More

    ದಾವಣಗೆರೆಯಲ್ಲಿ ಸಂಕ್ರಾಂತಿ ಸಂಭ್ರಮ- ಪಾರ್ಕ್ ವಿವಿಧೆಡೆ ಜನಸಂದಣಿ

    ದಾವಣಗೆರೆ: ಹೊಸ ಸಂವತ್ಸರದ ಮೊದಲ ಹಬ್ಬ ಮಕರ ಸಂಕ್ರಾಂತಿಗೆ ನಗರದೆಲ್ಲೆಡೆ ಭಾನುವಾರ, ಸಂಭ್ರಮದ ವಾತಾವರಣ. ಪಾರ್ಕ್, ಪ್ರಮುಖ ತಾಣಗಳಲ್ಲದೆ ಹೋಟೆಲ್‌ಗಳಲ್ಲೂ ಜಮಾಯಿಸಿದ ಜನರಲ್ಲಿ ಸಡಗರ ಮನೆ ಮಾಡಿತ್ತು.
    ಚಾಪೆ, ಪ್ಲಾಸ್ಟಿಕ್ ಹಾಸು, ನೀರಿನ ಕ್ಯಾನ್‌ಗಳ ಸಹಿತವಾಗಿ ಜನರು ಕುಟುಂಬ ಸದಸ್ಯರೊಂದಿಗೆ ಪಾರ್ಕ್ ಹಾಗೂ ಪ್ರಮುಖ ತಾಣಗಳಿಗೆ ಮುಗಿ ಬಿದ್ದರು. ಜೋಳದ ರೊಟ್ಟಿ, ಚಪಾತಿ, ಬುತ್ತಿ, ಮುಳುಗಾಯಿ-ಮೆಣಸಿನಕಾಯಿ ಎಣಗಾಯಿ, ಗಡಸೆಪ್ಪು, ಶೇಂಗಾ ಮತ್ತಿತರೆ ಚಟ್ನಿಪುಡಿ ಸವಿದರು.
    ಸರ್ ಎಂ.ವಿಶ್ವೇಶ್ವರಯ್ಯ ಪಾರ್ಕ್, ಕಾಸಲ್ ಶ್ರೀನಿವಾಸ ಶೆಟ್ಟಿ ಪಾರ್ಕ್, ಚಿಣ್ಣರ ಉದ್ಯಾನ, ಗಂಗೂಬಾಯಿ ಹಾನಗಲ್ ಉದ್ಯಾನ ಸೇರಿದಂತೆ ಹಲವೆಡೆ ಮಕ್ಕಳು ಆಟಿಕೆಗಳು ಹಾಗೂ ಜಿಮ್‌ನ ಸಲಕರಣೆಗಳನ್ನು ಬಳಸಿ ಆಟವಾಡಿದರು.
    ದೊಡ್ಡಬಾತಿಯ ಪವಿತ್ರವನ, ಆನಗೋಡು ಪ್ರಾಣಿ ಸಂಗ್ರಹಾಲಯದ ಪ್ರಕೃತಿ ಮಡಿಲಲ್ಲಿಯೂ ಜನರು ಹಬ್ಬ ಆಚರಿಸಿದರು. ಮಧ್ಯಾಹ್ನದ ಬಿರುಬಿಸಿಲಿಗೆ ಆಸುಪಾಸಿನ ಐಸ್‌ಕ್ರೀಂ, ಕಬ್ಬಿನಹಾಲು, ಕಲ್ಲಂಗಡಿ, ಕಡ್ಲೆಗಿಡ, ಎಳನೀರು ವ್ಯಾಪಾರ, ಹಣ್ಣಿನ ಜ್ಯೂಸ್, ನೀರಿನ ಬಾಟಲಿಗೆ ಹೆಚ್ಚು ಬೇಡಿಕೆ ಇತ್ತು.
    ಭಾನುವಾರವೇ ಸಂಕ್ರಾಂತಿ ಆಗಿದ್ದರಿಂದಾಗಿ ಎಂದಿಗಿಂತಲೂ ಗಾಜಿನ ಮನೆಯಲ್ಲಿ ಹೆಚ್ಚಿನ ಜನಸಂದಣಿ ಕಂಡುಬಂತು. ಸಂಜೆವರೆಗೆ 2505 ಮಂದಿ ಶುಲ್ಕ ತೆತ್ತು ಭೇಟಿ ನೀಡಿದ್ದಾಗಿ ಅಧಿಕಾರಿಗಳು ತಿಳಿಸಿದರು. ಕಾರಿಡಾರ್‌ನಲ್ಲಿ ಊಟ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಮಕ್ಕಳು ವಿವಿಧ ಆಟಿಕೆಗಳನ್ನು ಹತ್ತಿ ಕುಣಿದಾಡಿದರು. ಯುವಕ ಯುವತಿಯರು ಮೊಬೈಲ್ ಸೆಲ್ಫಿ ಪಡೆದುಕೊಳ್ಳುವಲ್ಲಿ ನಿರತರಾಗಿದ್ದರು. ಸಂಜೆ ನಂತರ ಕೆಲವರು ನೀರಿನ ಕಾರಂಜಿ ನೋಟ ಕಣ್ತುಂಬಿಕೊಂಡರು. ಹರಿಹರ ಭದ್ರಾ ನದಿ ತಟದಲ್ಲಿ ಜನರು ಜಮಾಯಿಸಿದ್ದರು.
    ಮನೆ ಮನೆಗಳಲ್ಲಿಯೂ ಪರಸ್ಪರ ಎಳ್ಳು-ಬೆಲ್ಲ ಹಂಚಿ ಶುಭಾಶಯ ವಿನಿಮಯ ಮಾಡಿಕೊಂಡರು. ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ತಮಿಳು ಸಮುದಾಯದವರು ಮನೆಗಳಲ್ಲಿ ಪೊಂಗಲ್ ವಿಶೇಷ ಅಡುಗೆ ಮಾಡಿ ಸ್ನೇಹಿತರೊಂದಿಗೆ ಸವಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts