More

    ದೀಪಾ ಚೋಳನ್ ವರ್ಗ, ನಿತೇಶ ಪಾಟೀಲ ನೂತನ ಡಿಸಿ

    ಧಾರವಾಡ: ಜಿಲ್ಲಾಧಿಕಾರಿ ದೀಪಾ ಚೋಳನ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಸೋಮವಾರ ಸಂಜೆ ಆದೇಶ ಹೊರಡಿಸಿದೆ. ನೂತನ ಜಿಲ್ಲಾಧಿಕಾರಿಯಾಗಿ 2012ನೇ ಬ್ಯಾಚ್​ನ ಐಎಎಸ್ ಅಧಿಕಾರಿ ನಿತೇಶ ಪಾಟೀಲ ಅವರನ್ನು ನಿಯುಕ್ತಿಗೊಳಿಸಲಾಗಿದೆ. ಅವರು ಈ ಮುಂಚೆ ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತರಾಗಿದ್ದರು. ಅವರು ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಕೆರೂಟಗಿ ಗ್ರಾಮದವರು.

    ದೀಪಾ ಚೋಳನ್ ಅವರನ್ನು ಬೆಂಗಳೂರು ಸರ್ವ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕ ಹುದ್ದೆಗೆ ವರ್ಗಾಯಿಸಲಾಗಿದೆ.

    2018ರ ಜು. 18ರಂದು ಧಾರವಾಡ ಜಿಲ್ಲಾಧಿಕಾರಿಯಾಗಿ ದೀಪಾ ಚೋಳನ್ ಅಧಿಕಾರ ವಹಿಸಿಕೊಂಡಿದ್ದರು. ದಶಕಗಳ ನಂತರ ಜಿಲ್ಲೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಯ ಭಾಗ್ಯ ಸಿಕ್ಕಿತ್ತು. 2019ರ ಜನವರಿಯಲ್ಲಿ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ಸಂಘಟಿಸಿದ್ದ ಶ್ರೇಯಸ್ಸು ದೀಪಾ ಚೋಳನ್ ಅವರಿಗೆ ಸಲ್ಲುತ್ತದೆ. ಸರ್ಕಾರದಿಂದ ಸಕಾಲಿಕ ಆರ್ಥಿಕ ನೆರವು ಬಾರದಿದ್ದಾಗಲೂ ಸಾರ್ವಜನಿಕರು, ಸಂಘ- ಸಂಸ್ಥೆಗಳು, ಉದ್ಯಮಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರು ಸಮ್ಮೇಳನ ಸಂಘಟಿಸಿದ್ದರು.

    ಇಲ್ಲಿನ ಕುಮಾರೇಶ್ವರ ನಗರದ ನಿರ್ಮಾಣ ಹಂತದ ಕಟ್ಟಡ ಕುಸಿದು ದೊಡ್ಡ ದುರಂತ ಸಂಭವಿಸಿದ್ದ ಸಂದರ್ಭವನ್ನು ಅತ್ಯಂತ ದಕ್ಷವಾಗಿ ನಿರ್ವಹಿಸಿದ್ದರು. ಜಿಲ್ಲಾ ದಂಡಾಧಿಕಾರಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸರ್ಕಾರ ಸೂಚಿಸಿತ್ತು. ಅದರಂತೆ ದೀಪಾ ಚೋಳನ್ ಅವರು, ಸಂಬಂಧಪಟ್ಟ ಅಧಿಕಾರಿಗಳು, ಕಟ್ಟಡದ ಮಾಲೀಕರು, ದುರಂತದಲ್ಲಿ ಮೃತಪಟ್ಟವರ ಸಂಬಂಧಿಗಳು, ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದವರು, ಗಾಯಾಳುಗಳು ಸೇರಿ ನೂರಾರು ಜನರ ಹೇಳಿಕೆಗಳನ್ನು ದಾಖಲಿಸಿ ಕಳೆದ ಮಾರ್ಚ್​ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

    2019ರ ಆಗಸ್ಟ್- ಅಕ್ಟೋಬರ್​ನಲ್ಲಿ ಸಂಭವಿಸಿದ ಭಾರಿ ಅತಿವೃಷ್ಟಿ, ಪ್ರವಾಹ ಪರಿಸ್ಥಿತಿಯನ್ನು ಅವರು ಸಮರ್ಥವಾಗಿ ನಿಭಾಯಿಸಿದ ರೀತಿ ಸಹ ಪ್ರಶಂಸೆಗೆ ಪಾತ್ರವಾಗಿದೆ. ಪ್ರಸಕ್ತ ಮಾರ್ಚ್​ನಿಂದ ಈವರೆಗೆ ಜಾರಿಯಲ್ಲಿರುವ ಕೋವಿಡ್ ಮಹಾಮಾರಿ ನಿಯಂತ್ರಣಕ್ಕೆ ಹಲವಾರು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಜಿಲ್ಲೆಯಲ್ಲಿ ಜನಮನ್ನಣೆ ಗಳಿಸಿದ್ದಾರೆ. 2 ವರ್ಷ ಪುರ್ಣಗೊಳ್ಳಲು ಇನ್ನು ಸ್ವಲ್ಪ ದಿನ ಇರುವಾಗಲೇ ಅವರನ್ನು ಸರ್ಕಾರ ವರ್ಗಾವಣೆ ಮಾಡಿರುವುದು, ಕರೊನಾ ಮಹಾಮಾರಿ ನಿಯಂತ್ರಣ ಸೇರಿ ಕೆಲವು ಪ್ರಮುಖ ಜವಾಬ್ದಾರಿಗಳ ನಿರ್ವಹಣೆ ಮೇಲೆ ತಾತ್ಕಾಲಿಕವಾಗಿ ಪರಿಣಾಮ ಬೀರುವ ಸಾಧ್ಯತೆಯೂ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts