More

    ತ್ರಿವಿಧ ದಾಸೋಹಿಗೆ ನಮನ

    ಮೈಸೂರು: ತುಮಕೂರಿನ ಸಿದ್ಧಗಂಗಾಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಅವರ 116ನೇ ಜಯಂತಿಯನ್ನು ಶನಿವಾರ ನಗರದ ವಿವಿಧೆಡೆ ಆಚರಣೆ ಮಾಡುವ ಮೂಲಕ ಸ್ಮರಣೆ ಮಾಡಲಾಯಿತು.


    ಮಜ್ಜಿಗೆ, ಪ್ರಸಾದ ವಿತರಣೆ, ರಕ್ತದಾನ ಶಿಬಿರ ಆಯೋಜಿಸುವ ಮೂಲಕ ತ್ರಿವಿಧ ದಾಸೋಹಿಗೆ ಗೌರವ ಸಲ್ಲಿಸಲಾಯಿತು. ನಗರದ ರಾಮಾನುಜ ರಸ್ತೆ, ಅಗ್ರಹಾರದ ನೂರೊಂದು ಗಣಪತಿ ದೇವಾಲಯ, ವಿದ್ಯಾರಣ್ಯಪುರಂ ಸ್ಟರ್ಲಿಂಗ್ ಟಾಕೀಸ್ ರಸ್ತೆ, ವಿವೇಕಾನಂದನಗರ, ರಾಮಕೃಷ್ಣನಗರ ಮತ್ತಿತರ ಕಡೆ ಶ್ರೀಗಳ ಸ್ಮರಣೆ ಮಾಡಿ ಪ್ರಸಾದ ವಿನಿಯೋಗ ಮಾಡಲಾಯಿತು.


    ನ್ಯೂ ಸಯ್ಯಜಿರಾವ್ ರಸ್ತೆಯ ಜೀವಾಧಾರ ರಕ್ತ ನಿಧಿ ಕೇಂದ್ರದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಲಾಯಿತು. ನಂತರ 40 ಜನರು ರಕ್ತದಾನ ಮಾಡಿದರು.


    ಜೀವಾಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ, ಎಲ್ಲ ದಾನಗಳಿಗಿಂತ ಅನ್ನದಾನ, ವಿದ್ಯಾದಾನ ಶ್ರೇಷ್ಠವಾದುದ್ದು. ಇಂಥ ಸತ್ಕಾರ್ಯಕ್ಕೆ ಸಾಕ್ಷಿಯಾಗಿದ್ದ ಸಿದ್ಧಗಂಗಾ ಶ್ರೀಗಳು ಕಲಿಯುಗದ ನಡೆದಾಡುವ ದೇವರು ಎಂದೇ ಬಿಂಬಿತರಾಗಿದ್ದರು. ಅನ್ನದಾನದ ಜತೆಗೆ ವಿದ್ಯಾದಾನವನ್ನೂ ನೀಡಿದ ಮಹಾನ್ ಮಾನವತಾವಾದಿ. ಅವರ ಆದರ್ಶವನ್ನು ಎಲ್ಲರೂ ಅಳವಡಿಸಿಕೊಂಡು ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.


    ಬಸವಣ್ಣನವರು ದಾಸೋಹ ಪರಿಕಲ್ಪನೆ ಪ್ರತಿಪಾದಿಸಿದರೆ, ಶಿವಕುಮಾರ ಸ್ವಾಮೀಜಿ ಅನುಷ್ಠಾನಗೊಳಿಸಿದರು ಎಂದು ಹೇಳಿದರು.
    ನಿವೃತ್ತ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ವೆಂಕಟೇಶ್, ಲಯನ್ಸ್ ಕ್ಲಬ್‌ನ ನಾಗೇಶ್ ಮೂರ್ತಿ, ವಿಜಿ, ಸದಾಶಿವ, ರಶ್ಮಿ, ರೇವಜಿತ್, ಶಾರದಾ, ಕೆಂಪಣ್ಣ, ಗಂಗಾ, ಮಧು ಇತರರು ಇದ್ದರು.


    ಮೈಸೂರು ಕನ್ನಡ ವೇದಿಕೆಯಿಂದ ಕುವೆಂಪು ನಗರದಲ್ಲಿರುವ ಶ್ರೀಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಶ್ರೀಗಳ ಜಯಂತಿಯನ್ನು ಆಚರಿಸಲಾಯಿತು. ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಅವರ ಆದರ್ಶ, ಸೇವಾ ಕಾರ್ಯವನ್ನು ಸ್ಮರಣೆ ಮಾಡಲಾಯಿತು. ಪಾನಕ, ಮಜ್ಜಿಗೆ ವಿತರಿಸಲಾಯಿತು. ಉದ್ಯಮಿಗಳಾದ ಯು.ಎಸ್. ಶೇಖರ್, ಹಿರಿಯ ಕನ್ನಡ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ, ಸಮಾಜ ಸೇವಕ ಸಾ.ವಿ.ಮಲ್ಲಿಕಾರ್ಜುನ್, ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ ಇತರರು ಇದ್ದರು.


    ಗೋಕುಲಂನಲ್ಲಿ ಶ್ರೀಶಿವಕುಮಾರ ಸ್ವಾಮೀಜಿ ಅವರ ಭಕ್ತವೃಂದದಿಂದ ಶ್ರೀಗಳ ಜಯಂತಿ ಆಚರಿಸಲಾಯಿತು. ಎನ್.ಬಸವರಾಜು, ಎಚ್.ಸಿ. ಮೃತ್ಯುಂಜಯಸ್ವಾಮಿ, ಪಡುವಾರಹಳ್ಳಿ ಎಂ ರಾಮಕೃಷ್ಣ, ಇ.ಬಸವರಾಜು, ಕಿಟ್ಟಿ, ಸಿ.ಡಿ.ಕುಮಾರ್, ಸಿ.ಸಂತೋಷ್, ಬಿ.ಕುಮಾರ್, ಯೋಗೇಶ್, ಶಿವಣ್ಣ ಇದ್ದರು. ಜೆ.ಪಿ.ನಗರದ ನಾಗರಿಕರು ಶ್ರೀಗಳ ಜಯಂತಿಯನ್ನು ಜೆ.ಪಿ.ನಗರದ ಉದ್ಯಾನದಲ್ಲಿ ಆಚರಿಸಿದರು.


    ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಶ್ರೀಶಿವಕುಮಾರ್ ಸ್ವಾಮೀಜಿ ಅವರ ಸಾಧನೆ, ಸೇವೆ ದೇಶಕ್ಕೆ ಮಾದರಿಯಾಗಿದೆ. ಕಾಯಕ, ದಾಸೋಹ, ಶಿಕ್ಷಣದ ಮೂಲಕವೇ ಖ್ಯಾತಿ ಗಳಿಸಿದ್ದರು. ಪ್ರಚಾರ ಬಯಸದ ಸ್ವಾಮೀಜಿ ಲಕ್ಷಾಂತರ ಮಕ್ಕಳ ಬದುಕನ್ನು ರೂಪಿಸಿ ಸಮಾಜದ ಉನ್ನತಿಗೆ ವಿಭಿನ್ನ ರೀತಿಯಲ್ಲಿ ಸೇವೆ ನೀಡಿದ್ದಾರೆ ಎಂದು ಹೇಳಿದರು.


    ಮಾಜಿ ಉಪ ಮೇಯರ್ ಓಂಕಾರ್ ಪ್ರಸಾದ್, ಶಶಿಕಿರಣ, ಆರ್.ಡಿ.ವಿಶ್ವನಾಥ್, ಬಾಲು, ತೀರ್ಥಪ್ರಸಾದ್, ಸಿಡಿ ಬಸವರಾಜು, ಫಾಲಾಕ್ಷ, ರವಿಶಂಕರ್, ಯೋಗೇಶ್‌ಉಪ್ಪಾರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts