More

    ದಾವಣಗೆರೆಯಲ್ಲಿ ಸ್ಮೃತಿ ಇರಾನಿ ರೋಡ್ ಶೋ- ಮತಗಟ್ಟೆಗಳಲ್ಲಿ ಇರಲಿ ಹುರುಪು

    ದಾವಣಗೆರೆ: ಬೆಂಗಳೂರು ಸೇರಿ ಎಲ್ಲೆಡೆ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್‌ಶೋ ಭವ್ಯವಾಗಿ ನಡೆದಿದೆ. ಜನರು ದೊಡ್ಡ ಸಂಖ್ಯೆಯಲ್ಲಿ ಬಂದು ಆಶೀರ್ವದಿಸಿದ್ದಾರೆ. ಈ ಹುರುಪು ಮತಗಟ್ಟೆವರೆಗೂ ವ್ಯಾಪಿಸಲಿ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಮನವಿ ಮಾಡಿದರು.
    ದಾವಣಗೆರೆ ಉತ್ತರ-ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪರವಾಗಿ ನಗರದಲ್ಲಿ ರೋಡ್ ಶೋ ನಡೆಸಿದ ಅವರು ವಿನೋಬನಗರದಲ್ಲಿ ಮತಯಾಚನೆ ಮಾಡಿ ಮಾತನಾಡಿದರು.

    ಕಾಂಗ್ರೆಸ್‌ನ ವಂಶವಾಹಿ ರಾಜಕೀಯಕ್ಕೆ ಬಿಜೆಪಿ ಕಾರ್ಯಕರ್ತರು ಸವಾಲು ಹಾಕಿದ್ದಾರೆ. ಮೇ 10ರಂದು ನಡೆಯುವ ಮತದಾನದಲ್ಲಿ ಕಮಲ ಗುರುತಿಗೆ ಗುಂಡಿ ಒತ್ತುವ ಮೂಲಕ ಬಿಜೆಪಿ ಸರ್ಕಾರ ರಚನೆಗೆ ಸಹಕರಿಸಬೇಕು ಎಂದು ಹೇಳಿದರು.
    ಸಚಿವರು ಬರುವಿಕೆಗೂ ಮುನ್ನವೇ ದುರ್ಗಾಂಬಿಕಾ ದೇವಸ್ಥಾನ ಆವರಣದ ಶಿವಾಜಿ ವೃತ್ತದಿಂದ ಆರಂಭವಾಗಿದ್ದ ಮೆರವಣಿಗೆ ಕಾಳಿಕಾದೇವಿ ರಸ್ತೆ, ವಸಂತ ರಸ್ತೆ ಮೂಲಕ ವೀರಮದಕರಿನಾಯಕ ವೃತ್ತ ತಲುಪಿತು.
    ಅಲ್ಲಿಂದ ರೋಡ್‌ಶೋನಲ್ಲಿ ಭಾಗಿಯಾಗಿದ್ದ ಸ್ಮೃತಿ ಇರಾನಿ, ಬಜರಂಗ ಬಲೀ ಕಿ ಜೈ, ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಹಾಕಿ ಕಾರ್ಯಕರ್ತರನ್ನು ಹುರಿದುಂಬಿಸಿದರು. ಹೂವಿನ ದಳಗಳನ್ನು ತಮ್ಮತ್ತ ಎಸೆಯದೆ ಕಾರ್ಯಕರ್ತರತ್ತ ಎಸೆಯುವಂತೆ ಕೈ ಸಂಜ್ಞೆ ಮಾಡಿದರು.
    ರಸ್ತೆಯುದ್ದಕ್ಕೂ ಬಿಜೆಪಿ ನಾಯಕರಿಗೆ ಜಯಕಾರ ಮೊಳಗಿತು. ನಾಸಿಕ್ ಡೋಲುಗಳು ಸದ್ದು ಮಾಡಿದವು. ಬಿಸಿಲಿನಲ್ಲೂ ಕಾರ್ಯಕರ್ತರು ಹೆಜ್ಜೆ ಹಾಕಿದರು. ಅಲ್ಲಿಂದ ಕಿತ್ತೂರು ರಾಣಿ ಚನ್ನಮ್ಮ ವೃತ್ತ ಮೂಲಕ ವಿನೋಬನಗರದ ಮೊದಲನೇ ಮುಖ್ಯರಸ್ತೆಯಲ್ಲಿ ಸಾಗಿ ಅಂತ್ಯಗೊಂಡಿತು.
    ರೋಡ್‌ಶೋನಲ್ಲಿ ಬಿಜೆಪಿ ಬಾವುಟದ ಜತೆಗೆ ಬಜರಂಗಬಲಿಯ ವಿಶೇಷ ಬಾವುಟಗಳೂ ರಾರಾಜಿಸಿದವು. ಅಲ್ಲಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿದರು. ಸಂಸದ ಜಿ.ಎಂ.ಸಿದ್ದೇಶ್ವರ, ಗಾಯತ್ರಿ ಸಿದ್ದೇಶ್ವರ, ಅಭ್ಯರ್ಥಿಗಳಾದ ಲೋಕಿಕೆರೆ ನಾಗರಾಜ್, ಬಿ.ಜಿ.ಅಜಯಕುಮಾರ್, ಮುಖಂಡರಾದ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಶ್ರೀನಿವಾಸ ದಾಸಕರಿಯಪ್ಪ, ಪಾಲಿಕೆ ಸದಸ್ಯರಾದ ಸೋಗಿ ಶಾಂತಕುಮಾರ್, ರಾಕೇಶ್ ಜಾಧವ್ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts