More

    ದಸರಾ ಮೇಳಕ್ಕೆ ವಿಧ್ಯುಕ್ತ ಚಾಲನೆ


    ನಂಜನಗೂಡು: ದಸರಾ ವೈಭವವನ್ನು ಗ್ರಾಮೀಣ ಜನರು ಕಣ್ತುಂಬಿಕೊಳ್ಳಬೇಕು ಹಾಗೂ ಸ್ಥಳೀಯ ಜಾನಪದ ಕಲಾವಿದರಿಗೆ ವೇದಿಕೆ ಸಿಗುವಂತಾಗಬೇಕೆಂಬ ದೃಷ್ಟಿಯಿಂದ ಮೊದಲ ಬಾರಿ ನಂಜನಗೂಡಿನಲ್ಲಿ 9 ದಿನಗಳ ಕಾಲ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಬಿ.ಹರ್ಷವರ್ಧನ್ ಹೇಳಿದರು.


    ನಗರದ ಅರಮನೆ ಮೈದಾನ ಆವರಣದಲ್ಲಿ ಸೋಮವಾರ ಸಂಜೆ ಆರಂಭಗೊಂಡ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಮೇಳ ಉದ್ಘಾಟಿಸಿ ಮಾತನಾಡಿದರು. ಝಗಮಗಿಸುವ ದಸರಾ ಕಾರ್ಯಕ್ರಮಗಳನ್ನು ವೀಕ್ಷಿಸಲು ಮೈಸೂರಿಗೆ ತೆರಳುವ ಜನರಿಗೆ ಸಂಚಾರ ದಟ್ಟಣೆ ಹೆಚ್ಚಾಗಿ ಕಿರಿಕಿರಿಯಾಗುವ ಜತೆಗೆ ಸ್ಥಳಾವಕಾಶದ ತೊಂದರೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನೋಡುವ ಅವಕಾಶ ವಂಚಿತರಾಗುತ್ತಾರೆ. ಈ ತೊಂದರೆ ತಪ್ಪಿಸಿ ಗ್ರಾಮೀಣ ಜನರಿಗೆ ದಸರಾ ವೀಕ್ಷಣೆ ಮಾಡುವ ಅವಕಾಶ ಕಲ್ಪಿಸುವ ಉದ್ದೇಶದಿಂದ ಸರ್ಕಾರದ ಸಮ್ಮತಿ ಪಡೆದು ದಸರಾ ಆಯೋಜಿಸಲಾಗಿದೆ ಎಂದರು.
    ಸ್ಥಳೀಯ ಪ್ರತಿಭಾವಂತರಿಗೂ ಇಲ್ಲಿ ಅವಕಾಶ ಕಲ್ಪಿಸಿದ್ದು, ಧಾರ್ಮಿಕ ಭಾವನೆಗಳಿಗೆ ಪೂರಕವಾಗಿ ಜಾನಪದ ಕಲೆಗಳಿಗೂ ಆದ್ಯತೆ ನೀಡಲಾಗಿದೆ. ಮೈಸೂರು ಮಾದರಿಯಂತೆ 9 ದಿನಗಳ ಕಾಲ ಗ್ರಾಮೀಣ ದಸರಾ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾಕೂಟ ಕಾರ್ಯಕ್ರಮಗಳು ಜರುಗಲಿವೆ ಎಂದವರು ಹೇಳಿದರು.


    ತಾಲೂಕು ಪಂಚಾಯಿತಿ ಇಒ ಶ್ರೀನಿವಾಸ್ ಮಾತನಾಡಿ, ನಂಜನಗೂಡು ಜಾನಪದ ಕಲೆಗಳಿಗೆ ಹೆಸರುವಾಸಿಯಾಗಿದ್ದು ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗ್ರಾಮೀಣ ದಸರಾ ಆಯೋಜನೆಗೊಂಡಿದೆ ಎಂದರು.


    ತಮಿಳುನಾಡಿನ ಕಲಾ ತಂಡ ನಡೆಸಿಕೊಟ್ಟ ನೃತ್ಯ ಮನಸೂರೆಗೊಂಡಿತು. ಡೊಳ್ಳು ಕುಣಿತ, ಕಲಾಕುಟೀರ ನೃತ್ಯ ತಂಡ, ಜೇನುಗೂಡು ಕಲಾತಂಡ ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಕಣ್ಮನ ಸೆಳೆಯಿತು.


    ತಹಸೀಲ್ದಾರ್ ಎಂ.ಶಿವಮೂರ್ತಿ, ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಮಹದೇವಯ್ಯ, ನಗರಸಭಾಧ್ಯಕ್ಷ ಎಚ್.ಎಸ್.ಮಹದೇವಸ್ವಾಮಿ ಉಪಾಧ್ಯಕ್ಷೆ ನಾಗಮಣಿ, ಸದಸ್ಯರಾದ ಸಿದ್ದರಾಜು, ಶ್ವೇತಲಕ್ಷ್ಮಿ, ರಂಗಸ್ವಾಮಿ, ಬಾಲರಾಜು, ತಾಪಂ ಮಾಜಿ ಸದಸ್ಯ ಹೆಮ್ಮರಗಾಲ ಶಿವಣ್ಣ, ನಗರಸಭೆ ಆಯುಕ್ತ ರಾಜಣ್ಣ, ಉಪತಹಸೀಲ್ದಾರ್ ಭೈರಯ್ಯ ಇತರರು ಇದ್ದರು.


    9 ದಿನಗಳ ಕಾರ್ಯಕ್ರಮ: ಸೆ.26 ರಿಂದ ಅ.4ವರೆಗೆ ದಿನವೂ ಸಂಜೆ 5.30 ರಿಂದ ರಾತ್ರಿ 9.30 ವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ಸುಗಮ ಸಂಗೀತ, ಜಾನಪದ ನೃತ್ಯ, ಶಾಸ್ತ್ರೀಯ ಸಂಗೀತಗಳು ಕಲಾಸಕ್ತರನ್ನು ಸೆಳೆಯಲಿವೆ. ಸಾವಿರಾರು ಜನರು ಕುಳಿತು ವೀಕ್ಷಣೆ ಮಾಡಲು ಬೃಹತ್ ವೇದಿಕೆ ವ್ಯವಸ್ಥೆ ಮಾಡಲಾಗಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts