More

    ದೇಶಕ್ಕೆ 5 ಗ್ಯಾರಂಟಿ ನೀಡಲು ಕೈ ಬದ್ಧ

    ಚಿತ್ರದುರ್ಗ: ರಾಜ್ಯದಂತೆ ದೇಶಕ್ಕೂ 5 ಗ್ಯಾರಂಟಿ ನೀಡಲು ಕಾಂಗ್ರೆಸ್ ಬದ್ಧವಾಗಿದ್ದು, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಖಂಡಿತವಾಗಿಯೂ ಅನುಷ್ಠಾನಕ್ಕೆ ತರುತ್ತೇವೆ. ಅದರಲ್ಲಿ ಅನುಮಾನವಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಭರವಸೆ ನೀಡಿದರು.

    ಶುಕ್ರವಾರ ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿ, ರಾಜ್ಯದ ಗೃಹಲಕ್ಷಿ ಮಾಸಿಕ 2ಸಾವಿರ ರೂ. ಜತೆಗೆ ಕೇಂದ್ರದಿಂದ ಮಹಾಲಕ್ಷ್ಮಿ ಯೋಜನೆಯಡಿ 8,300 ನೀಡಲಾಗುವುದು. ಇದರಿಂದ ದೇಶದ ನಾರಿಯರು ಸಬಲರಾಗಲು ಸಹಕಾರಿಯಾಗಲಿದೆ ಎಂದರು.

    ಎಸ್ಸಿ, ಎಸ್ಟಿ, ಹಿಂದುಳಿದ ಸೇರಿ ಎಲ್ಲ ವರ್ಗದ ಬಡವರಿಗೆ ಉಚಿತ ನೋಂದಣಿಯೊಂದಿಗೆ 25 ಲಕ್ಷ ರೂ. ಆರೋಗ್ಯ ವಿಮೆ, ಯುವಸಮೂಹಕ್ಕೆ 1 ಲಕ್ಷ ರೂ. ಶಿಷ್ಯ ವೇತನ, ರೈತರ ಬೆಳೆಗಳಿಗೆ ಕಾನೂನು ಬದ್ಧ ಬೆಂಬಲ ಬೆಲೆ, ನರೇಗಾ ಯೋಜನೆಯಡಿ ನಿತ್ಯ ಕೂಲಿಗೆ 400 ರೂ. ದರ ನಿಗದಿ ಮಾಡಲಾಗುವುದು. ಇವು ದೇಶಕ್ಕಾಗಿ ಕಾಂಗ್ರೆಸ್‌ನ ಐದು ಗ್ಯಾರಂಟಿಯಾಗಿವೆ ಎಂದರು.

    ರಾಜ್ಯದಲ್ಲಿ 5 ಗ್ಯಾರಂಟಿ ಈಗಾಗಲೇ ಜಾರಿಯಲ್ಲಿವೆ. 1.20 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಮೂಲಕ ಮಾಸಿಕ 2ಸಾವಿರ ರೂ., ನಾರಿ ಶಕ್ತಿ ಯೋಜನೆಯಡಿ 177 ಕೋಟಿ ಟ್ರಿಪ್ ಬಸ್‌ಗಳು ಸಂಚರಿಸಿವೆ. ಯಾವ ಜಾತಿ-ಧರ್ಮ ನೋಡದೆಯೇ ಇಲ್ಲಿನ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಕೊಟ್ಟಿದ್ದು, ಅರ್ಹರು ಒಂದಿಲ್ಲೊಂದು ರೀತಿ ಪ್ರಯೋಜನ ಪಡೆದಿದ್ದಾರೆ ಎಂದರು.

    ಕರ್ನಾಟಕ ಜನತೆಯ ಎಲ್ಲರ ಖಾತೆಗೆ 15 ಲಕ್ಷ ರೂ., ರೈತರ ಆದಾಯ ದ್ವಿಗುಣ, ಬರ-ನೆರೆ ಪರಿಹಾರ, ತೆರಿಗೆ ಹಂಚಿಕೆ ಈ ಎಲ್ಲದರಲ್ಲೂ ಪ್ರಧಾನಿ ನರೇಂದ್ರ ಮೋದಿ ಸಾಹೇಬರು ಕೊಟ್ಟ ಕೊಡುಗೆ ಚೊಂಬು. ಬಿಜೆಪಿ-ಜೆಡಿಎಸ್‌ನ 27 ಮಂದಿ ಸಂಸದರ ಕೊಡುಗೆ ಕೂಡ ಇದಕ್ಕೆ ಹೊರತಾಗಿಲ್ಲ ಎಂದು ವ್ಯಂಗ್ಯವಾಡಿದರು.

    ಅಭ್ಯರ್ಥಿ ಬಿ.ಎನ್.ಚಂದ್ರಪ್ಪ, ಸಚಿವರಾದ ಡಿ.ಸುಧಾಕರ್, ಮಧು ಬಂಗಾರಪ್ಪ, ಶಾಸಕರಾದ ಕೆ.ಸಿ.ವೀರೇಂದ್ರ ಪಪ್ಪಿ, ಟಿ.ರಘುಮೂರ್ತಿ, ಎನ್.ವೈ.ಗೋಪಾಲಕೃಷ್ಣ, ವೆಂಕಟೇಶ್, ಟಿ.ಬಿ.ಜಯಚಂದ್ರ, ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts