More

    ದೇಶಕ್ಕೆಲ್ಲ ಒಂದೇ ವಿದ್ಯುತ್ ಜಾಲ-ಒಂದೇ ಮಂಡಳಿ

    ದೇಶದ 16 ರಾಜ್ಯಗಳಲ್ಲಿ 10 ಗಂಟೆಗಳ ಕಾಲ ವಿದ್ಯುತ್ ಲೋಡ್​ಶೆಡ್ಡಿಂಗ್ ಜಾರಿಯಲ್ಲಿದೆ. ದೇಶದಲ್ಲಿರುವ ಎಲ್ಲ ವಿದ್ಯುತ್ ವಿತರಣ ಕಂಪನಿಗಳು ಹಣ ಮತ್ತು ಕಲ್ಲಿದ್ದಲು ಕೊರತೆಯಿಂದ ಬಳಲಿವೆ. ಕಲ್ಲಿದ್ದಲು ಖರೀದಿ ಮಾಡಲು ಕಂಪನಿಗಳ ಬಳಿ ಹಣವಿಲ್ಲ. ಕೋಲ್ ಇಂಡಿಯಾ ಕಂಪನಿಗಳು ಇನ್ನೂ 72,074 ಕೋಟಿ ರೂ. ಬಾಕಿ ನೀಡಬೇಕಿದೆ. ದೇಶದಲ್ಲಿ ಒಟ್ಟು 173 ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನಾ ಕೇಂದ್ರಗಳಿವೆ. ಇದರಲ್ಲಿ 106 ಕೇಂದ್ರಗಳು ಕಲ್ಲಿದ್ದಲು ದಾಸ್ತಾನು ಹೊಂದಿಲ್ಲ. ಕೇಂದ್ರ ಸರ್ಕಾರ ರಾಜ್ಯಗಳಿಗೆ ವಿದೇಶಿ ಕಲ್ಲಿದ್ದಲು ಖರೀದಿ ಮಾಡಲು ಹೇಳುತ್ತಿದೆ. ರಾಜ್ಯಗಳು ‘ವಿದೇಶಿ ಕಲ್ಲಿದ್ದಲಿನ ಬೆಲೆ ಹೆಚ್ಚಿದೆ, ನಮಗೆ ಸ್ವದೇಶಿ ಕಲ್ಲಿದ್ದಲು ಕೊಡಿ’ ಎಂದು ಪಟ್ಟುಹಿಡಿದಿವೆ. ‘ಬಾಕಿ ವಸೂಲಾಗದೆ ಹೊಸದಾಗಿ ಕಲ್ಲಿದ್ದಲು ನೀಡಲು ಸಾಧ್ಯವಿಲ್ಲ’ ಎಂದು ಕೋಲ್ ಇಂಡಿಯಾ ಹೇಳುತ್ತಿದೆ.

    ಇದು ಹಣಕಾಸಿನ ಸಮಸ್ಯೆಯೇ ಹೊರತು ಕಲ್ಲಿದ್ದಲು ಸಮಸ್ಯೆ ಅಲ್ಲ. ಸ್ವದೇಶಿ ಕಲ್ಲಿದ್ದಲು ಬಳಸಿದರೆ ಸರಾಸರಿ 6 ರೂ.ಗಳಿಗೆ ಒಂದು ಯೂನಿಟ್ ವಿದ್ಯುತ್ ಪಡೆಯಬಹುದು. ವಿದೇಶಿ ಕಲ್ಲಿದ್ದಲು ಬಳಸಿದರೆ ಒಂದು ಯೂನಿಟ್​ಗೆ 12 ರೂ. ಆಗುತ್ತದೆ. ಇದನ್ನು ಭರಿಸುವ ಶಕ್ತಿ ವಿದ್ಯುತ್ ಕಂಪನಿಗಳಿಗೆ ಇಲ್ಲ. ಇದು ಕೇಂದ್ರ ಸರ್ಕಾರಕ್ಕೂ ಗೊತ್ತಿದೆ. ಎಲ್ಲ ರಾಜ್ಯಗಳಲ್ಲೂ ಮತ್ತು ಕೇಂದ್ರದಲ್ಲಿ ವಿದ್ಯುತ್ ರಂಗ ರಾಜಕೀಯ ವಿಷಯವಾಗಿದೆ. ಇದನ್ನು ತಪ್ಪಿಸಬೇಕು ಎಂದರೆ ಜಿಎಸ್​ಟಿ ಮಾದರಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಒಂದೇ ವಿದ್ಯುತ್ ಜಾಲ ಮತ್ತು ಒಂದೇ ಮಂಡಳಿ ರಚಿಸಬೇಕು. ಈ ಮಂಡಳಿಗೆ ಕೇಂದ್ರವೂ ಸೇರಿದಂತೆ ಎಲ್ಲ ರಾಜ್ಯಗಳ ವಿದ್ಯುತ್ ಸಚಿವರು ಸದಸ್ಯರಾಗಿ ಅಖಿಲ ಭಾರತ ಮಟ್ಟದಲ್ಲಿ ವಿದ್ಯುತ್ ದರ ನಿಗದಿಪಡಿಸಬೇಕು. ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ವಿತರಣೆ ರಾಷ್ಟ್ರೀಯ ಮಟ್ಟದಲ್ಲಿ ನಡೆಯಬೇಕು. ಆಗ ರಾಜಕೀಯ ಮತ್ತು ಭ್ರಷ್ಟಾಚಾರ ನಿಂತು ಹೋಗುತ್ತದೆ.

    ಎಲ್ಲ ರಾಜ್ಯಗಳಲ್ಲಿ ವಿದ್ಯುತ್ ಇಲಾಖೆ ಎಂದರೆ ಹಣ ತರುವ ಇಲಾಖೆ ಎಂಬಂತಾಗಿದೆ. ಹೀಗಾಗಿ ಯಾವ ರಾಜ್ಯವೂ ವಿದ್ಯುತ್ ದರ ಕಡಿಮೆ ಮಾಡಲು ಬಯಸುತ್ತಿಲ್ಲ. ಎಲ್ಲ ಕಡೆ ಸೋಲಾರ್ ವಿದ್ಯುತ್ ಕಡಿಮೆ ದರದಲ್ಲಿ ಲಭಿಸುತ್ತಿದೆ. ಆದರೆ ವಿದ್ಯುತ್ ಖರೀದಿ ಒಪ್ಪಂದ 25 ವರ್ಷಗಳ ಅವಧಿ ಹೊಂದಿದ್ದು ಇದರ ದರ ಅಧಿಕ. ರಾಜ್ಯಗಳು ಈ ಒಪ್ಪಂದವೇ ಬೇಡ ಎಂದು ಪಟ್ಟು ಹಿಡಿದಿವೆ. ಕರ್ನಾಟಕದಲ್ಲೂ ಇದೇ ಪರಿಸ್ಥಿತಿ. ಸೋಲಾರ್ ವಿದ್ಯುತ್ ಹೆಚ್ಚುವರಿ ಲಭ್ಯ. ಆದರೆ ದರ ಮಾತ್ರ ಅಧಿಕ. ಖಾಸಗಿ ಕಂಪನಿಗಳೂ ದರವನ್ನು ಕಡಿಮೆ ಮಾಡಲು ಸಿದ್ಧವಿಲ್ಲ. ಸರ್ಕಾರ ಹಣದಾಸೆಯಿಂದ ಖಾಸಗಿಯವರಿಂದ ವಿದ್ಯುತ್ ಖರೀದಿ ಮಾಡಲು ಸಿದ್ಧವಿದೆ. ಸರ್ಕಾರಿ ಕಂಪನಿಗಳು ಸೊರಗಿ ಹೋಗುತ್ತಿವೆ. ಹಾಗಾಗಿ, ವಿದ್ಯುತ್ ರಂಗದಲ್ಲೂ ಒಂದೇ ಮಂಡಳಿ ರಚಿಸಿದರೆ ಸೂಕ್ತ.

    | ಬೇ.ನ.ಶ್ರೀನಿವಾಸಮೂರ್ತಿ ತುಮಕೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts