More

    ದೇಶದ ಭವಿಷ್ಯದ ಚುನಾವಣೆ ಇದು

    ಚಿತ್ರದುರ್ಗ: ದೇಶದ ಭವಿಷ್ಯ ನಿರ್ಧರಿಸುವ ಲೋಕಸಭಾ ಚುನಾವಣೆ ಇದಾಗಿದ್ದು, ಸುಭದ್ರತೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಜನ ಬಿಜೆಪಿಗೆ ಮತಾಶೀರ್ವಾದ ಮಾಡುತ್ತಾರೆ. 28 ಕ್ಷೇತ್ರವನ್ನು ಗೆಲ್ಲುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

    ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು ಗುರುವಾರ ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಅವರು, ರಾಜ್ಯಾದ್ಯಂತ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಪರ ಉತ್ತಮ ವಾತಾವರಣವಿದೆ ಎಂದರು.

    ರಾಜ್ಯಾದ್ಯಂತ ಬರದ ಸಂದರ್ಭದಲ್ಲಿ ಅಲ್ಪಸಂಖ್ಯಾತರ ತುಷ್ಠೀಕರಣಕ್ಕೆ ಸರ್ಕಾರ ಮುಂದಾಗಿದೆ. ಎಸ್ಸಿಇಪಿ-ಟಿಎಸ್‌ಪಿಗೆ ಮೀಸಲಿರುವ 24 ಸಾವಿರ ಕೋಟಿ ರೂ. ವರ್ಗಾವಣೆ ಮಾಡಿದೆ. ರಾಜ್ಯ ಸರ್ಕಾರದ ನಡೆಯನ್ನು ನಾಡಿನ ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಯಾವ ಮುಖ ಇಟ್ಟುಕೊಂಡು ಕೈ ನಾಯಕರು ಚುನಾವಣೆಗೆ ಹೊರಟಿದ್ದಾರೆ ಎಂದು ಪ್ರಶ್ನಿಸಿದರು.

    ಕ್ಷೇತ್ರದ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು ರಾಜಕೀಯದಲ್ಲಿ ಅಜಾತ ಶತ್ರು. ಮತದಾರರು ಅವರನ್ನು ಕೈಹಿಡಿಯುವ ವಿಶ್ವಾಸವಿದೆ. ಕಾಂಗ್ರೆಸ್ ಸರ್ಕಾರದಲ್ಲೇ ಸಿಎಂ ಬದಲಾವಣೆಗೆ ಸಾಕಷ್ಟು ಹುನ್ನಾರ ನಡೆಯುತ್ತಿರುವ ಮಾಹಿತಿ ಇದೆ ಎಂದರು.

    ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ, ಇಡೀ ದೇಶದ ಜನ ನರೇಂದ್ರಮೋದಿ ಅವರನ್ನು 3ನೇ ಬಾರಿ ಪ್ರಧಾನಿಯಾಗಿಸಲು ತೀರ್ಮಾನಿಸಿದ್ದಾರೆ. ಭಾರತ ಮಾತೆಯ ಕೊರಳಿನ ಮಾಲೆಯಾಗಿ ಕಮಲ ಸೇರಲಿದೆ. ಅದರಲ್ಲಿ ಚಿತ್ರದುರ್ಗ ಕ್ಷೇತ್ರವೂ ಇರಲಿದೆ ಎಂದರು.

    ದೇಶಕ್ಕೆ ಮೋದಿಯೇ ಗ್ಯಾರಂಟಿ: ಎಂಎಲ್ಸಿ ಎನ್.ರವಿಕುಮಾರ್ ಮಾತನಾಡಿ, ಕೈ ಗ್ಯಾರಂಟಿ ಎಲ್ಲರಿಗೂ ತಲುಪುತ್ತಿಲ್ಲ. ಆದರೆ, ರೈತರು, ಬಡವರು, ಶ್ರಮಿಕ ವರ್ಗ, ಮಹಿಳೆಯರು, ಸೈನಿಕರು ಸೇರಿ ಎಲ್ಲರ ಹಿತ ಕಾಯಲು ಮೋದಿಯೇ ಗ್ಯಾರಂಟಿ. ಕೃಷಿ ಸಮ್ಮಾನ್ ಯೋಜನೆಯಡಿ ರೈತರ ಖಾತೆಗೆ 6ಸಾವಿರ ರೂ. ನೀಡುತ್ತಿದ್ದಾರೆ. ಇದರ ಜೊತೆಗೆ ಬಿಎಸ್‌ವೈ ಸಿಎಂ ಆಗಿದ್ದಾಗ ಕೊಡುತ್ತಿದ್ದ 4ಸಾವಿರ ರೂ. ಸ್ಥಗಿತಗೊಳಿಸಿದ್ದು ಯಾರು. ಮದ್ಯದ ದರ ಹೆಚ್ಚಿಸಿ ಮದ್ಯಪ್ರಿಯರಿಗೆ, ಇನ್ನಿತರೆ ತೆರಿಗೆ ದರ ಹೆಚ್ಚಿಸಿ ಪುರುಷರ ಜೇಬಿನಿಂದ ಕಸಿದು ಮಹಿಳೆಯರಿಗೆ ಗ್ಯಾರಂಟಿ ಕೊಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

    ಜೆಡಿಎಸ್ ಮಾಜಿ ಶಾಸಕ ತಿಮ್ಮರಾಯಪ್ಪ ಮಾತನಾಡಿ, ಪ್ರಧಾನಿ ಮೋದಿ, ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂಗಳಾದ ಬಿಎಸ್‌ವೈ, ಕುಮಾರಣ್ಣ, ಸದಾನಂದಗೌಡರು ದೇಶ ಮತ್ತು ರಾಜ್ಯಕ್ಕೆ ನೀಡಿದ ಕೊಡುಗೆ ತಿಳಿಸುವ ಮೂಲಕ ಕಾರ್ಯಕರ್ತರು ಮತಯಾಚಿಸಿ ಎಂದು ಮನವಿ ಮಾಡಿದರು.

    ಮಾಜಿ ಸಿಎಂ ಸದಾನಂದಗೌಡ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಮಾಜಿ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಬಿ.ಶ್ರೀರಾಮುಲು, ಶಾಸಕ ಡಾ.ಎಂ.ಚಂದ್ರಪ್ಪ, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ತಿಪ್ಪೇಸ್ವಾಮಿ, ಎಸ್.ಕೆ.ಬಸವರಾಜನ್, ಮಾಜಿ ಸಂಸದ ಜನಾರ್ದನಸ್ವಾಮಿ, ಎಂಎಲ್ಸಿಗಳಾದ ಕೆ.ಎಸ್.ನವೀನ್, ವೈ.ಎ.ನಾರಾಯಣಸ್ವಾಮಿ, ಚಿದಾನಂದ ಗೌಡ, ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಬಿಜೆಪಿ ಚಿತ್ರದುರ್ಗ ಜಿಲ್ಲಾಧ್ಯಕ್ಷ ಎ.ಮುರಳಿ, ಮಧುಗಿರಿ ಜಿಲ್ಲಾಧ್ಯಕ್ಷ ಹನುಮಂತೆಗೌಡ್ರು, ಜೆಡಿಎಸ್ ಜಿಲ್ಲಾಧ್ಯಕ್ಷ ಜಯಣ್ಣ, ತುಮಕೂರು ಅಧ್ಯಕ್ಷ ಅಂಜಿನಪ್ಪ, ಮುಖಂಡರಾದ ಬಿ.ಕಾಂತರಾಜ್, ಯಶೋಧರ್, ರವೀಶ್, ರವೀಂದ್ರ, ತಿಪ್ಪೇಸ್ವಾಮಿ, ಗೋಪಾಲಸ್ವಾಮಿ ನಾಯಕ, ಭಾರ್ಗವಿ ದ್ರಾವಿಡ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts