More

    ದಾವಣಗೆರೆಯಲ್ಲಿ ವಿಶ್ವ ಭೂಮಿ ದಿನಾಚರಣೆ- ಮಣ್ಣು- ಅರಣ್ಯ ಸಂರಕ್ಷಿಸಿ

    ದಾವಣಗೆರೆ: ನೈಸರ್ಗಿಕ ಸಂಪನ್ಮೂಲಗಳ ದುರ್ಬಳಕೆಯಿಂದಾಗಿ ಪರಿಸರದ ಮೇಲೆ ದುಷ್ಪರಿಣಾಮಗಳು ಆಗುತ್ತಿವೆ. ಇದನ್ನು ತಪ್ಪಿಸಲು ನೀರು, ಮಣ್ಣು, ಅರಣ್ಯ ರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ದಾವಣಗೆರೆ ಜಿಲ್ಲಾ ಪರಿಸರ ಅಧಿಕಾರಿ ಡಾ.ಎಚ್.ಲಕ್ಷ್ಮೀಕಾಂತ್ ಸಲಹೆ ನೀಡಿದರು.
    ನಗರದ ಬಿಇಎ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಭೂಮಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಗಣೇಶನ ಹಬ್ಬದಲ್ಲಿ ಮಣ್ಣಿನ ಗಣಪನ ಮೂರ್ತಿಗಳನ್ನು ಸಮುದ್ರಕ್ಕೆ ಹಾಕುವ ಮೂಲಕ ಅಮೂಲ್ಯ ಮಣ್ಣನ್ನು ಪೋಲು ಮಾಡುವ ಜತೆಗೆ ಕಲುಷಿತಗೊಳಿಸಲಾಗುತ್ತಿದೆ. ಮಣ್ಣು ನೆಲದ ಮೇಲಿರಬೇಕೇ ಹೊರತು ಸಮುದ್ರದಲ್ಲಿ ಅಲ್ಲ. ಹೀಗಾಗಿ ಮಣ್ಣಿನ ಜತೆಗೆ ನೀರಿನ ಮೂಲಗಳನ್ನು ಉಳಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
    ಸೌರಮಂಡಲದಲ್ಲಿ ಭೂಮಿ ವೈವಿಧ್ಯಮಯ ಗ್ರಹವಾಗಿದ್ದು, ಮನುಷ್ಯನಿಗೆ ಬೇಕಾದ ಎಲ್ಲಾ ವಸ್ತುಗಳು, ಶಕ್ತಿಗಳೂ ಮಣ್ಣಿನಿಂದಲೇ ದೊರಕುತ್ತವೆ. ಈ ಹಿನ್ನೆಲೆಯಲ್ಲಿ ಮಣ್ಣನ್ನು ಸಂರಕ್ಷಿಸಲು ಬೇಕಾದ ಕ್ರಮಗಳ ಬಗ್ಗೆ ಪ್ರತಿಯೊಬ್ಬರೂ ಚಿಂತಿಸಬೇಕು ಎಂದರು.
    ಬಂಗಾರದ ಮೇಲಿನ ಹೆಚ್ಚಿನ ಮೋಹವೂ ಪರಿಸರ ನಾಶಕ್ಕೆ ಕಾರಣ. 1 ಟನ್ ಅದಿರಿನಿಂದ ಕೇವಲ 5ರಿಂದ 7 ಗ್ರಾಂ ಬಂಗಾರ ಮಾತ್ರ ಹೊರ ತೆಗೆಯಬಹುದಾಗಿದೆ. ಜನರು ಪರಿಸರ ಪ್ರಿಯರಾಗಿದ್ದಲ್ಲಿ ಬಂಗಾರ ಕೊಳ್ಳುವುದನ್ನು ಬಿಟ್ಟು ಅಗತ್ಯ ಬಟ್ಟೆಗಳನ್ನು ಖರೀದಿಸುವುದು ಉತ್ತಮ ಎಂದು ಸಲಹೆ ನೀಡಿದರು.
    ಮನುಷ್ಯನಿಗೆ ಆಯಸ್ಸು, ಆರೋಗ್ಯ ವೃದ್ಧಿಸಬೇಕಾದರೆ ಕೃತಕ ಲೋಹಗಳ ಮೋಹ ಬಿಡಬೇಕು. ಅದರ ಬದಲಿಗೆ ನೀರು, ಮಣ್ಣಿನಂತಹ ನೈಸರ್ಗಿಕ ಸಂಪನ್ಮೂಲಗಳ ಬಳಸಿ ಆರೋಗ್ಯ ಪಡೆಯಬಹುದು. ಬಳಸಿದ ಅಡುಗೆ ಎಣ್ಣೆಯನ್ನು ಪದೇಪದೇ ಬಳಸಿದರೆ ಕ್ಯಾನ್ಸರ್ ರೋಗ ಉಲ್ಬಣಿಸಲಿದೆ ಎಂದು ಎಚ್ಚರಿಸಿದರು.
    ಮಾನವನ ಹಸ್ತಕ್ಷೇಪ ಇಲ್ಲದಿರುವ ಪ್ರಾಣಿಗಳು ಹೆಚ್ಚು ಕಾಲ ಬದುಕುತ್ತವೆ. ಆದರೆ, ನಾವು ಯಥೇಚ್ಛವಾಗಿ ಪ್ಲಾಸ್ಟಿಕ್ ಬಳಸುವ ಕಾರಣದಿಂದಾಗಿ ಜಾನುವಾರುಗಳಿಗೆ ಮಾರಕ ಆಗುತ್ತಿದೆ. ಬಳಸಿ ಬಿಸಾಡಿದ ಪ್ಲಾಸ್ಟಿಕ್ ಸಹಿತ ತರಕಾರಿಗಳನ್ನು ಹಸುಗಳು ತಿಂದು ಸಾಯುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
    ಪರಿಸರ ಸರ್ವೇಕ್ಷಣಾ ಸಮಿತಿಯ ಸದಸ್ಯ ಡಾ.ಜೆ.ಬಿ. ರಾಜು ಮಾತನಾಡಿ, ಭೂಮಿ ನಮಗೆ ಹೆತ್ತ ತಾಯಿಯ ಹಾಗೆ. ಭೂಮಿಯನ್ನು ಪ್ರೀತಿಸಿದರೆ ತಾಯಿಯನ್ನು ಪ್ರೀತಿಸಿದಂತೆ. ಪರಿಸರ ಸಂರಕ್ಷಣೆ ಭಾಗವಾಗಿ ನಾವು ಮೊದಲು ಕಸವನ್ನು ವಿಂಗಡಿಸಬೇಕು. ಹಸಿರು ಕಟ್ಟಡಗಳಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
    ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಆಡಳಿತಾಧಿಕಾರಿ ಪ್ರೊ.ವೈ. ವೃಷಭೇಂದ್ರಪ್ಪ, ಕಾಲೇಜಿನ ಪ್ರಾಚಾರ್ಯೆ ಡಾ.ಎ.ಜೆ.ನೀತಾ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಲ್.ಎಚ್.ಅರುಣಕುಮಾರ್, ವಿಜ್ಞಾನ ಪರಿಷತ್ತಿನ ಕಾರ್ಯದರ್ಶಿ ಎಂ.ಗುರುಸಿದ್ದಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts