More

    ದಾವಣಗೆರೆಯಲ್ಲಿ ಚಿರಂತನ ಉತ್ಸವ- ಅನುದಾನ ಪಡೆಯುವಲ್ಲಿ ಕರ್ನಾಟಕ ಹಿಂದೆ-ಅಶ್ವಥ್ ಹರಿತಸ್

    ದಾವಣಗೆರೆ; ಕೇಂದ್ರ ಸರ್ಕಾರದಿಂದ ಸಂಗೀತ-ನೃತ್ಯ ಶಾಲೆಗಳಿಗೆ ಅನುದಾನ ನೀಡುತ್ತಿದ್ದು ಇದನ್ನು ಪಡೆಯುವಲ್ಲಿ ಕರ್ನಾಟಕ ರಾಜ್ಯ ಹಿಂದುಳಿದಿದೆ ಎಂದು ಕೇಂದ್ರ ಸಂಸ್ಕೃತಿ ಇಲಾಖೆ ಸಲಹಾ ಸಮಿತಿ ಸದಸ್ಯ ಹಾಗೂ ಖ್ಯಾತ ನೃತ್ಯ ಗುರು ಡಾ.ಜಿ.ಕೆ. ಅಶ್ವಥ್ ಹರಿತಸ್ ಹೇಳಿದರು.
    ನಗರದ ಬಾಪೂಜಿ ಸಭಾಂಗಣದಲ್ಲಿ ಚಿರಂತನ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ‘ಚಿರಂತನ ಉತ್ಸವ-2023’ ಕಾರ್ಯಕ್ರಮದಲ್ಲಿ ಚಿರಂತನ ರಾಜ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
    ಕೇಂದ್ರ ಸರ್ಕಾರದ ಅನುದಾನವನ್ನು ಇತರೆ ರಾಜ್ಯಗಳು ಪಡೆಯುತ್ತಿವೆ. ಇದಕ್ಕೆ ಆಯಾ ಶಾಲೆಗಳ ನಿರ್ವಹಣೆ ಕುರಿತಂತೆ ಸರಿಯಾದ ದಾಖಲಾತಿಗಳು ಇರವುದು ಕಡ್ಡಾಯ. ಇಲ್ಲವಾದಲ್ಲಿ ಪ್ರಶ್ನಾರ್ಹವಾಗಲಿವೆ. ಚಿರಂತನ ಸಂಸ್ಥೆ ಕೂಡ ಇದರ ಲಾಭ ಪಡೆಯಲಿ ಎಂದು ಆಶಿಸಿದರು.
    ಸಂಗೀತ- ನೃತ್ಯಾಭ್ಯಾಸ ಮಾಡುತ್ತಿರುವ 8ರಿಂದ 25 ವರ್ಷದೊಳಗಿನ ಮಕ್ಕಳಿಗೆ ಒಟ್ಟು ನಾಲ್ಕು ವಯೋಮಾನದಡಿ ಕೇಂದ್ರ ಸರ್ಕಾರ ಸ್ಕಾಲರ್‌ಶಿಫ್ ನೀಡುತ್ತಿದೆ. 25ರಿಂದ 40 ವರ್ಷದೊಳಗಿನ ಸಂಗೀತ- ನೃತ್ಯಪಟುಗಳಿಗೆ ಗೌರವ ಫೆಲೋಶಿಫ್ ನೀಡುತ್ತಿದೆ. ಈ ಮೂಲಕ ಸಂಗೀತ-ನೃತ್ಯಕಲೆಗೆ ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿದೆ ಎಂದರು.
    ದಾವಣಗೆರೆಯಂತಹ ಬಿಸಿಲಿನ ಊರಲ್ಲಿಯೂ ತುಂಬಿದ ಸಭಾಂಗಣ ಹಾಗೂ ಮಕ್ಕಳ ನೃತ್ಯಾಭ್ಯಾಸ ಕಂಡು ಸಂತೋಷ ಎನಿಸುತ್ತಿದೆ. ಈ ರೀತಿಯ ವಾತಾವರಣ ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಕಂಡುಬರುವುದಿಲ್ಲ. ಏಕೆಂದರೆ ಬಹುತೇಕರು ಟೀವಿ ಧಾರಾವಾಹಿಗಳ ಮೋಹಕ್ಕೆ ಸಿಲುಕಿದ್ದಾರೆ ಎಂದು ವಿಷಾದಿಸಿದರು.
    ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮಾತನಾಡಿ ದಾವಣಗೆರೆ ನಗರದಲ್ಲಿ ಅನೇಕ ವರ್ಷಗಳ ಹಿಂದೆ ನೃತ್ಯಶಾಲೆಗಳೇ ಇರಲಿಲ್ಲ. ಇಂದು 8ರಿಂದ 10 ಶಾಲೆಗಳಿವೆ. ಪುರುಷರು-ಹೆಣ್ಣುಮಕ್ಕಳು ಕೂಡ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ದಾವಣಗೆರೆ ನೃತ್ಯಗಾರರು ವಿದೇಶಗಳಲ್ಲೂ ಪ್ರದರ್ಶನ ನೀಡಿದ್ದಾರೆ ಎಂದರು.
    ದಾವಣಗೆರೆ ನಗರದ ಬೆಣ್ಣೆನಗರಿ, ಖಾರಾ-ಮಂಡಕ್ಕಿ, ಶಿಕ್ಷಣನಗರಿ ಎಂಬ ಹೆಸರಿಗೆ ಸೀಮಿತವಾಗದೆ ನೃತ್ಯಕಲಾ ವಿಭಾಗದಲ್ಲೂ ಮುಂದಿನ ದಿನದಲ್ಲಿ ಉತ್ತಮ ಹೆಸರು ಬರುವಂತಾಗಲಿ ಎಂದು ಆಶಿಸಿದರು.
    ಉಪನ್ಯಾಸಕ ಶಶಿಧರ್ ತೆಂಗಲೆಮಠ್ ಮಾತನಾಡಿ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಸಾಮಾನ್ಯ ತಿಳಿವಳಿಕೆ, ಸೃಜನಾತ್ಮಕ ಕಲೆಗೆ ಹೆಚ್ಚು ಉತ್ತೇಜನ ಸಿಗಲಿದೆ. ಕೇಂದ್ರ ಸರ್ಕಾರ ಈ ಸಂಬಂಧ ಮಧ್ಯಂತರ ನೀತಿ ಜಾರಿಗೆ ತರಲಿದೆ. ಹೀಗಾಗಿ ಮಕ್ಕಳು ಓದಿಗೆ ಸೀಮಿತರಾದರೆ ಸಾಲದು. ಪಠ್ಯೇತರ ಚಟವಟಿಕೆಗಳಲ್ಲೂ ಹೆಚ್ಚು ತೊಡಗಬೇಕು ಎಂದು ಹೇಳಿದರು.
    ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೋಜ, ಬಾಪೂಜಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಕಿರುವಾಡಿ ಗಿರಿಜಮ್ಮ, ಸೇರಿ ಹಲವರಿಗೆ ‘ಕರ್ನಾಟಕ ಮಹಿಳಾ ಶ್ರೇಷ್ಠ ಸಾಧಕಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಖ್ಯಾತ ಉದ್ಯಮಿ-ರೂಪದರ್ಶಿ ಹೇಮಾ ನಿರಂಜನ್, ಜೆಸಿ ಸಂಸ್ಥೆ ಸದಸ್ಯ ಪ್ರದೀಪ್, ಚಿರಂತನ ಸಂಸ್ಥೆಯ ಅಧ್ಯಕ್ಷೆ ದೀಪಾ ಎನ್. ರಾವ್, ಕಾರ್ಯದರ್ಶಿ ಮಾಧವರಾವ್ ಪದಕಿ ಇದ್ದರು.
    ಕಾರ್ಯಕ್ರಮದಲ್ಲಿ ಮಕ್ಕಳು ಭರತನಾಟ್ಯ ಶಾಸ್ತ್ರೀಯ ನೃತ್ಯ, ದುರ್ಗಾ ದೇವಿಯು ಮಹಿಷಾಸುರನನ್ನು ಸಂಹರಿಸುವ ಕಥಾವಸ್ತುವುಳ್ಳ ‘ಮಹಿಷ ಮರ್ದಿನಿ’ ವಿಶೇಷ ನೃತ್ಯರೂಪಕ, ಬೆಂಗಳೂರಿನ ನೃತ್ಯ ಗುರುಗಳಾದ ಚಿತ್ರಾ ವಿನೋದ್ ಅವರ ಶಿಷ್ಯರಾದ ‘ಏಕ್ಯಂ’ ತಂಡದವರು ‘ಶಿವೋಹಂ’ ಎಂಬ ನೃತ್ಯ ರೂಪಕ ಪ್ರಸ್ತುತಪಡಿಸಿದರು. ಪಿಟೀಲು, ಕರ್ನಾಟಕ ಶಾಸ್ತ್ರೀಯ ಸಂಗೀತ, ಗಿಟಾರ್ ಹಾಗೂ ಕೀಬೋರ್ಡ್ ವಾದಕರು ತಮ್ಮ ಕಲಾ ಪ್ರದರ್ಶನದೊಂದಿಗೆ ರಂಜಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts