More

    ದಾದಿಯರ ಕರ್ತವ್ಯದಲ್ಲಿರಲಿ ಅಂತಃಕರಣ -ಡಾ. ರಾಘವನ್ –  ಶುಶ್ರೂಷಕರಿಗೆ ಮದರ್ ಥೆರೇಸಾ ಸೇವಾ ಪ್ರಶಸ್ತಿ ಪ್ರದಾನ

    ದಾವಣಗೆರೆ: ಶುಶ್ರೂಷಕರು ಸಾಮಾಜಿಕ ಪ್ರಜ್ಞೆ, ಮಾನವೀಯ ಮೌಲ್ಯ, ಅಂತಃಕರಣದಿಂದ ರೋಗಿಗಳಿಗೆ ಸೇವೆ ಸಲ್ಲಿಸಬೇಕು ಹಾಗೂ ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್ ಹೇಳಿದರು.
    ಮದರ್ ಥೆರೇಸಾರ 113ನೇ ಜನ್ಮದಿನದ ಪ್ರಯುಕ್ತ ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನಿಂದ ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಸರ್ಕಾರಿ ಶುಶ್ರೂಷ ತರಬೇತಿ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮದರ್ ಥೆರೇಸಾ ಸೇವಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
    ದೇಶದಲ್ಲಿ ಶೇ.65ರಷ್ಟು ಜನರು ಅಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪುತ್ತಿದ್ದಾರೆ. ಬದಲಾದ ಜೀವನಶೈಲಿ ಹಾಗೂ ತಂಬಾಕು, ಡ್ರಗ್ಸ್ ಹಾಗೂ ಮದ್ಯ ಸೇವನೆ ದುಶ್ಚಟಗಳೇ ಇದಕ್ಕೆ ಪ್ರಮುಖ ಕಾರಣ. ಈ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಮೂಲಕ ಅಮೂಲಾಗ್ರ ಬದಲಾವಣೆ ತಂದು ಉತ್ತಮ ಸಮಾಜ ನಿರ್ಮಿಸಬೇಕು ಎಂದು ತಿಳಿಸಿದರು.
    ದೇಶದಲ್ಲಿ ಜನರು ಸಾಂಕ್ರಾಮಿಕ ಕಾಯಿಲೆಗಳಿಂದ ಬಳಲುತ್ತಿದ್ದ ಸಂದರ್ಭದಲ್ಲಿ ಮದರ್ ಥೆರೇಸಾ ಅವರು ಪ್ರೀತಿ ಮತ್ತು ಅಂತಃಕರಣದಿಂದ ಸಲ್ಲಿಸಿದ ಸೇವೆ ಅನುಪಮ ಹಾಗೂ ಎಲ್ಲರಿಗೂ ಮಾದರಿ ಎಂದು ಸ್ಮರಿಸಿದರು.
    ಇಂದು ಕ್ಷಯ ಹಾಗೂ ಕುಷ್ಟ ರೋಗ ವಾಸಿಯಾಗುತ್ತಿವೆ. ಎಚ್‌ಐವಿ ನಿಯಂತ್ರಣದಲ್ಲಿ ಇರಿಸಬಹುದಾಗಿದ್ದರೂ ರೋಗಿಗಳನ್ನು ಹೊರಗಿಡುವ ಸ್ಥಿತಿಯಿದೆ ಎಂದು ವಿಷಾದಿಸಿದರು.
    ಕರುಣಾ ಜೀವ ಕಲ್ಯಾಣ ಟ್ರಸ್ಟ್ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಮಾತನಾಡಿ, ಮದರ್ ಥೆರೇಸಾ ಅವರ ಜೀವನ ಅದ್ಭುತ. ಅವರ ಮಾರ್ಗದರ್ಶನದಲ್ಲಿ 142 ಶಾಖೆಗಳ ಮೂಲಕ ಸುಮಾರು 4 ಸಾವಿರಕ್ಕೂ ಅಧಿಕ ಸ್ವಯಂಸೇವಕರು ಜಗತ್ತಿನಾದ್ಯಂತ ಅನನ್ಯ ಸೇವೆ ಸಲ್ಲಿಸಿದ್ದಾರೆ ಎಂದರು.
    ಜೀವನದಲ್ಲಿ ಯಾವುದೇ ಕೆಲಸ ಮಾಡಲು ಪ್ರೀತಿ ಮುಖ್ಯ. ಸಮಚಿತ್ತತೆ ಹಾಗೂ ಏಕತೆ ಬೇಕು. ವಿಶ್ವಪ್ರೇಮದಿಂದ ಯಾವುದೇ ಸಾಧನೆ ಕೈಗೊಳ್ಳಬಹುದು. ಪ್ರೀತಿಯಿಂದ ಮಾಡುವ ಸಣ್ಣ ಕೆಲಸಗಳು ಸಂತೋಷ ತಂದುಕೊಡುವ ಜತೆಗೆ ಎಲ್ಲ ಕಡೆಗಳಲ್ಲೂ ಪ್ರತಿಧ್ವನಿಸುತ್ತವೆ. ಅಹಂಕಾರ, ದುರಾಸೆ, ದ್ವೇಷ ಬದಿಗೊತ್ತಿ ಸೇವಾ ಕಾರ್ಯ ಕೈಗೊಳ್ಳುವಂತೆ ತಿಳಿಸಿದರು.
    ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಂ.ಬಿ. ನಾಗೇಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ತರಬೇತಿ ಶಾಲೆಯ ಪಾಚಾರ್ಯೆ ಎಸ್. ನಳಿನಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ನಿವಾಸಿ ವೈದ್ಯಾಧಿಕಾರಿ ಡಾ.ಎಸ್.ಕೆ. ನಾಗವೇಣಿ, ಶುಶ್ರೂಷ ಅಧೀಕ್ಷಕಿ ವರಲಕ್ಷ್ಮಿ ಬಿ. ಬಳ್ಳಾರಿ ಇತರರು ಇದ್ದರು.
    ಡಿ.ಸೌಭಾಗ್ಯಮ್ಮ ಸ್ವಾಗತಿಸಿದರು, ಬೋಧಕ ಆರ್.ರಾಮಚಂದ್ರಪ್ಪ ಸ್ವಾಗತಿಸಿದರು.
    ಪ್ರಶಸ್ತಿ ಪುರಸ್ಕೃತರು
    ಹಿರಿಯ ಶುಶ್ರೂಷ ಅಧಿಕಾರಿ ಸುವರ್ಣ ಬಿ. ಅಂಕಲಗಿ, ಶುಶ್ರೂಷ ಬೋಧಕಿ ಡಿ. ಸೌಭಾಗ್ಯಮ್ಮ ಹಾಗೂ ಪ್ರಾಥಮಿಕ ಸುರಕ್ಷಾ ಅಧಿಕಾರಿ ಟಿ. ನಾಗರತ್ನ ಅವರಿಗೆ ಮದರ್ ಥೆರೇಸಾ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts