಲಕ ಗುರುತಿಸದೆ ಸಮಷ್ಠಿಯ ಹಿತಕ್ಕಾಗಿಯೇ ಜನ್ಮ ತಾಳಿದರು ಎಂಬ ಕಲ್ಪನೆ ನಮ್ಮ ಮನಸಿನಲ್ಲಿರಬೇಕು. ಅವರು ಸದಾ ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ಯುವಶಕ್ತಿಯ ಸದ್ಬಳಕೆಯಾಗಬೇಕು ಎಂದು ಆಶಿಸುತ್ತಿದ್ದರು..ಅವರು ಸತ್ ಚಿಂತನೆಗಳಿಂದಲೇ ಸದಾ ಪ್ರಕಾಶಿಸುತ್ತಿದ್ದರು ಎಂದು ಹೇಳಿದರು.

    ಹುಚ್ಚರಾಯಸ್ವಾಮಿ ದರ್ಶನ ಪಡೆದ ಸಚಿವರು: ಶಿಕಾರಿಪುರ: ಮುಂಜಾನೆ ಶಿಕಾರಿಪುರಕ್ಕೆ ಆಗಮಿಸಿದ ಸಚಿವ ಸುರೇಶ್​ಕುಮಾರ್ ಅವರು ಬಿ.ವೈ.ರಾಘವೇಂದ್ರ ಜತೆ ಕ್ಷೇತ್ರಾಧಿಪತಿ ಶ್ರೀ ಹುಚ್ಚರಾಯಸ್ವಾಮಿ ದರ್ಶನ ಮಾಡಿದರು. ಈ ಸಂದರ್ಭದಲ್ಲಿ ದೇವಾಲಯ ದ ಇತಿಹಾಸ ತಿಳಿದುಕೊಂಡರು. ಇದು ವ್ಯಾಸರಾಯರ ಪ್ರತಿಷ್ಠೆ ಆಗಿರುವುದರಿಂದ ಮತ್ತು ನಾಸಿಕದ ಮೇಲೆ ಸಾಲಿಗ್ರಾಮ ಇರುವ ಕಾರಣ ಇಲ್ಲಿರುವ ಸ್ವಾಮಿ ಅತ್ಯಂತ ಜಾಗೃತನಾಗಿದ್ದಾನೆ. ಈ ದೇವಾಲಯಕ್ಕೆ ಪಾಳೆಗಾರರ, ಅರಸರ ನಂಟು ಇತ್ತು. ಅವರಿಗೆ ಕಷ್ಟ ಬಂದಾಗಲೆಲ್ಲ ಇಲ್ಲಿಗೆ ಬಂದು ಹರಕೆ ಮಾಡಿಕೊಂಡು ಕಷ್ಟಗಳಿಂದ ಮುಕ್ತರಾಗುತ್ತಿದ್ದರು. ಇಡೀ ತಾಲೂಕಿನ ಜನತೆಯ ಮೇಲೆ ಮತ್ತು ಸಿಎಂ ಕುಟುಂಬದ ಮೇಲೆ ಶ್ರೀ ಸ್ವಾಮಿಯ ಅನುಗ್ರಹವಿದೆ ಎಂದು ರಾಘವೇಂದ್ರ ವಿವರಿಸಿದರು. ಇದೇ ವೇಳೆ ತಾಲೂಕು ಬ್ರಾಹ್ಮಣ ಸಮಾಜದಿಂದ ಸಚಿವರನ್ನು ಸನ್ಮಾನಿಸಲಾಯಿತು.ಬಾಲಕೃಷ್ಣ ಜೋಯ್್ಸ ಶ್ರೀಧರ ನಾಡಿಗ್, ರಾಘವೇಂದ್ರ ತಡಗಣಿ, ಗುರು ತಡಗಣಿ ಮತ್ತು ಪ್ರಧಾನ ಅರ್ಚಕ ಉಮೇಶ್ ಭಟ್, ಗಿರೀಶ್ ಭಟ್, ಶಿವಮೊಗ್ಗ ರಾಮಕೃಷ್ಣಾಶ್ರಮದ ಶ್ರೀ ವಿನಯಾನಂದ ಸರಸ್ವತಿ ಸ್ವಾಮೀಜಿ ವಿಶೇಷ ಉಪನ್ಯಾಸ ನೀಡಿದರು. ಡಿಡಿಪಿಐ ಎನ್.ಎಂ.ರಮೇಶ್, ಶಿಕಾರಿಪುರ ಬಿಇಒ ಕೆ.ಆರ್.ಉಮಾಮಹೇಶ್, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ತೇಜಸ್ವಿನಿ ರಾಘವೇಂದ್ರ. ಪ್ರೊ. ಎಸ್.ಎಸ್.ಗದಗ್, ಕೆ.ಎಸ್.ಗುರುಮೂರ್ತಿ, ಡಾ. ಕೆ.ಎಸ್.ದತ್ತಾತ್ರಿ, ಆರ್.ಎಂ.ಕುಬೇರಪ್ಪ, ಡಾ. ವೀರೇಂದ್ರ. ವಿದ್ಯಾಶಂಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts