More

    ದೇವನಗರಿಯಲ್ಲಿ ರಾಮೋತ್ಸವಕ್ಕೆ ಭಕ್ತಿವೃಷ್ಟಿ -ಎಲ್ಲೆಡೆ ಸೀತಾಪತಿ ನಾಮಸ್ಮರಣೆ – ಗಲ್ಲಿ-ಗಲ್ಲಿಗಳಲ್ಲೂ ದಾಸೋಹ

    ದಾವಣಗೆರೆ : ದಾವಣಗೆರೆ ಸೋಮವಾರ ಇಡೀ ದಿನ ರಾಮೋತ್ಸವದ ಭಕ್ತಿಯ ಸಾಗರದಲ್ಲಿ ಮುಳುಗಿತ್ತು. ಎಲ್ಲ ಬಡಾವಣೆ, ಕಾಲನಿಯ ಗಲ್ಲಿ-ಗಲ್ಲಿಗಳೆಲ್ಲ ಶ್ರೀರಾಮನ ಪೂಜೆಗೆ ಮೀಸಲಾಗಿದ್ದವು. ಎಲ್ಲೆಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿತ್ತು.
    ಜಯದೇವ ವೃತ್ತ, ನಿಟುವಳ್ಳಿ, ಜಯನಗರ, ವಿದ್ಯಾನಗರ, ವಿನೋಬನಗರ, ದೇವರಾಜ ಅರಸು ಬಡಾವಣೆ.. ಹೀಗೆ ಎಲ್ಲ ರಸ್ತೆ, ವೃತ್ತಗಳಲ್ಲೂ ರಾಮಭಕ್ತರು ಶ್ರೀರಾಮನ ಕಟೌಟ್, ಫ್ಲೆಕ್ಸ್, ಭಾವಚಿತ್ರ ಇರಿಸಿ ಭಕ್ತಿ ಸಲ್ಲಿಸಿದರು.
    ದೇವಸ್ಥಾನ ಆವರಣ, ಧ್ವಜ ಕಟ್ಟೆ, ಅಶ್ವತ್ಥ ಕಟ್ಟೆ, ಆಟೋ ನಿಲ್ದಾಣ, ಅಂಗಡಿ, ಮಳಿಗೆಗಳಲ್ಲೂ ಶ್ರೀರಾಮನ ದರ್ಶನವಾಯಿತು. ನಿಟುವಳ್ಳಿ ಮುಖ್ಯರಸ್ತೆಯೊಂದರ ಬಾರ್ ಆ್ಯಂಡ್ ರೆಸ್ಟೋರೆಂಟ್ ವರಾಂಡದಲ್ಲೂ ಶ್ರೀರಾಮನ ಜಪ ಸದ್ದು ಮಾಡಿತು!
    ಎಲ್ಲೆಡೆ ಧ್ವನಿವರ್ಧಕಗಳಲ್ಲಿ ರಾಮನ ಕುರಿತ ಭಕ್ತಿಗೀತೆ, ಕೀರ್ತನೆಗಳು ಮೊಳಗಿದವು. ‘ಬನಾಯೇಂಗೆ ಮಂದಿರ್..’ ಹಾಡು ಶಿಷ್ಟಾಚಾರ ಎಂಬಂತೆ ಮಾರ್ದನಿಸಿತು. ದೇವಸ್ಥಾನ ಮತ್ತಿತರೆಡೆ ಭಜನಾ ಮಂಡಳಿಗಳಿಂದ ರಾಮ ಭಜನೆ ನಡೆಯಿತು.
    ಬಿರುಬಿಸಿಲಿನ ಹಿನ್ನೆಲೆಯಲ್ಲಿ ಬಹುತೇಕ ಕಡೆ ಪೆಂಡಾಲ್ ಹಾಕಲಾಗಿತ್ತು. ಸಂಘ-ಸಂಸ್ಥೆಗಳು ಓಣಿಓಣಿಯಲ್ಲೂ ಹಮ್ಮಿಕೊಂಡಿದ್ದ ಅನ್ನ ಸಂತರ್ಪಣೆ, ಉಪಾಹಾರಗಳಿಗೆ ಎಣೆ ಇರಲಿಲ್ಲ. ಕೆಲವು ರಸ್ತೆಗಳಲ್ಲಿ ವಿತರಿಸಲಾದ ಕೋಸಂಬರಿ, ಪಾನಕ, ಷರಬತ್ತು ದಾಹ ತಣಿಸಿದವು. ವರ್ತಕರು, ತರಕಾರಿ ವ್ಯಾಪಾರಿಗಳು ಧಾನ್ಯ-ತರಕಾರಿ, ಹಣದ ರೂಪದಲ್ಲಿ ದಾನ ನೀಡಿ ಉತ್ಸವಕ್ಕೆ ಕೈ ಜೋಡಿಸಿದರು.
    ಶ್ರೀರಾಮಚಂದ್ರನ ಫೋಟೋ, ಕೇಸರಿ ಶಲ್ಯ, ಭಗವಾ ಧ್ವಜಗಳಿಗೆ ಅಂಗಡಿಗಳಲ್ಲಿ ಬೇಡಿಕೆ ಹೆಚ್ಚಿತ್ತು. ಯುವಕರು ಬೈಕ್-ಕಾರುಗಳಲ್ಲಿ ಜಯಕಾರಗಳೊಂದಿಗೆ ಮೆರವಣಿಗೆ ನಡೆಸಿದರು. ಯುವಕರ ಉತ್ಸಾಹ ಮುಗಿಲು ಮುಟ್ಟಿತ್ತು. ಅನ್ನಸಂತರ್ಪಣೆ ಎಲ್ಲೆಡೆ ಇದ್ದುದರಿಂದ ಬಹುತೇಕ ಹೋಟೆಲ್‌ಗಳು ಅಘೋಷಿತ ರಜೆ ಮಾಡಿದ್ದವು!ದೋಸೆ-ಹೋಳಿಗೆ ಸವಿ!
    ಜಯನಗರದ ಮಂಜುನಾಥ ಬೆಣ್ಣೆದೋಸೆ ಹೋಟೆಲ್‌ನಲ್ಲಿ ಉಚಿತ ದೋಸೆಗಾಗಿ ಬೆಳಗ್ಗೆನಿಂದಲೇ ಜನ ಮುಗಿಬಿದ್ದರು. ನಾಲ್ಕು ತಾಸುಗಳ ಅವಧಿಯಲ್ಲಿ ಸುಮಾರು ಒಂದು ಸಾವಿರ ಜನರು ದೋಸೆ ಸವಿದರು, ನಂತರದಲ್ಲಿ ಪಾನಕ ವ್ಯವಸ್ಥೆ ಮಾಡಲಾಯಿತು ಎಂದು ಮಾಲೀಕ ಡಿ.ಯು.ಮಹೇಶ್ ತಿಳಿಸಿದರು.
    ದೇವರಾಜ ಅರಸು ಬಡಾವಣೆ ಸಿ ಬ್ಲಾಕ್‌ನ ಒಂದನೇ ಕ್ರಾಸ್‌ನ ಮಹಿಳೆಯರು 1 ಸಾವಿರ ಹೋಳಿಗೆ-ಸೀಕರಣೆ ತಯಾರಿಸಿ ರಾತ್ರಿ ಊಟಕ್ಕೆ ವಿತರಿಸಿದರು. ಐದಕ್ಕೂ ಹೆಚ್ಚು ಗೃಹಿಣಿಯರು ಮಧ್ಯಾಹ್ನ 12 ಗಂಟೆಯಿಂದ ಎಂಟು ತಾಸುಗಳ ಕಾಲ ಹೋಳಿಗೆ ತಯಾರಿಸಿದರು. ‘ನಮ್ಮ ರಸ್ತೆಯ 25 ಮಹಿಳೆಯರೇ ವೆಚ್ಚ ಭರಿಸಿ ಪ್ರಸಾದ ಸಿದ್ಧಪಡಿಸುತ್ತಿದ್ದೇವೆ. ಕೆಲವರು ದಾನ ನೀಡಿದ್ದಾರೆ’ ಎಂದು ವಿವರಿಸಿದರು ತಂಡದ ಎನ್. ಉಮಾ. ಎಲ್‌ಇಡಿಗಳಲ್ಲಿ ನೇರ ಪ್ರಸಾರ
    ಸರಸ್ವತಿ ನಗರದ ಪಂಚಮುಖಿ ಆಂಜನೇಯ ದೇಗುಲ, ವಿದ್ಯಾನಗರದ ಈಶ್ವರ ಪಾರ್ವತಿ ಮಂದಿರ, ಖಮಿತ್ಕರ್ ಈಶ್ವರಪ್ಪನವರ ರಾಮಮಂದಿರ, ನಿಟುವಳ್ಳಿ ಕ್ರಾಸ್, ವಿವೇಕಾನಂದ ಬಡಾವಣೆ, ಶಿವಾಜಿ ವೃತ್ತ, ಎಂಸಿಸಿ ಬಿ ಬ್ಲಾಕ್ ಮತ್ತಿತರೆಡೆ ಎಲ್‌ಇಡಿ ಪರದೆ ಮೇಲೆ ಅಯೋಧ್ಯೆ ರಾಮಮಂದಿರದ ಕಾರ್ಯಕ್ರಮದ ನೇರ ಪ್ರಸಾರವನ್ನು ಜನರು ಕಣ್ತುಂಬಿಕೊಂಡರು. ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಆಗುತ್ತಿದ್ದಂತೆ ನೋಡುಗರು ‘ಜೈ ಶ್ರೀರಾಮ್, ಜೈ ಜೈ ಶ್ರೀರಾಮ್’ ಎಂಬ ಉದ್ಗಾರ ಮಾಡಿದ್ದು ವಿಶೇಷವಾಗಿತ್ತು.
    ರಂಗೋಲಿ ಚಿತ್ತಾರ
    ವಿವೇಕಾನಂದ ಬಡಾವಣೆಯ ಆರನೇ ಮುಖ್ಯರಸ್ತೆಯುದ್ದಕ್ಕೂ ರಂಗೋಲಿಗಳ ಚಿತ್ತಾರ ಗಮನ ಸೆಳೆಯಿತು. ಇಡೀ ರಸ್ತೆಯ ಮಹಿಳೆಯರು ಬೆಳಗ್ಗೆ ರಂಗೋಲಿಗಳನ್ನು ಚಿತ್ರಿಸಿ ಅಂದಗೊಳಿಸಿ, ರಾಮಭಕ್ತರಿಗೆ ವಿಶೇಷ ಸ್ವಾಗತ ಕೋರಿದರು.
    ವೇಷಭೂಷಣದಲ್ಲಿ ಚಿಣ್ಣರು
    ಬಿಐಇಟಿ ಕಾಲೇಜು ರಸ್ತೆ ಸೇರಿದಂತೆ ವಿವಿಧೆಡೆ ಮಕ್ಕಳು ರಾಮಾಯಣದ ಪಾತ್ರಧಾರಿಗಳಾಗಿ ಗಮನ ಸೆಳೆದರು. ಮಕ್ಕಳಿಗೆ ಬಾಲರಾಮನ ವೇಷ ಹಾಕಿಸಿದ ಪಾಲಕರು ಬಿಲ್ಲು-ಬಾಣಗಳ ಸಹಿತ ಸ್ಕೂಟರ್‌ಗಳಲ್ಲಿ ಕಾರ್ಯಕ್ರಮಗಳತ್ತ ಕರೆದೊಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ನರಸರಾಜ ರಸ್ತೆಯಲ್ಲಿ ವರ್ತಕರು ಆಯೋಜಿಸಿದ್ದ ಮೆರವಣಿಗೆಯಲ್ಲೂ ಪಾತ್ರಧಾರಿಗಳು ಭಾಗಿಯಾಗಿದ್ದರು.
    ದಾವಣಗೆರೆ ತಾಲೂಕಿನ ನಾಗನೂರು ಗ್ರಾಮದಲ್ಲಿ ಶ್ರೀರಾಮನ ಭಾವಚಿತ್ರದ ಪಲ್ಲಕ್ಕಿ ಉತ್ಸವದ ಜತೆಯಲ್ಲೇ ಅಶ್ವ್ವಾರೂಢ ಮಾರುತಿ ದೇವರ ಮೆರವಣಿಗೆ ನಡೆಸಲಾಯಿತು. ವಿವಿಧ ಟ್ರಾೃಕ್ಟರ್‌ಗಳಲ್ಲಿ ಶ್ರೀರಾಮ, ಸೀತಾಮಾತೆ, ಭರತ, ಆಂಜನೇಯ, ಮಹರ್ಷಿ ವಾಲ್ಮೀಕಿ, ಲವ-ಕುಶರ ವೇಷಗಳಲ್ಲಿದ್ದ ಚಿಣ್ಣರು ರಂಜಿಸಿದರು.

    62 ಜನರಿಂದ ರಕ್ತದಾನ
    ಹಿಂದು ಜಾಗರಣ ವೇದಿಕೆ, ಜಿಲ್ಲಾ ಯೋಗ ಒಕ್ಕೂಟ ಮತ್ತು ಶ್ರೀ ಸ್ವಾಮಿ ವಿವೇಕಾನಂದ ಸ್ವಯಂಪ್ರೇರಿತ ರಕ್ತ ಕೇಂದ್ರದ ಸಹಯೋಗದಲ್ಲಿ ಜಯದೇವ ವೃತ್ತದಲ್ಲಿ ರಕ್ತದಾನ ಶಿಬಿರ ನಡೆಯಿತು. 62 ಮಂದಿ ರಕ್ತದಾನ ಮಾಡಿದರು. ಮಾಜಿ ಮೇಯರ್ ಎಸ್.ಟಿ.ವೀರೇಶ್, ಕೆ.ಜಿ.ಶಿವಕುಮಾರ್, ವಾಸುದೇವ ರಾಯ್ಕರ್, ರಾಜು ಬದ್ದಿ, ಯು.ಸಿದ್ದೇಶಿ ಇತರರಿದ್ದರು.

    ಮದುವೆಮನೆಯಲ್ಲೂ ರಾಮನ ಕಟೌಟ್!
    ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ದಿನದಂದೇ ದಾವಣಗೆರೆಯ ಜೋಡಿಯೊಂದು ಮದುವೆ ಮಂಟಪದಲ್ಲಿ ಅಯೋಧ್ಯೆಯ ಮಂದಿರಸಹಿತ ಶ್ರೀರಾಮನ ಕಟೌಟ್‌ಗೆ ಪೂಜೆ ಸಲ್ಲಿಸುವ ಮೂಲಕ ದಾಂಪತ್ಯಕ್ಕೆ ಕಾಲಿರಿಸಿತು.
    ದಾವಣಗೆರೆ ಕೆ.ಬಿ.ಬಡಾವಣೆ ನಿವಾಸಿ ಜೆ.ರೋಹಿತ್ ಹಾಗೂ ಚನ್ನಗಿರಿ ತಾಲೂಕಿನ ಲಿಂಗದಹಳ್ಳಿಯ ಎಸ್.ಅರ್ಪಿತಾ ಜೋಡಿ ಮದುವೆ ಸೋಮವಾರ ಇಲ್ಲಿನ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಕಾಕತಾಳೀಯ ಎಂಬಂತೆ ಸೋಮವಾರಕ್ಕೆ ನಿಗದಿಯಾಗಿತ್ತು. ರಾಮನ ಕಟೌಟ್‌ಗೆ ಪುಷ್ಪಾರ್ಚನೆ ಮಾಡಿ ನಮಿಸಿದ ಜೋಡಿ ಸತಿ-ಪತಿಗಳಾದರು.
    ಬಾಲರಾಮನ ಪ್ರತಿಷ್ಠಾಪನೆಯ ಶುಭದಿನವೇ ನಾವು ಮದುವೆ ಆಗಿರುವುದು ನಮ್ಮ ಸೌಭಾಗ್ಯ ಎಂದು ದಂಪತಿ ಹರ್ಷ ವ್ಯಕ್ತಪಡಿಸಿದರು. ಹಾಜರಿದ್ದ ಪಾಲಕರು, ನಂಟರು ‘ಜೈ ಶ್ರೀರಾಮ್’ ಜಯಕಾರದೊಂದಿಗೆ ಶುಭ ಹಾರೈಸಿದ್ದು ವಿಶೇಷವಾಗಿತ್ತು.
    ದೀಪಾವಳಿ ರಂಗು
    ರಾಮೋತ್ಸವದ ಭಾಗವಾಗಿ ಸಂಜೆ, ನಗರದ ಎಲ್ಲ ಬಡಾವಣೆಗಳಲ್ಲೂ ಜನರು ರಾಮ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿದರು. ಅಭಿಯಾನದಡಿ ಪ್ರತಿ ಮನೆಗೂ ನೀಡಲಾಗಿದ್ದ ಮಂತ್ರಾಕ್ಷತೆಯನ್ನು ಪೂಜಿಸಿದ ಭಕ್ತರು ಮನೆಗಳ ಆವರಣದಲ್ಲಿ ದೀಪ ಬೆಳಗಿದರು. ಪಟಾಕಿ ಸಿಡಿಸಿದರು. ಬೆಳಗ್ಗೆ ಶ್ರೀರಾಮನಿಗೆ ಪೂಜೆ ಸಲ್ಲಿಸಿದ ಮಹಿಳೆಯರು ಸಿಹಿ ಅಡುಗೆ ಮಾಡಿದರು.
    ಎಂಸಿಸಿ ಎ ಬ್ಲಾಕ್‌ನಲ್ಲಿ ಹಿಂದು ಯುವಶಕ್ತಿ ಸಂಘಟನೆ, ಹಿಂದು ಯುವಸೇನೆ ಸಹಯೋಗದಲ್ಲಿ ರಾಮಭಕ್ತರು ಸೋಮವಾರ ಸಂಜೆ 55 ಸಾವಿರಕ್ಕೂ ಹೆಚ್ಚು ದೀಪ ಬೆಳಗಿ ರಾಮ ದೀಪೋತ್ಸವ ಆಚರಿಸಿದರು. ಅಯ್ಯಪ್ಪಸ್ವಾಮಿ ದೇವಸ್ಥಾನದಿಂದ ಚರ್ಚ್‌ವರೆಗಿನ ಎಲ್ಲ ಕ್ರಾಸ್‌ಗಳಲ್ಲಿಯೂ ಜನರು ಭಾಗಿಯಾಗಿದ್ದರು ಎಂದು ಮುಖಂಡ ಪಿ.ಸಿ.ಶ್ರೀನಿವಾಸ್ ತಿಳಿಸಿದರು.
    ಜಯದೇವ ವೃತ್ತದ ರಾಮಮಂದಿರದ ಸುತ್ತ ಶ್ರೀರಾಮನ ಪಲ್ಲಕ್ಕಿ ಉತ್ಸವದ ಜತೆಗೆ ಅಷ್ಟ ಸೇವೆ ನಡೆಸಲಾಯಿತು. ನಂತರ ವೃತ್ತದ ಸುತ್ತಲೂ 1008 ದೀಪಗಳನ್ನು ಬೆಳಗಿ ವಿಶೇಷ ದೀಪಾವಳಿ ಆಚರಿಸಲಾಯಿತು. ನಂತರ ಸಾಯಿ ಭಜನಾಮೃತ ಮಹಿಳಾ ಮಂಡಳಿಯಿಂದ ಸಂಗೀತ ಕಾರ್ಯಕ್ರಮ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts