More

    ದೇಶದ ಹಿತ ಬಯಸಿದ ಅಂಬೇಡ್ಕರ್

    ಮಂಡ್ಯ: ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದ ಹಿತವನ್ನು ಬಯಸಿದ ಅಪ್ರತಿಮ ರಾಷ್ಟ್ರ ನಾಯಕ ಹಾಗೂ ಪ್ರಜಾಪ್ರಭುತ್ವ ರೂವಾರಿ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಬಣ್ಣಿಸಿದರು.
    ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಕಾವೇರಿ ಉದ್ಯಾನದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 132ನೇ ಜಯಂತ್ಯುತ್ಸವದಲ್ಲಿ ಉಪನ್ಯಾಸ ನೀಡಿದರು. ಅಂಬೇಡ್ಕರ್ ಅವರನ್ನು ನಾವು ದೇಶಕ್ಕೆ ಮತ್ತೊಮ್ಮೆ ಪರಿಚಯಿಸುವ ಅಗತ್ಯವಿಲ್ಲ. ಅವರು ದೇಶಕ್ಕೆ ನೀಡಿದ ಕೊಡುಗೆಗಳಿಂದ ಈಗಾಗಲೇ ಜಗತ್ತಿಗೆ ಪರಿಚಯವಾಗಿದೆ ಎಂದರು.
    ಶಿಕ್ಷಣ ಒಬ್ಬ ವ್ಯಕ್ತಿಯನ್ನು ಮುಕ್ತ ಮನಸ್ಸಿನಿಂದ ತಾರ್ಕಿಕ ಹಾಗೂ ಮುಕ್ತವಾಗಿ ಆಲೋಚಿಸುವಂತೆ ಮಾಡುವುದೇ ಆಗಿದೆ. ಶಿಕ್ಷಣ ಪಡೆದು ಪ್ರತಿ ವ್ಯಕ್ತಿಯೂ ಸಮಾಜದಲ್ಲಿ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ನೈತಿಕವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಇದರಿಂದ ಸದೃಢ ಸಮಾಜ ಮತ್ತು ರಾಷ್ಟ್ರವನ್ನು ಕಟ್ಟುವುದು ಸುಲಭವಾಗುತ್ತದೆ. ಶಿಕ್ಷಣ ಪಡೆದು ನಿಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವ ಹೋರಾಟಗಾರರಾಗಬೇಕಿದೆ ಎಂದು ಅಂಬೇಡ್ಕರ್ ಅವರು ಅಭಿಪ್ರಾಯಪಟ್ಟಿದ್ದರು. ಹಾಗಾಗಿ ಎಲ್ಲರೂ ಶಿಕ್ಷಣ ಪಡೆದು ಹೋರಾಟಗಳ ಮೂಲಕ ತಮ್ಮ ಹಕ್ಕು ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
    ಭಾರತದಲ್ಲಿ ಹುಟ್ಟಿದ ಗೌತಮ ಬುದ್ಧ, ಸ್ವಾಮಿ ವಿವೇಕಾನಂದ, ಮಹಾತ್ಮಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆಗಳನ್ನು ನೀಡಿ ಜನಸಾಮಾನ್ಯರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ರಾಜಕೀಯ ಸ್ವಾತಂತ್ರ್ಯದ ಜತೆಗೆ ವ್ಯಕ್ತಿಗೆ ಗೌರವ ತಂದುಕೊಡುವ ಸಾಮಾಜಿಕ ಸ್ವಾತಂತ್ರ್ಯಬೇಕೆಂದು ಚಳವಳಿಯ ಸಮಯದಲ್ಲಿಯೇ ಪ್ರತಿಪಾದಿಸಿದರು. ಅಂಬೇಡ್ಕರ್ ಅವರು ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯ ಹಾಗೂ ಲಂಡನ್‌ನ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಸಂಶೋಧನೆ ನಡೆಸಿ ಅರ್ಥಶಾಸ್ತ್ರದಲ್ಲಿ ಪ್ರೌಢ ಪ್ರಬಂಧಗಳನ್ನು ಮಂಡಿಸಿದ್ದರು. ಅದಕ್ಕೆ ಮಾನ್ಯತೆ ಗಳಿಸಿದ್ದರು. ರೂಪಾಯಿಯ ಸಮಸ್ಯೆಗಳು, ಅದರ ಉಗಮ ಮತ್ತು ಪರಿಹಾರ ಕೃತಿಯು ಪ್ರಸ್ತುತವಾಗಿದೆ. ಉದ್ಯೋಗಿಗಳನ್ನು ಉದ್ಯಮಿಗಳು ಶೋಷಿಸಬಾರದೆಂದು ಕಠಿಣ ಕಾನೂನುಗಳನ್ನು ಸರ್ಕಾರ ರೂಪಿಸಬೇಕೆಂದು ಅಂಬೇಡ್ಕರ್ ಅವರು ಪ್ರತಿಪಾದಿಸಿದರು ಎಂದು ವಿವರಿಸಿದರು.
    ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಸಾಮಾಜಿಕ, ಸಮಾನತೆ, ಅಸ್ಪೃಶ್ಯತಾ ನಿವಾರಣೆ ಹಾಗೂ ದೀನ ದಲಿತರನ್ನು ಸಮಾಜದ ಮುಖ್ಯವಾಹಿನಿಗೆ ಕರೆ ತರಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅವರು ತಮ್ಮ ಜೀವನದುದ್ದಕ್ಕೂ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿ ಶಿಕ್ಷಣ ಪಡೆದು ಬೃಹಾದಾಕಾರವಾಗಿ ಬೆಳೆದು ಸ್ವಾತಂತ್ರ್ಯ ಬಂದ ನಂತರ ಇಡೀ ಭಾರತಕ್ಕೆ ವಿಶ್ವವೇ ಹೆಮ್ಮೆ ಪಡುವಂತಹ ಸಂವಿಧಾನವನ್ನು ರಚಿಸಿದ್ದಾರೆ ಎಂದರು.
    ಸರ್ಕಾರ ಹಾಗೂ ಸಾರ್ವಜನಿಕರು ಅವರ ತತ್ವ ಆದರ್ಶಗಳನ್ನು ಪಾಲನೆ ಮಾಡುತ್ತಾ ಅಂಬೇಡ್ಕರ್ ತೋರಿಸಿಕೊಟ್ಟ ದಿಕ್ಕಿನಲ್ಲಿ ನಡೆಯಬೇಕಿದೆ. ಭಾರತ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುವುದರ ಜತೆಗೆ ಹಿಂದುಳಿದ ರಾಷ್ಟ್ರದಿಂದ ಮುಂದುವರಿದ ರಾಷ್ಟ್ರವಾಗಿ ಮಾರ್ಪಾಡಾಗುತ್ತಿದೆ. ಇದಕ್ಕೆ ಬಾಬಾ ಸಾಹೇಬರ ಕೊಡುಗೆ ಬಹಳ ಅನನ್ಯವಾದುದು. ಭಾರತ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ನಾವೆಲ್ಲ ಒಟ್ಟಾಗಿ ದುಡಿದು ಅವರ ಸಮಸಮಾಜದ ಕನಸನ್ನು ನನಸು ಮಾಡೋಣ ಎಂದು ಹೇಳಿದರು.
    ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಅಂಬೇಡ್ಕರ್ ಅವರು ಒಂದೇ ಧರ್ಮ ಜಾತಿ ಅಥವಾ ಜನಾಂಗಕ್ಕೆ ಸೇರಿದವರಲ್ಲ. ಅವರು ಎಲ್ಲ ವರ್ಗದ ಜನರಿಗೂ ನ್ಯಾಯ ದೊರಕಿಸಿಕೊಟ್ಟಿದ್ದಾರೆ. ಆದ್ದರಿಂದಲೇ ಅವರು ಪ್ರಪಂಚದ ಆಸ್ತಿಯಾಗಿದ್ದಾರೆ ಎಂದು ಬಣ್ಣಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಮಂಡ್ಯ ಉಪವಿಭಾಗಾಧಿಕಾರಿ ಎಚ್.ಎಸ್.ಕೀರ್ತನಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಾ.ಸಿದ್ದಲಿಂಗೇಶ್, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ, ಡಿಡಿಪಿಐ ಜವರೇಗೌಡ, ತಹಸೀಲ್ದಾರ್ ಆರ್.ವಿಜಯ್‌ಕುಮಾರ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕಾವ್ಯಶ್ರೀ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts