More

    ದನಗಳ ಹೆಸರಲ್ಲಿ ಧನ ವ್ಯಯ

    ಶಿರಸಿ: ಇಲ್ಲಿನ ನಗರಸಭೆ ಬಿಡಾಡಿ ದನಗಳ ನಿರ್ವಹಣೆಗೆ ಕೊಂಡವಾಡೆ ನಿರ್ವಣದ ಹೆಸರಲ್ಲಿ ಲಕ್ಷಾಂತರ ರೂಪಾಯಿ ಹಣ ವ್ಯಯಿಸಿದರೂ ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಕೊಂಡವಾಡೆ ಹೆಸರಲ್ಲಿ ಲಕ್ಷಾಂತರ ರೂಪಾಯಿ ಮೀಸಲಿಡುವ ಕಾರ್ಯ ಮಾತ್ರ ನಡೆಯುತ್ತಿದ್ದು, ಅನುಮಾನಗಳಿಗೆ ಎಡೆ ಮಾಡಿದೆ.

    ನಗರದಲ್ಲಿ ಬಿಡಾಡಿ ದನಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇವುಗಳ ನಿಯಂತ್ರಣಕ್ಕಾಗಿ 2014-15ನೇ ಸಾಲಿನ ನಗರಸಭೆ ನಿಧಿಯಡಿ 8 ಲಕ್ಷ ರೂ. ವೆಚ್ಚ ಮಾಡಿರುವ ನಗರಸಭೆ 2016ರಲ್ಲಿ ಕೊಂಡವಾಡೆ ನಿರ್ವಿುಸಿತ್ತು. ರಾಘವೇಂದ್ರ ಮಠದ ಸಮೀಪವಿರುವ ನಗರಸಭೆಯ ನೀರು ಶುದ್ಧೀಕರಣ ಘಟಕದ ಆವರಣದಲ್ಲಿ ಸುರಕ್ಷಿತ ಜಾಗದಲ್ಲಿ ಈ ಕಟ್ಟಡ ತಲೆಎತ್ತಿತ್ತು. ಆದರೆ, ಕಟ್ಟಡ ನಿರ್ವಣಗೊಂಡ ಮೇಲೆ ಒಮ್ಮೆ ಕೂಡ ಇದು ಬಳಕೆಯಾಗಿರಲಿಲ್ಲ. ಹೀಗಾಗಿ ಮೇಲ್ಛಾವಣಿಗೆ ಹಾಕಿದ್ದ ಕಬ್ಬಿಣದ ತಗಡುಗಳು ತುಕ್ಕು ಹಿಡಿದು ನಾಶವಾಗಿದ್ದವು. ಕಟ್ಟಡ ಕೂಡ ಶಿಥಿಲವಾಗಿತ್ತು. ಹೀಗಾಗಿ 2020-21ನೇ ಸಾಲಿನಲ್ಲಿ ಮತ್ತೆ ಈ ಕಟ್ಟಡದ ದುರಸ್ತಿಗೆ 10 ಲಕ್ಷ ರೂ.ಗಿಂತ ಹೆಚ್ಚು ಅನುದಾನ ಮೀಸಲಿಡಲಾಗಿತ್ತು. ಕೆಲ ಕಾಮಗಾರಿಗಳು ಅರ್ಧಂಬರ್ಧ ನಡೆದಿವೆ.

    ಮತ್ತೆ ಲಕ್ಷ ಲಕ್ಷ ಗುತ್ತಿಗೆ: ನಗರದಲ್ಲಿ ಈಗಾಗಲೇ ಇರುವ ಕೊಂಡವಾಡೆಯಲ್ಲಿ ಒಂದು ದಿನವೂ, ಒಂದು ದನವನ್ನು ಕಟ್ಟಿಲ್ಲ. ಇದುವರೆಗೆ ಅಂದಾಜು 20 ಲಕ್ಷ ರೂ.ಗಳಿಗೂ ಹೆಚ್ಚಿನ ಹಣವನ್ನು ಕೊಂಡವಾಡೆಗೆ ಖರ್ಚು ಮಾಡಲಾಗಿದೆ. ಆದರೆ, ಇಡೀ ಕಟ್ಟಡದ ಸುತ್ತ ಗಿಡ-ಗಂಟಿ, ಪೊದೆಗಳು ಬೆಳೆದಿವೆ. ನಿರ್ವಹಣೆಯಿಲ್ಲದ ಕಟ್ಟಡ ಪದೇ ಪದೆ ಹಾಳುಬೀಳುತ್ತಿದೆ. ಇದೀಗ ಮೇಲ್ಛಾವಣಿ ನಿರ್ವಿುಸಲು ನಗರಾಡಳಿತ ಮುಂದಾಗಿದ್ದು, ಅದಕ್ಕೆಂದೇ 7 ಲಕ್ಷ ರೂ. ಯೋಜನೆ ಸಿದ್ಧಪಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರತೀ ವರ್ಷ ಕೊಂಡವಾಡೆ ಹೆಸರಲ್ಲಿ ಹಣ ತೆಗೆದಿಡುವ ಕಾರ್ಯ ನಗರಾಡಳಿತದಿಂದ ಆಗುತ್ತಿದ್ದು, ಕಾಮಗಾರಿ ಮಾತ್ರ ನಿರೀಕ್ಷೆಯಂತೆ ನಡೆಯುತ್ತಿಲ್ಲ. ಇದು ಹಲವು ಸಂಶಯಕ್ಕೆ ಕಾರಣವಾಗಿದೆ ಎಂಬುದು ಸಾರ್ವಜನಿಕರ ಮಾತಾಗಿದೆ.

    ಬಿಡಾಡಿ ದನಗಳು ಹೆಚ್ಚಾಗುತ್ತಿದ್ದರೂ ನಗರಸಭೆ ಅವುಗಳ ನಿರ್ವಹಣೆಯಲ್ಲಿ ಎಡವಿದೆ. ಕೊಂಡವಾಡೆ ನಿರ್ವಿುಸಿ ಬಿಡಾಡಿ ದನಗಳಿಗೆ ಆಶ್ರಯವಾಗಬೇಕಿದ್ದ ನಗರಾಡಳಿತವೇ ಕೊಂಡವಾಡೆ ಕಾಮಗಾರಿ ಮುಗಿಸುತ್ತಿಲ್ಲ. ವಿವಿಧ ಕಾರಣ ನೀಡಿ ಲಕ್ಷಾಂತರ ರೂಪಾಯಿ ವ್ಯಯಿಸುವ ನಗರಸಭೆ ಅದರ ನಿರ್ವಹಣೆ ಮಾಡದೆ ಹಾಳುಗೆಡವುತ್ತಿದೆ.

    | ಮಾದೇವ ನಾಯ್ಕ, ಸಾಮಾಜಿಕ ಕಾರ್ಯಕರ್ತ

    ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇದುವರೆಗೆ ಅಂದಾಜು 14 ಲಕ್ಷ ರೂ. ಕೊಂಡವಾಡೆಗೆ ಖರ್ಚು ಮಾಡಿದೆ. ಸಂಪೂರ್ಣ ಕಾಮಗಾರಿ ಮುಗಿಸಲು ಈಗ ಮತ್ತೆ ಗುತ್ತಿಗೆ ನೀಡಿದ್ದು, ಕಾರವಾರದ ಗುತ್ತಿಗೆದಾರರು ಕೆಲಸ ಮಾಡಲು ವಿಳಂಬ ಮಾಡುತ್ತಿದ್ದಾರೆ. ಈ ಬಗ್ಗೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದು, ತ್ವರಿತ ಕಾಮಗಾರಿ ನಡೆಸುವಂತೆ ತಿಳಿಸಲಾಗಿದೆ.

    | ಗಣಪತಿ ನಾಯ್ಕ, ನಗರಸಭೆ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts