More

    ತ್ಯಾಗರ್ತಿಯಲ್ಲಿ ಎಳೆ ಅಷ್ಟಮಿ ಜಾತ್ರೆ ಸಂಭ್ರಮ; 2 ಶತಮಾನಗಳ ಇತಿಹಾಸ

    ತ್ಯಾಗರ್ತಿ: ಪಾರಂಪರಿಕವಾಗಿ ನಡೆದು ಬಂದ ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಎಳೆ ಅಷ್ಟಮಿ ಹಬ್ಬವನ್ನು ಕೂಡ ಒಂದಾಗಿದೆ. ಎಳೆ ಅಷ್ಟಮಿ ಹಬ್ಬಕ್ಕೆ ಇನ್ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ.
    ತ್ಯಾಗರ್ತಿಯ ಪುರೋಹಿತ ಪುರುಷೋತ್ತಮ ಜೋಯಿಸ್ ಮನೆಯಲ್ಲಿ ದೇವರ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈ ಗ್ರಾಮದಲ್ಲಿ ಎಳೆ ಅಷ್ಟಮಿ ಹಬ್ಬವನ್ನು ಗ್ರಾಮದೇವತೆಗಳ ಹಬ್ಬದ ರೀತಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಸೋಮವಾರ ನಡೆಯಲಿರುವ ಎಳೆ ಅಷ್ಟಮಿ ಜಾತ್ರೆಗೆ ಭಾದ್ರಪದ ಶುಕ್ಲ ಅಷ್ಟಮಿಯ ಶನಿವಾರ ಸಂಜೆಯಿಂದ ಪೂಜೆ ಕಾರ್ಯಕ್ರಮ ಪ್ರಾರಂಭವಾಗಿದೆ.
    ಇಲ್ಲಿನ ಸುತ್ತಮುತ್ತಲಿನ ವಿವಿಧ ಗ್ರಾಮಗಳಿಂದ ಸಾವಿರಾರು ಭಕ್ತರು ಗ್ರಾಮಸ್ಥರು ಆಗಮಿಸಿ ಎಳೆ ಅಷ್ಟಮಿಯ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಜಾತ್ರೆಯ ರೀತಿಯಲ್ಲಿ ಸಂಭ್ರಮ, ಸಡಗರದಿಂದ ಪೂಜೆ ಹಣ್ಣುಕಾಯಿ ಪ್ರಸಾದ ವಿನಿಯೋಗ ಕಾರ್ಯಕ್ರಮ ನೆರವೇರಲಿದೆ. ಗ್ರಾಮದಲ್ಲಿ ಶಾಂತಿ, ಸಮೃದ್ಧಿ, ರೈತರ ಬೆಳೆಗಳಿಗೆ ರಕ್ಷಣೆ, ಜನ ಜಾನುವಾರುಗಳಿಗೆ ನೆಮ್ಮದಿ ನೀಡಲಿ ಎಂದು ಸಂಕಲ್ಪ ಮಾಡಲಾಗುತ್ತದೆ. ವಿಶೇಷವಾಗಿ ಶ್ರೀ ಕೇದಾರೇಶ್ವರ, ಶ್ರೀ ಧಾನ್ಯಶಂಕರ ಹಾಗೂ ಶ್ರೀ ಮಹಾಲಕ್ಷ್ಮೀಗೆ ವಿಶೇಷ ಅಲಂಕಾರ, ಪೂಜೆ ನೆರವೇರಿಸಲಾಗುತ್ತದೆ. ಶ್ರೀ ಧಾನ್ಯಶಂಕರ ದೇವರ ರೂಪದಲ್ಲಿ ತೆನೆ ಬಂದಿರುವ ಭತ್ತದ ಸಸಿಗಳನ್ನು ದೇವರ ಮೂರ್ತಿಗಳ ನಡುವೆ ಇಡಲಾಗುತ್ತದೆ.
    ಲೋಕಕಲ್ಯಾಣಕ್ಕಾಗಿ ಮೂರು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಅಷ್ಟಮಿ ದಿನ ದೇವರ ಪ್ರತಿಷ್ಠಾಪನೆ, ನಂತರ ಹತ್ತಿಪೂಜೆ ನೆರವೇರಿಸಿ ಮಾರನೇ ದಿನ ಹತ್ತಿಯಿಂದ ಎಳೆ ತೆಗೆಯುತ್ತಾರೆ. ಹಬ್ಬ ಆಚರಣೆ ಮಾಡುವ ಸಂಪ್ರದಾಯ ಇರುವ ಮನೆಯವರು ಎಳೆಯನ್ನು ಮನೆಗೆ ತೆಗೆದುಕೊಂಡು ಹೋಗಿ ಹಬ್ಬ ಆಚರಿಸುತ್ತಾರೆ. ಜತೆಗೆ ಹತ್ತಿಯ ಎಳೆಯಿಂದ ತಯಾರಾದ ಅರಿಶಿಣ ಲೇಪಿತ ದಾರವನ್ನು ಕೈಗೆ ಕಟ್ಟಿಸಿಕೊಳ್ಳುತ್ತಾರೆ.
    ದಶಮಿಯ ದಿನ ದೇವರಿಗೆ ವಿಶೇಷ ಅಲಂಕಾರ, ಪೂಜೆ, ಹಣ್ಣುಕಾಯಿ ನೈವೇದ್ಯ ಮಾಡುತ್ತಾರೆ. ತವರುಮನೆಗೆ ಬಂದ ಗ್ರಾಮದ ಹೆಣ್ಣು ಮಕ್ಕಳು ದೇವರ ದರ್ಶನಕ್ಕೆ ಆಗಮಿಸಿ ಹಣ್ಣು-ಕಾಯಿ ಮಾಡಿಸುವ ಸಂಪ್ರದಾಯವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts