More

    ದೇಶದ ಗಮನ ಸೆಳೆದ ಗ್ಯಾರಂಟಿಗಳು -ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಬಣ್ಣನೆ – ಗೃಹಜ್ಯೋತಿ ಯೋಜನೆಗೆ ಚಾಲನೆ

    ದಾವಣಗೆರೆ: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಡವರ ಪರವಾಗಿ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳಿಂದಾಗಿ ದೇಶವೇ ಕರ್ನಾಟಕದತ್ತ ನೋಡುವಂತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಬಣ್ಣಿಸಿದರು.
    ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಭಾನುವಾರ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
    ಜಿಲ್ಲೆಯಲ್ಲಿ 3.48 ಲಕ್ಷ ಗ್ರಾಹಕರು ಇದುವರೆಗೆ ಗೃಹಜ್ಯೋತಿ ಯೋಜನೆಯ ಲಾಭ ಪಡೆದಿದ್ದಾರೆ. ಇದರಿಂದ ಜನರ ಹಣ ಉಳಿತಾಯವಾಗಿದೆ. ಶಕ್ತಿ ಯೋಜನೆಯಿಂದಾಗಿ ಮಹಿಳೆಯರು ತೀರ್ಥಕ್ಷೇತ್ರಗಳಿಗೆ ಉಚಿತವಾಗಿ ಹೋಗಿಬರುವ ವ್ಯವಸ್ಥೆಯಾಗಿದೆ. ಇದರಿಂದ ದೇವಸ್ಥಾನಗಳ ಆದಾಯ ಕೂಡ ಹೆಚ್ಚಿದೆ. ಗೃಹಲಕ್ಷ್ಮೀ ಯೋಜನೆಯಡಿ ವಾರ್ಷಿಕ 24 ಸಾವಿರ ರೂ. ಹಣ ಮನೆ ಯಜಮಾನಿಗೆ ತಲುಪಲಿದೆ. ಇದೂ ಕೂಡ ಕುಟುಂಬದ ವೆಚ್ಚ, ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ ಎಂದರು.
    ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಗ್ಯಾರಂಟಿ ಯೋಜನೆಗಳ ಹಣವನ್ನು ಬ್ಯಾಂಕ್ ಸಾಲಕ್ಕೆ ತೀರುವಳಿ ಮಾಡದಿರಲು ಲೀಡ್‌ಬ್ಯಾಂಕ್‌ಗೆ ಸೂಚನೆ ನೀಡುವಂತೆ ಡಿಸಿಗೆ ತಿಳಿಸಿದರು.
    ಜಗಳೂರು ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ, ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಗೃಹಜ್ಯೋತಿ ಯೋಜನೆಯ ಗುಣಗಾನ ಮಾಡಿದರು.
    ಹರಿಹರ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಗೃಹಜ್ಯೋತಿ ಯೋಜನೆಯಡಿ ಕೆಲವರಿಗೆ ಹೆಚ್ಚು ಬಿಲ್ ಬರುತ್ತಿರುವ ಆರೋಪಗಳಿವೆ. ಹೀಗಾಗದಂತೆ ಎಚ್ಚರ ವಹಿಸಬೇಕು ಎಂದರು.
    ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ಪ್ರಾಸ್ತಾವಿಕ ಮಾತನಾಡಿದರು. ಮಾಜಿ ಶಾಸಕ ಎಸ್.ರಾಮಪ್ಪ, ಪಾಲಿಕೆ ಮೇಯರ್ ಬಿ.ಎಚ್.ವಿನಾಯಕ, ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ, ಜಿಪಂ ಸಿಇಒ ಸುರೇಶ್ ಇಟ್ನಾಳ್, ಎಎಸ್ಪಿ ರಾಮಗೊಂಡ ಬಸರಗಿ, ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಬಿ.ಎಸ್.ಜಗದೀಶ್ ಇದ್ದರು.

    * ಬಾಕ್ಸ್
    ಭದ್ರಾ ನಾಲೆಗೆ 10ರಿಂದ ನೀರು
    ಮುಂಗಾರು ಹಂಗಾಮಿನ ಬೆಳೆಗಳಿಗೆ ಆ.10ರಿಂದ ಭದ್ರಾ ಜಲಾಶಯದ ನೀರು ಹರಿಸಲು ಸರ್ಕಾರ ನಿರ್ಧರಿಸಿದೆ. ಈ ಕುರಿತಂತೆ ಶೀಘ್ರವೇ ಸರ್ಕಾರಿ ಆದೇಶ ಹೊರಬೀಳಲಿದೆ ಎಂದು ಸಚಿವರು ಇದೇ ವೇಳೆ ಹೇಳಿದರು.
    —–
    * ಬಾಕ್ಸ್
    ಉತ್ತಮ ಅಭ್ಯರ್ಥಿಗೆ ಹುಡುಕಾಟ
    ಲೋಕಸಭೆಗೆ ಕಾಂಗ್ರೆಸ್‌ನಿಂದ ಉತ್ತಮ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ. ಕಾರ್ಯಕರ್ತರು, ತಾಯಂದಿರು ಕಾಂಗ್ರೆಸ್ ಗೆಲುವಿಗೆ ಶ್ರಮಿಸಬೇಕು ಎಂದು ಎಸ್ಸೆಸ್ಸೆಂ ಹೇಳಿದರು. ಶಾಸಕ ಹರೀಶ್ ನಾವೂ ಪ್ರಬಲ ಅಭ್ಯರ್ಥಿಯನ್ನು ನಿಲ್ಲಿಸುತ್ತೇವೆ ಎಂದಾಗ ಮಲ್ಲಿಕಾರ್ಜುನ್ ‘ನಾವಾ-ನೀವಾ ನೋಡಿಯೇ ಬಿಡೋಣ’ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts