More

    ದಿಂಡೂರ ಗ್ರಾಮದಲ್ಲಿ 15ಮಂದಿ ಅಸ್ವಸ್ಥ

    ಗಜೇಂದ್ರಗಡ: ತಾಲೂಕಿನ ರಾಜೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಂಡೂರ ಗ್ರಾಮದಲ್ಲಿ ಒಂದು ವಾರದಿಂದ ವಾಂತಿಭೇದಿ ಉಲ್ಬಣಗೊಂಡಿದೆ. ಕಲುಷಿತ ನೀರು ಸೇವನೆಯಿಂದ 15ಕ್ಕೂ ಅಧಿಕ ಜನರು ಅಸ್ವಸ್ಥಗೊಂಡಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ವಣವಾಗಿದೆ.

    ಏನಿದು ಘಟನೆ?: ಗ್ರಾಮದಲ್ಲಿ ಕಳೆದ 4 ತಿಂಗಳಿನಿಂದ ಕೇಂದ್ರ ಸರ್ಕಾರದ ಜಲಜೀವನ ಮಿಷನ್ ಯೋಜನೆಯಡಿ ಪೈಪ್​ಲೈನ್ ಅಳವಡಿಸುವಾಗ ಕೆಲವೆಡೆ ಹಳೆಯ ಪೈಪ್ ಒಡೆದಿವೆ. ಪೈಪ್​ಗಳು ಒಡೆದಿರುವಲ್ಲಿ ಕಲುಷಿತ ನೀರು ಸೇರಿದ್ದರಿಂದ ಈ ತೊಂದರೆ ಎದುರಾಗಿದೆ ಎಂಬುದು ಗ್ರಾಮಸ್ಥರ ಆರೋಪ. ಗ್ರಾಮದಲ್ಲಿ 1,500 ಜನಸಂಖ್ಯೆ ಇದ್ದು, ಆರೋಗ್ಯ ಇಲಾಖೆಯ ಸಿಬ್ಬಂದಿ ಗ್ರಾಮದಲ್ಲಿ ಕನಿಷ್ಠ 15 ದಿನ ವಾಸ್ತವ್ಯ ಹೂಡಿ ಪ್ರತಿ ಮನೆಯ ಸದಸ್ಯರ ತಪಾಸಣೆ ನಡೆಸಬೇಕು ಎಂದು ಗ್ರಾಮದ ಶರೀಫ ಸೌದಾಗರ ಒತ್ತಾಯಿಸಿದರು.

    ಗುರುವಾರ ಒಂದೇ ಮನೆಯ ಶರಣಪ್ಪ ಮಲ್ಲಪ್ಪ ಮೇಟಿ, ಕಳಕಪ್ಪ ಮಲ್ಲಪ್ಪ ಮೇಟಿ ಸಹೋದರರು ವಾಂತಿ ಮತ್ತು ಭೇದಿಯಿಂದ ಅಸುನೀಗಿದ್ದಾರೆ. ಇದಕ್ಕೆಲ್ಲ ಜಲಜೀವನ ಮಿಷನ್ ಯೋಜನೆ ಕಾಮಗಾರಿ ವಿಳಂಬವಾಗಿರುವುದೇ ಕಾರಣ. ಈ ಕುರಿತು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೆ ಪ್ರಯೋಜನವಾಗಿಲ್ಲ ಎಂದು ಗ್ರಾಮದ ಕಳಕಪ್ಪ ಕಂಬಳಿ ದೂರಿದರು.

    ಗ್ರಾಮದ 3 ಜನರು ತೀವ್ರ ವಾಂತಿ-ಭೇದಿಯಿಂದ ಬಳಲುತ್ತಿದ್ದು, ಅವರನ್ನು ಗಜೇಂದ್ರಗಡದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. 12ಕ್ಕೂ ಅಧಿಕ ಜನರಿಗೆ ಆರೋಗ್ಯ ಇಲಾಖೆಯ ಮೊಬೈಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಪ್ರತಿ ಮನೆಗೆ ಭೇಟಿ ನೀಡಿ, ಮನೆಯಲ್ಲಿನ ಹಳೇ ನೀರನ್ನು ಚೆಲ್ಲಿ ಹೊಸ ನೀರನ್ನು ತುಂಬಿಕೊಳ್ಳಬೇಕು. ಕಾಯಿಸಿ ಆರಿಸಿದ ನೀರು ಕುಡಿಯಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

    ಗ್ರಾಪಂನಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಆ ನೀರು ಕೂಡ ಕುಡಿಯಲು ಯೋಗ್ಯವಾಗಿಲ್ಲ. ಇನ್ನು ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಸರಿಯಾಗಿಲ್ಲ. ಹೀಗಾಗಿ, ಜನರು ಹೊಲ- ತೋಟಗಳಿಂದ ನೀರು ತರುತ್ತಿದ್ದಾರೆ.

    ವೈದ್ಯರು, ಅಧಿಕಾರಿಗಳ ಭೇಟಿ

    ಗ್ರಾಮಕ್ಕೆ ತಾಲೂಕು ಆರೋಗ್ಯ ಮೇಲ್ವಿಚಾರಕ ಬಿ.ಆರ್. ಪಾಟೀಲ, ಸೂಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಶರಣು ಗಾಣಿಗೇರ, ವೈದ್ಯಾಧಿಕಾರಿ ರೇಖಾ ಹೊಸಮನಿ, ಪಿಡಿಒ ಬಿ.ಎನ್. ಇಟಗಿಮಠ. ಮನೋಹರ ಕಣ್ಣಿ, ಡಾ. ಪ್ರವೀಣ ನಿಡಗುಂದಿ, ಆರ್.ಎಫ್. ಅರಹುಣಸಿ, ಎಂ ಎಸ್. ರಬ್ಬನಗೌಡರ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಆರೋಗ್ಯ ಇಲಾಖೆ ಸಿಬ್ಬಂದಿ ವಹೀದಾ ನಮಾಜಿ, ಮಹೇಶ ಹಿರೇಮಠ, ಹಫೀಜಾ ಯಲಿಗಾರ, ಪದ್ಮಶ್ರೀ ಚೌಗಲಾ ಮನೆಮನೆಗೆ ತೆರಳಿ ಸಮೀಕ್ಷೆ ನಡೆಸಿದರು.

    ದಿಂಡೂರ ಗ್ರಾಮದಲ್ಲಿ ಹೊಸ ಪೈಪ್​ಲೈನ್ ಅಳವಡಿಸುವಾಗ ಹಲವು ಕಡೆ ಹಳೆಯ ಪೈಪ್​ಲೈನ್ ಒಡೆದಿದೆ. ಅದರಲ್ಲಿ ಕಲುಷಿತ ನೀರು ಸೇರಿಕೊಂಡು ಮನೆಗಳಿಗೆ ಪೂರೈಕೆಯಗಿದೆ. ಇದರಿಂದ ಕೆಲವರಿಗೆ ವಾಂತಿ-ಭೇದಿ ಉಲ್ಬಣವಾಗಿದೆ. ವೈದ್ಯರು, ಆಶಾ ಕಾರ್ಯಕರ್ತೆಯರ ಮೂಲಕ ಮನೆಮನೆ ಸಮೀಕ್ಷೆ ನಡೆದಿದೆ. ರೋಗ ಲಕ್ಷಣವಿದ್ದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನೀರು ಶುದ್ಧೀಕರಿಸಿ ಪೂರೈಸುವಂತೆ ಈಗಾಗಲೇ ಪಂಚಾಯಿತಿ ಸಿಬ್ಬಂದಿಗೆ ತಿಳಿಸಲಾಗಿದೆ. ಇನ್ನು ಗ್ರಾಮದಲ್ಲಿ ಮೃತಪಟ್ಟ ಇಬ್ಬರ ಪೈಕಿ ಒಬ್ಬರಿಗೆ ಮೂರ್ಛೆ ರೋಗವಿತ್ತು ಹಾಗೂ ಇನ್ನೊಬ್ಬರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು.

    | ಡಾ. ಜಗದೀಶ ನುಚ್ಚಿನ, ಜಿಲ್ಲಾ ಆರೋಗ್ಯ ಸಮೀಕ್ಷಾಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts