More

    ದಿನಸಿ ಅಂಗಡಿ ಇಂದಿನಿಂದ ಆರಂಭ

    ಲಕ್ಷೆ್ಮೕಶ್ವರ: ಕಳೆದ 3 ದಿನಗಳಿಂದ ಸಂಪೂರ್ಣ ಬಂದ್ ಆಗಿದ್ದ ಪಟ್ಟಣದ ದಿನಸಿ ಅಂಗಡಿಗಳನ್ನು ಮಾರ್ಚ್ 31ರಿಂದ ಬೆಳಗ್ಗೆ 6ರಿಂದ 9 ಗಂಟೆವರೆಗೆ ಕೆಲ ಕಟ್ಟುನಿಟ್ಟಿನ ಸೂಚನೆ ಮೆರೆಗೆ ತೆರೆಯಬೇಕು ಎಂದು ಸೋಮವಾರ ತಹಸೀಲ್ದಾರ್ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ನಿರ್ಣಯಿಸಲಾಯಿತು.

    ಬಜಾರ್ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಸವೇಶ ಮಹಾಂತಶೆಟ್ಟರ್ ಮಾತನಾಡಿ, ನಿತ್ಯ ಬೆಳಗ್ಗೆ 6ರಿಂದ 10ರವರೆಗೆ ಕಿರಾಣಿ ಅಂಗಡಿ ತೆಗೆಯಲು ಅವಕಾಶ ನೀಡಬೇಕು. ಪುರಸಭೆಯವರು ಹಾಕಿದ ಮಾರ್ಕಿಂಗ್​ನಲ್ಲಿ ನಿಂತು ಸಾರ್ವಜನಿಕರು ಕಿರಾಣಿ ಖರೀದಿಸಬೇಕು. ಮಾರ್ಕಿಂಗ್​ನಲ್ಲಿ ನಿಲ್ಲುವಂತೆ ಆಯಾ ದಿನಸಿ ಅಂಗಡಿ ಮಾಲೀಕರೇ ನೋಡಿಕೊಳ್ಳುತ್ತೇವೆ. ಇಷ್ಟಾಗಿಯೂ ಜನಸಂದಣಿ ನಿಯಂತ್ರಣಕ್ಕೆ ಬಾರದಿದ್ದರೆ ತಾಲೂಕಾಡಳಿತದ ನಿರ್ದೇಶನದಂತೆ ನಡೆದುಕೊಳ್ಳುತ್ತೇವೆ ಅವಕಾಶ ಕಲ್ಪಿಸಿ ಎಂದರು. ಇದಕ್ಕೆ ಭರತಣ್ಣ ಬರಿಗಾಲಿ, ವಿಜಯಕುಮಾರ ಹತ್ತಿಕಾಳ, ಡಿ.ವಿ. ಹಿರೇಮಠ ಸೇರಿ ಎಲ್ಲ ವ್ಯಾಪಾರಸ್ಥರು ಸಹಮತ ವ್ಯಕ್ತಪಡಿಸಿದರು.

    ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಮಾತನಾಡಿ, ಜನರನ್ನು ಮಾರ್ಕಿಂಗ್​ನಲ್ಲಿ ನಿಲ್ಲುವಂತೆ ನೋಡಿಕೊಳ್ಳುವುದು ದಿನಸಿ ಅಂಗಡಿ ಮಾಲೀಕರ ಜವಾಬ್ದಾರಿ. ಇದನ್ನು ಪಾಲಿಸದೆ ಬೇಕಾಬಿಟ್ಟಿ ಕಿರಾಣಿ ವಸ್ತುಗಳನ್ನು ಮಾರಾಟ ಮಾಡಿದ್ದು ಕಂಡು ಬಂದರೆ ಅಂತಹ ವ್ಯಾಪಾರಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ರೈತರಿಗೆ ಗೊಬ್ಬರ ಮತ್ತು ಬಿತ್ತನೆ ಬೀಜ ಖರೀದಿಸಲು ಅನುಕೂಲ ಮಾಡಿಕೊಡಬೇಕು ಎಂದು ಗೊಬ್ಬರ ಅಂಗಡಿ ಮಾಲೀಕರಾದ ಸುಭಾಷ ಬಟಗುರ್ಕಿ, ಅಡಿವೆಪ್ಪ ಸವಣೂರ, ನಾಗರಾಜ ಬಟಗುರ್ಕಿ, ಶಿವು ಮೆಕ್ಕಿ, ಶಕ್ತಿ ಕತ್ತಿ ಮನವಿ ಮಾಡಿದರು. ಪ್ರತಿಕ್ರಿಯಿಸಿದ ತಹಸೀಲ್ದಾರ್, ಗೊಬ್ಬರ ಅಂಗಡಿಯವರು ಬೆಳಗ್ಗೆ 6ರಿಂದ 9ರವರೆಗೆ ವ್ಯಾಪಾರ ಮಾಡಬಹುದು. ರೈತರು ಬರುವಾಗ ಹೊಲದ ಉತಾರಗಳನ್ನು ತೆಗೆದುಕೊಂಡು ಬರಬೇಕು ಎಂದರು.

    ದಿನಸಿ ಮತ್ತು ಗೊಬ್ಬರ ಅಂಗಡಿಯವರು ಮಾರ್ಕಿಂಗ್​ನಲ್ಲಿ ನಿಂತವರಿಗೆ ಮಾತ್ರ ಮಾರಾಟ ಮಾಡಬೇಕು. ಜನದಟ್ಟಣೆ ಕಂಡುಬಂದರೆ ಅಥವಾ ಸರ್ಕಾರದ ನಿಯಮ ಪಾಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ದಿನಸಿಗಾಗಿ ದ್ವಿಚಕ್ರ ವಾಹನ, ಟಂಟಂ, ಲಾರಿ, ಇತರ ವಾಹನ ತರಲು ಮಾರ್ಕೆಟ್​ನಲ್ಲಿ ಅವಕಾಶವಿಲ್ಲ. ಕಿರಾಣಿ ಅಂಗಡಿಗಳನ್ನು ಹೊರತು ಪಡಿಸಿ ಯಾವುದೇ ಅಂಗಡಿಗಳು ತೆರೆಯುವಂತಿಲ್ಲ ಎಂದು ಪಿಎಸ್​ಐ ಶಿವಯೋಗಿ ಲೋಹಾರ ಹೇಳಿದರು.

    ರೈತ ಮುಖಂಡ ಚನ್ನಪ್ಪ ಜಗಲಿ ಮಾತನಾಡಿ, ರೈತರು ಬೆಳೆದ ತರಕಾರಿಯನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಉಪತಹಸೀಲ್ದಾರ್ ಮಂಜುನಾಥ ದಾಸಪ್ಪನವರ, ಪುರಸಭೆ ಮುಖ್ಯಾಧಿಕಾರಿ ಆರ್.ಎಂ. ಪಾಟೀಲ, ಪಿಎಸ್​ಐ ಶಿವಯೋಗಿ ಲೋಹಾರ, ಮಂಜುನಾಥ ಮುದಗಲ್ಲ, ಆನಂದ ಬದಿ, ಬಸವಣ್ಣೆಪ್ಪ ನಂದೆಣ್ಣವರ ಇದ್ದರು.

    ಹೊರನಡೆದ ತರಕಾರಿ ವ್ಯಾಪಾರಸ್ಥರು: ಕಳೆದ ನಾಲ್ಕೈದು ದಿನಗಳಿಂದ ತಳ್ಳುವ ಗಾಡಿ ಮೂಲಕ ಮನೆಮನೆಗೆ ತರಕಾರಿ ತಲುಪಿಸುವ ಕಾರ್ಯ ಸುಸೂತ್ರವಾಗಿ ಸಾಗಿದ್ದರೂ ಸಹ ತರಕಾರಿ ಹರಾಜು ಸಮಯದಲ್ಲಿ ನೂರಾರು ಜನ ಸೇರುವುದು ಕಂಡು ಬಂದಿದೆ. ಕಾರಣ ಬೇರೆ ಜಿಲ್ಲೆ ಮತ್ತು ತಾಲೂಕುಗಳಿಂದ ದಲಾಲರು ತರಕಾರಿ ತರಿಸಬಾರದು ಹಾಗೂ ಅವರಿಗೆ ತರಕಾರಿ ಕೊಡಬಾರದು. ಅಲ್ಲದೆ, ಇನ್ನು ಮುಂದೆ ವಾರದಲ್ಲಿ ಎರಡು ದಿನ ಮಾತ್ರ ತರಕಾರಿ ಹರಾಜು ನಡೆಸಬೇಕು ಎಂದು ತಹಸೀಲ್ದಾರರು ಸೂಚಿಸಿದರು. ‘ಇಡೀ ತಾಲ್ಲೂಕಿನ ಜನತೆಗೆ ಸಾಕಾಗುಷ್ಟು ತರಕಾರಿ ನಮ್ಮಲ್ಲಿ ಬೆಳೆಯುವುದಿಲ್ಲ. ಕಾರಣ ಬೇರೆ ತಾಲೂಕಿನ ರೈತರು ಮತ್ತು ವ್ಯಾಪಾರಸ್ಥರಿಗೆ ಅವಕಾಶ ಮಾಡಿಕೊಡಬೇಕು’ ಎಂದು ತರಕಾರಿ ವ್ಯಾಪಾರಸ್ಥರು ಮನವಿ ಮಾಡಿದರು. ಇದಕ್ಕೆ ತಹಸೀಲ್ದಾರರು ಒಪ್ಪಿಗೆ ನೀಡಲಿಲ್ಲ. ಆಗ ತರಕಾರಿ ದಲಾಲರು ಸಭೆಯಿಂದ ಹೊರ ನಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts