More

    ತೆಂಗಿನ ಸಂಸ್ಕರಣೆ ನಮ್ಮೆಲ್ಲರ ಹೊಣೆ-ವಿಜ್ಞಾನಿ ಬಸವನಗೌಡ

    ದಾವಣಗೆರೆ: ತೆಂಗು, ತೋಟಗಾರಿಕೆ ಬೆಳೆಗಳಲ್ಲಿ ನಿಯಮಿತ ಆದಾಯ ಮತ್ತು ಅತಿ ಹೆಚ್ಚು ಉಪ ಉತ್ಪನ್ನಗಳನ್ನು ನೀಡುವ ಬೆಳೆ. ಇದರ ಸಂರಕ್ಷಣೆ ಮತ್ತು ಸಂಸ್ಕರಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ.ಬಸವನಗೌಡ ತಿಳಿಸಿದರು.
    ಬೆಂಗಳೂರಿನ ತೆಂಗು ಅಭಿವೃದ್ಧಿ ಮಂಡಳಿ, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತೆಂಗಿನ ಮರದ ಸ್ನೇಹಿತರು- ಕೌಶಲಾಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಇಂದು ತೆಂಗಿನ ಬೇಸಾಯದ ಉತ್ಪಾದನಾ ತೊಡಕುಗಳಲ್ಲಿ ಕಾಯಿ ಕೀಳುವವರ ಅಲಭ್ಯತೆಯೂ ಒಂದು. ಕೃಷಿಯಲ್ಲಿ ಕಾರ್ಮಿಕರ ಕೊರತೆ ನೀಗಿಸಲು ಇಂತಹ ಕೌಶಲಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳು ಸಹಕಾರಿಯಾಗಲಿದೆ. ಆದಾಯೋತ್ಪನ್ನ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
    ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಸಿ.ಟಿ. ಚಂದ್ರಪ್ಪ ಮಾತನಾಡಿ ಅಡಕೆ ಬೆಳೆಯ ವಿಸ್ತೀರ್ಣದಿಂದ ಇಂದು ತೆಂಗು ಮಲತಾಯಿ ಧೋರಣೆ ಅನುಭವಿಸುತ್ತಿದೆ. ತೆಂಗಿನ ಉಪ ಉತ್ಪನ್ನಗಳಿಂದ ಇಂದು ಉತ್ತಮ ಆದಾಯ ಗಳಿಸಲು ಸಾಧ್ಯವಿದೆ ಎಂದು ತಿಳಿಸಿದರು.
    ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಟಿ.ಎನ್. ದೇವರಾಜ ಮಾತನಾಡಿ, ಶತಮಾನಗಳಿಂದ ಕಲಬೆರಕೆರಹಿತ ಪದಾರ್ಥಗಳಲ್ಲಿ ತೆಂಗೂ ಸಹ ಒಂದು. ಇದರ ಉಪ ಉತ್ಪನ್ನಗಳನ್ನು ಸಂಸ್ಕರಿಸಿ ಮಾರಾಟ ಮಾಡಿದರೆ ಉತ್ತಮ ಲಾಭ ಗಳಿಸಬಹುದು ಎಂದರು. ನಿಟ್ಟೂರು ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿ ವತಿಯಿಂದ ತೆಂಗಿನ ವರ್ಜಿನ್ ಎಣ್ಣೆ, ತೆಂಗಿನ ಚಿಪ್ಸ್, ತೆಂಗಿನ ಪೌಡರ್‌ಗಳನ್ನು ತರಳಾಮೃತ ಬ್ರ್ಯಾಂಡ್ ಮೂಲಕ ಮಾರಾಟದ ವ್ಯವಸ್ಥೆ ಮಾಡುತ್ತಿದ್ದೇವೆ. ಇದರಿಂದ ತೆಂಗಿನ ಬೆಲೆಯ ಸ್ಥಿರತೆ ಕಾಪಾಡಬಹುದಾಗಿದೆ ಎಂದರು.
    ಕಾರ್ಯಕ್ರಮದಲ್ಲಿ ವಿಜ್ಞಾನಿಗಳಾದ ಜೆ. ರಘುರಾಜ, ಎಚ್.ಎಂ.ಸಣ್ಣಗೌಡ್ರ, ಡಾ.ಟಿ.ಜಿ. ಅವಿನಾಶ ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಆಯ್ಕೆಯಾದ 20 ಶಿಬಿರಾರ್ಥಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts