More

    ದುರಾಡಳಿತವೇ ‘ಕೈ’ ಪ್ರಣಾಳಿಕೆ

    ಬೆಳಗಾವಿ : ಕೇಂದ್ರ ಮತ್ತು ರಾಜ್ಯಗಳಲ್ಲಿ ಸುದೀರ್ಘ ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್‌ಗೆ ಭ್ರಷ್ಟಾಚಾರ, ದುರಾಡಳಿತವೇ ಪ್ರಣಾಳಿಕೆ ಇದ್ದಂತೆ. ಅದೊಂದು ರೀತಿಯ ಕೊಲೆಗೆಡುಕರ ಪಕ್ಷವಾಗಿದೆ ಎಂದು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಉಸ್ತುವಾರಿ, ಶಾಸಕ ಅಭಯ ಪಾಟೀಲ ವಾಗ್ದಾಳಿ ನಡೆಸಿದರು.

    ನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಯುಪಿಎ ಮತ್ತು ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಭ್ರಷ್ಟಾಚಾರ, ದುರಾಡಳಿತ, ಯೋಜನೆಗಳಲ್ಲಿ ಅವ್ಯವಹಾರ ಇನ್ನಿತರ ವಿಷಯಗಳು ಜನರಿಗೆ ಗೊತ್ತಿರುವ ಸಂಗತಿಯಾಗಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಮುನ್ನ ಕಾಂಗ್ರೆಸ್ ನಾಯಕರು ತಮ್ಮ ಇತಿಹಾಸವನ್ನೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಆಡಳಿತಾವಧಿಯಲ್ಲಿ ಕೊಪ್ಪಳ ಜಿಲ್ಲೆ ಕುಷ್ಠಗಿ ತಾಲೂಕಿನ ಸಣ್ಣ ನೀರಾವರಿ ಯೋಜನೆಯಲ್ಲಿ 34 ಕೋಟಿ ರೂ. ಅವ್ಯವಹಾರ ನಡೆದಿದೆ. ಇದನ್ನು ಮುಚ್ಚಿಕೊಳ್ಳಲು ಅಧಿಕಾರಿಗಳನ್ನು ಅಮಾನತು ಮಾಡಿದ್ದರು. ಅಲ್ಲದೆ, ಸಿದ್ದರಾಮಯ್ಯ ಅವರು ಕಟ್ಟಿಕೊಳ್ಳುತ್ತಿದ್ದ ಲಕ್ಷಾಂತರ ರೂ. ಬೆಲೆ ಬಾಳುವ ಕೈ ಗಡಿಯಾರವು ಭ್ರಷ್ಟಾಚಾರದ ಒಂದು ಭಾಗವಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.
    ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಆದ ಬಳಿಕ ಕಾಂಗ್ರೆಸ್ ಎ ದಿಂದ ಝಡ್ ವರೆಗಿನ ಎಲ್ಲ ಭ್ರಷ್ಟಾಚಾರಗಳು, ಕಳ್ಳ ವ್ಯವಹಾರ ಬಂದ್ ಆಗಿವೆ. ಅಲ್ಲದೆ, ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಗದೆ ನೆಲ ಕಚ್ಚಿದೆ. ಇದೀಗ ಮತ್ತೆ ಅಧಿಕಾರದ ಹಗಲು ಕನಸು ಕಾಣುತ್ತ ಸುಳ್ಳು ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ತನ್ನ ನೈತಿಕ ಮೌಲ್ಯಗಳನ್ನು ಕಳೆದುಕೊಂಡಿದೆ ಎಂದು ಟೀಕಿಟಿಸಿದರು.

    ಶಾಸಕರೊಬ್ಬರಿಂದಲೇ ಸಾಧ್ಯವಿಲ್ಲ: ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ರೂಪಿಸುವ ಯೋಜನೆ, ಕೈಗೊಳ್ಳುವ ಕಾಮಗಾರಿ ಅನುಮೋದನೆಗಾಗಿ ಮೂರು ಹಂತದ ಕಮಿಟಿಗಳಿವೆ. ಆ ಸಮಿತಿಗಳಲ್ಲಿ ಒಪ್ಪಿಗೆ ಸಿಕ್ಕರೆ ಮಾತ್ರ ಯೋಜನೆ ಬದಲಾವಣೆ ಸಾಧ್ಯವಿದೆಯೇ ವಿನಹ ಶಾಸಕರೊಬ್ಬರಿಂದಲೇ ಸಾಧ್ಯವಿಲ್ಲ. ನಗರದ ವಿವಿಧ ಭಾಗಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಗುಣಮಟ್ಟ ಪರಿಶೀಲನೆಗೆ ತಂಡ ಇರುತ್ತದೆ. ಕಳಪೆ ಕಂಡುಬಂದಿರುವ ಕಡೆ ಮರು ಕಾಮಗಾರಿ ಮಾಡಿಸಲಾಗಿದೆ. ಅಲ್ಲದೆ, ಕಾಮಗಾರಿ ವೆಚ್ಚ, ನಿರ್ವಹಣೆ ಅವಧಿ, ಗುತ್ತಿಗೆದಾರರನ ಹೆಸರು ಸೇರಿದಂತೆ ಸಮಗ್ರ ಮಾಹಿತಿ ಇರುವ ನಾಮಫಲಕಗಳನ್ನು ಎಲ್ಲ ಕಡೆ ಅಳವಡಿಸಲಾಗಿದೆ ಎಂದು ಶಾಸಕ ಅಭಯ ಪಾಟೀಲ ವಿವರಿಸಿದರು.

    ಬಿಜೆಪಿ ವಕ್ತಾರ ಎಂ.ಬಿ. ಝಿರಲಿ, ನಗರ ಘಟಕದ ಅಧ್ಯಕ್ಷ ಶಶಿಕಾಂತ ಪಾಟೀಲ ಇತರರು ಇದ್ದರು.

    ಬಂಡಾಯ ಅಭ್ಯರ್ಥಿಗಳ ಉಚ್ಚಾಟನೆ: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮತ್ತು ಪಕ್ಷದ ಅಭ್ಯರ್ಥಿಗಳ ವಿರುದ್ಧ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದಾರೆ. ಅಲ್ಲದೆ, ಪಕ್ಷದ ಶಿಸ್ತು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಅವರ ಆದೇಶದ ಮೇರೆಗೆ ವಾರ್ಡ್ ನಂ- 14 ದೀಪಕ ಜಮಖಂಡಿ, ವಾರ್ಡ್ ನಂ- 46 ಶಿವಾನಂದ ಮುಗಳಿಹಾಳ, ವಾರ್ಡ್ ನಂ- 4 ಗಣೇಶ ನಂದಗಡಕರ್, ವಾರ್ಡ್ ನಂ- 49 ಸಂಜಯ ಸವ್ವಾಶೇರಿ, ವಾರ್ಡ್ ನಂ- 19 ಆರತಿ ಪಾಟೋಳೆ, ವಾರ್ಡ್ ನಂ- 19 ಶಿವಾನಂದ ಮುರಗೋಡ, ವಾರ್ಡ್ ನಂ- 36 ಜ್ಯೋತಿ ಭಾವಿಕಟ್ಟಿ, ವಾರ್ಡ್ ನಂ- 46 ಸುರೇಶ ಯಾದವ, ವಾರ್ಡ್ ನಂ- 47 ಶಿವಾಜಿ ಸುಂಟಕರ ಅವರನ್ನು ಇಂದಿನಿಂದ ಮುಂದಿನ 6 ವರ್ಷ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಶಶಿಕಾಂತ ಪಾಟೀಲ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts