More

    ದೇಗುಲ ತೆರವಿಗೆ ಭಾರಿ ವಿರೋಧ ಮಣ್ಣೆ ಗ್ರಾಮಸ್ಥರಿಂದ ಅಡ್ಡಿ ಆಂಜನೇಯ ದೇವಸ್ಥಾನ ತೆರವಿಗೆ ಮುಂದಾಗಿದ್ದ ತಾಲೂಕು ಆಡಳಿತ

    ತ್ಯಾಮಗೊಂಡ್ಲು: ಸುಪ್ರೀಂಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಹೋಬಳಿಯ ಮಣ್ಣೆ ಗ್ರಾಮದ ಅಭಯ ಆಂಜನೇಯ ಸ್ವಾಮಿ ದೇವಾಲಯ ಮತ್ತು ಗಣೇಶನ ದೇವಸ್ಥಾನ ತೆರವಿಗೆ ಮುಂದಾಗಿದ್ದ ತಾಲೂಕು ಆಡಳಿತದ ಕ್ರಮಕ್ಕೆ ಗ್ರಾಮಸ್ಥರ ತೀವ್ರ ವಿರೋಧ ವ್ಯಕ್ತವಾಯಿತು. ಇದರಿಂದಾಗಿ ಗುರುವಾರ ಕಾರ್ಯಾಚರಣೆ ಸ್ಥಗಿತಗೊಳಿಸಿ ಅಧಿಕಾರಿಗಳು ಮರಳಿದರು.

    ತಾಲೂಕಿನ 29 ದೇಗುಲಗಳ ಪೈಕಿ ತ್ಯಾಮಗೊಂಡ್ಲು ಹೋಬಳಿಯ ತಾವರೆಕೆರೆಯ ಒಂದು, ಮಣ್ಣೆ ಗ್ರಾಮದ 2 ದೇವಸ್ಥಾನಗಳನ್ನು ತೆರವು ಮಾಡಲು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಅವರು ತಾಲೂಕು ಆಡಳಿತಕ್ಕೆ ಸೂಚಿಸಿದ್ದರು. ಅದರಂತೆ ಉಪ ತಹಸೀಲ್ದಾರ್ ನಟರಾಜ್, ಆರ್‌ಐಗಳಾದ ಎನ್.ಎಸ್. ಶಿವಪ್ರಸಾದ್, ಮಹೇಶ್ ಕುಮಾರ್ ಮತ್ತು ತಂಡ ಮಣ್ಣೆ ಗ್ರಾಮದ ಆಂಜನೇಯಸ್ವಾಮಿ ದೇಗುಲದ ಬಳಿ ಬಂದು, ಜೆಸಿಬಿ ಕರೆಸಲು ಮುಂದಾಗಿದ್ದರು.

    ವಿಷಯ ತಿಳಿದು ಸ್ಥಳಕ್ಕೆ ಬಂದ ಮುಖಂಡರು ಹಾಗು ಅಕ್ಕಪಕ್ಕದ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾದರು. ದೇಗುಲಗಳ ತೆರವಿಗೆ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದರು. ಅಧಿಕಾರಿಗಳು ಸುಪ್ರೀಂಕೋರ್ಟ್ ಆದೇಶ ಇರುವುದಾಗಿ ಹೇಳಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಆದರೂ ಜನರು ಜಗ್ಗಲಿಲ್ಲ.

    ಅಧಿಕಾರಿಳಿಂದ ತಪ್ಪು ಮಾಹಿತಿ: ಸುಪ್ರೀಂಕೋರ್ಟ್ ಆದೇಶವನ್ನು ನಾವು ಗೌರವಿಸುತ್ತೇವೆ. ಕೋರ್ಟ್ ಆದೇಶದ ಪ್ರಕಾರ ಸಾರ್ವಜನಿಕರಿಗೆ ತೊಂದರೆಯಾಗುವ ಸ್ಥಳಗಳಲ್ಲಿ ಇರುವ ದೇಗುಲಗಳನ್ನು ತೆರವು ಮಾಡಬಹುದಾಗಿದೆ. ಆದರೆ, ರಸ್ತೆಯಿಂದ ಸಾಕಷ್ಟು ದೂರ ಇರುವ ದೇಗುಲಗಳನ್ನು ತೆರವುಗೊಳಿಸುವುದು ತಪ್ಪು. ಈ ವಿಷಯವಾಗಿ ಕಂದಾಯ ಅಧಿಕಾರಿಗಳು ಕೋರ್ಟ್‌ಗೆ ತಪ್ಪು ಮಾಹಿತಿ ನೀಡಿದ್ದಾರೆ. ಆದ್ದರಿಂದ, ದೇಗುಲಗಳ ತೆರವಿಗನ್ನು ವಿರೋಧಿಸುತ್ತಿರುವುದಾಗಿ ಮುಖಂಡ ಪಣಮದಲಿ ರಾಮಣ್ಣ ಸ್ಪಷ್ಟಪಡಿಸಿದರು.

    ತಹಸೀಲ್ದಾರ್ ಅತಿರೇಖ: ಯಾವುದೇ ದೇಗುಲ ತೆರವುಗೊಳಿಸುವ ಮೊದಲು ಸಂಬಂಧಪಟ್ಟವರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು. ಆದರೆ, ತಾಲೂಕು ಆಡಳಿತ ಈ ವಿಷಯದಲ್ಲಿ ಎಡವಿದೆ. ತಹಸೀಲ್ದಾರ್ ಅವರು ಅತಿರೇಖದಿಂದ ವರ್ತಿಸಿ, ದೇಗುಲಗಳ ತೆರವಿಗೆ ಮುಂದಾಗಿದ್ದಾರೆ ಎಂದು ಮಂದಿರ ಸಂರಕ್ಷಣಾ ಸಮಿತಿ ಸಂಚಾಲಕ ರಾಮಕೃಷ್ಣಯ್ಯ ಆಕ್ರೋಶ ವ್ಯಕ್ತಪಡಿಸಿದರು.
    ಬೇರೆ ಧರ್ಮಗಳ ಕೇಂದ್ರಗಳಿಗೆ ಸಂಬಂಧಪಟ್ಟಂತೆ ಕೋರ್ಟ್‌ಗಳು ಕೊಟ್ಟಿರುವ ಆದೇಶಗಳನ್ನು ಜಾರಿಗೊಳಿಸದೆ, ಹಿಂದುಗಳ ಭಾವನೆಗೆ ಧಕ್ಕೆ ಉಂಟುಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.
    ಅಹಿತಕರ ಘಟನೆ ನಡೆಯದಂತೆ ತ್ಯಾಮಗೊಂಡ್ಲು ಪೋಲೀಸ್ ಠಾಣೆಯ ಪಿಎಸ್‌ಐ ಡಿ. ಚಿಕ್ಕನರಸಿಂಹಯ್ಯ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಲೋಕೋಪಯೋಗಿ ಇಲಾಖೆ ಎಇಇ ನಟರಾಜ್, ಪಿಡಿಒ ಸಿದ್ದರಾಜಯ್ಯ, ಗ್ರಾಮಲೆಕ್ಕಿಗರಾದ ವರ್ಷಿತಾ, ನಾಗರತ್ನ, ಪಾರ್ಥಸಾರಥಿ, ಸಂಪತ್ ಇದ್ದರು.

     

    ಸುಪ್ರೀಂಕೋಟ್‌ಗೆ ಕಂದಾಯ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಇಂಥ ಪರಿಸ್ಥಿತಿ ಉದ್ಭವಿಸಿದೆ. ಜನರಿಗೆ ತೊಂದರೆಯಾಗುವ ಸ್ಥಳಗಳಲ್ಲಿರುವ ದೇಗುಲಗಳ ತೆರವಿಗೆ ವಿರೋಧವಿಲ್ಲ. ತೆರವು ಮಾಡುವ ಮೊದಲು ದೇಗುಲಕ್ಕೆ ಪರ್ಯಾಯ ಸ್ಥಳ ಕೊಡಬೇಕು. ಇಲ್ಲವಾದರೆ, ಭಾರಿ ಪ್ರತಿಭಟನೆ ಅನಿವಾರ್ಯವಾಗುತ್ತದೆ.
    ಜಗದೀಶ್ ಚೌಧರಿ, ತಾಲೂಕು ಬಿಜೆಪಿ ಉಪಾಧ್ಯಕ್ಷ

    ಸಾರ್ವಜನಿಕರ ವಿರೋಧದಿಂದ ಸದ್ಯಕ್ಕೆ ದೇಗುಲ ತೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಇಂದಿನ ಎಲ್ಲ ವಿದ್ಯಮಾನಗಳನ್ನು ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಅವರ ಗಮನಕ್ಕೆ ತರಲಾಗುವುದು. ಅವರ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.
    ನಟರಾಜ್, ಉಪತಹಸೀಲ್ದಾರ್

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts