More

    ತ್ರಿವೇಣಿ ಸಂಗಮದಲ್ಲಿ ಮೃತ್ತಿಕಾ ಸಂಗ್ರಹ

    ಬಾಗಲಕೋಟೆ: ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡ ಪುತ್ಥಳಿ ಸ್ಥಾಪನೆ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ನಾಡಿನ ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಮೃತ್ತಿಕಾ ಹಾಗೂ ಗಂಗಾಜಲ ಸಂಗ್ರಹ ಅಭಿಯಾನ ಅಂಗವಾಗಿ ತ್ರಿವೇಣಿ ಸಂಗಮದಲ್ಲಿ ಮೂರು ಜನ ಸಚಿವರು ಮೃತಿಕಾ, ಗಂಗಾಜಲ ಸಂಗ್ರಹಿಸಿದರು ಬೆಂಗಳೂರಿಗೆ ಕೊಂಡ್ಯೊಯ್ದರು.
    ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮಕ್ಕೆ ಶುಕ್ರವಾರ ಆಗಮಿಸಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಕಂದಾಯ ಸಚಿವ ಆರ್.ಅಶೋಕ, ಉನ್ನತ ಶಿಕ್ಷಣ ಸಚಿವ ಸಿ.ಅಶ್ವತ್ಥ ನಾರಾಯಣ, ಕ್ರೀಡಾ ಸಚಿವ ಕೆ.ಸಿ.ನಾರಾಯಣ ಗೌಡರನ್ನು ಸಾಂಪ್ರಾದಯಕ ವಾದ್ಯತಂಡದೊಂದಿಗೆ ಭವ್ಯವಾಗಿ ಸ್ವಾಗತಿಸಲಾಯಿತು.
    ನಂತರ ಐತಿಹಾಸಿಕ ಕ್ಷೇತ್ರ, ಕೃಷ್ಣಾ, ಘಟಪ್ರಭಾ, ಮಲಪ್ರಭಾ ಸಂಗಮ ಸ್ಥಳ, ತ್ರಿವೇಣಿ ಸಂಗಮ ಸಂಗಮನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದುಕೊಂಡರು. ಸ್ಥಳೀಯ ಅರ್ಚಕರು ಪುಣ್ಯಕ್ಷೇತ್ರದಲ್ಲಿ ಸಂಗ್ರಹಿಸಿದ್ದ ಮೃತ್ತಿಕಾ, ಗಂಗಾಜಲಕ್ಕೆ ಪೂಜೆ ಸಲ್ಲಿಸಿ ಸಚಿವರಿಗೆ ಹಸ್ತಾಂತರ ಮಾಡಿದರು. ಬಳಿಕ ಅಣ್ಣ ಬಸವಣ್ಣನವರ ಐಕ್ಯ ಮಂಟಪಕ್ಕೆ ಗೃಹ ಸಚಿವ ಅರಗ ಜ್ಞಾನೇಂದ್ರ, ಉನ್ನತ ಶಿಕ್ಷಣ ಸಚಿವ ಸಿ.ಅಶ್ವತ್ಥ ನಾರಾಯಣ, ಕ್ರೀಡಾ ಸಚಿವ ಕೆ.ಸಿ.ನಾರಾಯಣ ಗೌಡ ತೆರಳಿ ಪೂಜೆ ಸಲ್ಲಿಸಿದರು. ಈ ವೇಳೆ ಬಸವ ಧರ್ಮಪೀಠದ ಮಾದೇಶ್ವರ ಸ್ವಾಮೀಜಿ ವಚನ ಪಠಿಸಿ ಸಚಿವರಿಗೆ ಸನ್ಮಾನಿಸಿ ಆಶೀರ್ವದಿಸಿದರು. ಕಂದಾಯ ಸಚಿವ ಆರ್.ಅಶೋಕ ಮಾತ್ರ ಐಕ್ಯ ಮಂಟಪದ ದರ್ಶನ ಮಾಡಲಿಲ್ಲ.
    ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಸಿ.ಅಶ್ವತ್ಥ ನಾರಾಯಣ ಮಾತನಾಡಿ, ಬಸವೇಶ್ವರರ ಐಕ್ಯ ಸ್ಥಳವಾಗಿರುವ ಕೂಡಲ ಸಂಗಮ ಪುಣ್ಯಕ್ಷೇತ್ರವಾಗಿದ್ದು, ಬಸವಣ್ಣನವರು ಕಾಯಕವೇ ಕೈಲಾಸ, ಸಮಾನತೆಯ ಸಮಾಜ, ದಾಸೋಹ ಇತ್ಯಾದಿ ಸಂದೇಶಗಳನ್ನು ನೀಡಿದ್ದಾರೆ. ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಿರ್ಮಿಸಿದ್ದಾರೆ. ಇಬ್ಬರ ಮೃತ್ತಿಕೆ ಒಂದೇ ಕಡೆ ಸೇರಿಸುವ ಮೂಲಕ ನಾಡನ್ನು ಒಂದು ಕಡೆ ತರುವ ಮೂಲಕ ಶಕ್ತಿ ಸ್ಥಳವನ್ನಾಗಿ ಮಾಡಲಾಗುವುದು. ಜಗಜ್ಯೋತಿ ಬಸವೇಶ್ವರರ ಆಶೀರ್ವಾದ ಸದಾಕಾಲ ನಾಡಿನ ಜನರ ಮೇಲೆ ಇರಬೇಕೆಂಬ ಕಾರಣದಿಂದ ಮೃತ್ತಿಕೆ ಸಂಗ್ರಹಿಸಿ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದರು.
    ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, ಸಿಇಒ ಟಿ.ಭೂಬಾಲನ್, ಎಸ್ಪಿ ಜಯಪ್ರಕಾಶ ಹಕ್ಕರಕಿ, ಎಸಿ ಶ್ವೇತಾ ಬೀಡಿಕರ, ಕೂಡಲಸಂಗಮ ಅಭಿವೃದ್ಧಿ ಪ್ರಾಽಕಾರ ಆಯುಕ್ತ ಬಸಪ್ಪ ಪೂಜಾರಿ, ತಹಸೀಲ್ದಾರ ಬಸವಲಿಂಗಪ್ಪ ಮ್ಯಾಗೇರಿ, ಬಿಜೆಪಿ ಮುಖಂಡರಾದ ರಾಜುಗೌಡ ಪಾಟೀಲ, ಮಲ್ಲಯ್ಯ ಮೂಗನೂರಮಠ, ಜಿ.ಜಿ.ಪಾಟೀಲ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts