More

    ತುಮಕೂರು ಪೊಲೀಸರಿಗೆ ಎಡಿಜಿಪಿ ಕ್ಲಾಸ್

    ತುಮಕೂರು: ತುಮಕೂರು ಮೂಲಕ ಹಾದುಹೋಗುವ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಳೆದ ಒಂದು ವರ್ಷದಲ್ಲಿ 750ಕ್ಕೂ ಹೆಚ್ಚು ಅಪಘಾತ ಸಂಭವಿಸಿರುವ ಹಿನ್ನೆಲೆಯಲ್ಲಿ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್‌ಕುಮಾರ್ ರಸ್ತೆ ವೀಕ್ಷಿಸಿದರು.
    ಜಿಲ್ಲೆಯಲ್ಲಿ ಸಂಚಾರ ವ್ಯವಸ್ಥೆಯ ಬಗ್ಗೆ ಸಾಕಷ್ಟು ದೂರುಗಳಿರುವ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲೆಗೆ ಭೇಟಿ ನೀಡಿದ್ದ ಅವರು, ಬ್ಲಾಕ್ ಸ್ಪಾಟ್‌ಗಳನ್ನು ವೀಕ್ಷಿಸಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಪೊಲೀಸರಿಗೆ ಸೂಕ್ತ ಮಾರ್ಗದರ್ಶನ ನೀಡಿದರು.

    ಚಿಕ್ಕಹಳ್ಳಿ, ಪಂಡಿತನಹಳ್ಳಿ ಗೇಟ್, ಕಳ್ಳಂಬೆಳ್ಳ ಹಾಗೂ ಕುಣಿಗಲ್ ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಪೊಲೀಸ್ ಅಧಿಕಾರಿಗಳು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ತೆರಳಿ ಬ್ಲಾಕ್ ಸ್ಪಾಟ್‌ಗಳನ್ನು ವೀಕ್ಷಿಸಿದರು. ದಂಡ ವಸೂಲಿಯೇ ಪ್ರಮುಖ ಕರ್ತವ್ಯವಾಗದೆ ಅಪಘಾತ ಪ್ರಕರಣಗಳನ್ನು ಕಡಿಮೆಯಾಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
    ಸುದ್ದಿಗಾರರ ಜತೆ ಮಾತನಾಡಿದ ಅಲೋಕ್‌ಕುಮಾರ್, ಜಿಲ್ಲೆಯಲ್ಲಿ 7 ಬ್ಲಾಕ್‌ಸ್ಪಾಟ್‌ಗಳನ್ನು ಪರಿಶೀಲನೆ ನಡೆಸಿದ್ದೇವೆ. ಬೆಂಗಳೂರಿನಿಂದ ತುಮಕೂರು ಮೂಲಕ 7 ಜಿಲ್ಲೆಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಎಎಂಪಿಆರ್ ಕ್ಯಾಮರಾ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

    ಹಿರೇಹಳ್ಳಿ, ಕೋರಾ ಸೇರಿ ಬಹಳಷ್ಟು ಕಡೆ ಬ್ಲಾಕ್ ಸ್ಪಾಟ್‌ಗಳು ಇವೆ. ಕೆಲವು ಕಡೆ ಅಂಡರ್‌ಪಾಸ್ ಇಲ್ಲದೆ ಪಾದಚಾರಿಗಳಿಗೆ ಸಮಸ್ಯೆ ಉಂಟಾಗುತ್ತಿದೆ. ಹಾಗಾಗಿ, ಬ್ಲಾಕ್‌ಸ್ಪಾಟ್‌ಗಳನ್ನು ಸರಿಪಡಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದ್ದೇವೆ ಎಂದರು.
    ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ನಡೆಸಿ ಸರಿಪಡಿಸಲು 3 ತಿಂಗಳು ಸಮಯ ಕೊಡುತ್ತೇವೆ. ನಂತರವೂ ಸಂಭವಿಸುವ ಅಪಘಾತಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರದ್ದು ತಪ್ಪು ಕಾಣಿಸಿದರೆ ಅವರ ವಿರುದ್ಧ ಕೂಡ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
    ಕಳೆದ ವರ್ಷ ಜಿಲ್ಲೆಯಲ್ಲಿ 762 ಅಪಘಾತ ಪ್ರಕರಣ ವರದಿಯಾಗಿದ್ದು, ಬೆಂಗಳೂರು ಜತೆಗೆ ತುಮಕೂರಿನಲ್ಲಿಯೂ ಅತಿಹೆಚ್ಚು ಸಾವು ಸಂಭವಿಸಿದೆ. ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಸಂಖ್ಯೆ ಹೆಚ್ಚಿರುವುದರಿಂದ ಅಪಘಾತಗಳು ಹೆಚ್ಚಾಗಿಯೇ ಸಂಭವಿಸುತ್ತಿವೆ. ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದರು. ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ, ಎಸ್ಪಿ ರಾಹುಲ್‌ಕುಮಾರ್ ಶಹಪೂರ್‌ವಾಡ್, ಅಡಿಷನಲ್ ಎಸ್‌ಪಿ ಮರಿಯಪ್ಪ, ಪ್ರೊಬೆಷನರಿ ಐಪಿಎಸ್ ಅಧಿಕಾರಿ ಸಿದ್ದಾರ್ಥ ಗೋಯಲ್ ಇದ್ದರು.

    ಅಪಘಾತದಲ್ಲಿ ಕಳೆದ ವರ್ಷ 773, ಈ ವರ್ಷ 421 ಸಾವು: ಜಿಲ್ಲೆಯಲ್ಲಿ ಅಪಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಆಘಾತಕಾರಿ ಎನಿಸಿದೆ. 2022ರ ಜನವರಿ 1ರಿಂದ ಡಿಸೆಂಬರ್ 30ರವರೆಗೆ ಬರೋಬ್ಬರಿ 700 ಅಪಘಾತಗಳು ಸಂಭವಿಸಿದ್ದು, 773 ಜನರು ಸಾವನ್ನಪ್ಪಿದ್ದಾರೆ. 2023ರ ಜನವರಿ 1ರಿಂದ ಜುಲೈ 31ರವರೆಗೂ 397 ಅಪಘಾತಗಳು ಸಂಭವಿಸಿದ್ದು, 421 ಜನರು ರಸ್ತೆಯಲ್ಲಿಯೇ ಪ್ರಾಣಬಿಟ್ಟಿದ್ದಾರೆ. ಬೆಂಗಳೂರು ಬಿಟ್ಟರೆ ಗೃಹ ಸಚಿವರ ತವರು ಜಿಲ್ಲೆ ತುಮಕೂರಿನಲ್ಲಿಯೇ ಅತೀ ಹೆಚ್ಚು ಸಾವು, ರಸ್ತೆ ಅಪಘಾತದ ಮೂಲಕ ಸಂಭವಿಸುತ್ತಿರುವುದು ಜಿಲ್ಲಾ ಪೊಲೀಸರ ನಿದ್ದೆಗೆಡಿಸಿದೆ.

    ದಂಡ ಹಾಕಲು ಸಿದ್ಧತೆ: ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ 8 ಕ್ಯಾಮರಾ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ 48ರಲ್ಲಿಯೇ 72 ಕ್ಯಾಮರಾ ಅಳವಡಿಸಲಾಗಿದೆ. ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಸೆರೆ ಹಿಡಿಯಲು 8 ಕ್ಯಾಮರಾ ಅಳವಡಿಸಲಾಗುತ್ತಿದೆ. ಲೇನ್ ವಯೋಲೇಷನ್, ಡಿಸಿಪ್ಲೀನ್ ಸಲುವಾಗಿ ಟ್ರೈಯಲ್‌ರನ್ ಆರಂಭಿಸಲಾಗಿದ್ದು, ಓವರ್ ಸ್ಪೀಡ್, ಸೀಟ್ ಬೆಲ್ಟ್ ಇಲ್ಲದೇ ವಾಹನ ಚಾಲನೆ, ಡ್ರೈವಿಂಗ್ ವೇಳೆ ಮೊಬೈಲ್‌ನಲ್ಲಿ ಮಾತನಾಡುವುದು ಸೇರಿ ಸಂಚಾರ ನಿಯಮ ಉಲ್ಲಂಘಿಸುವುದನ್ನು ಕ್ಯಾಮರಾ ಸೆರೆ ಹಿಡಿಯಲಾರಂಭಿಸಿದೆ. ಒಂದು ದಿನಕ್ಕೆ ಸುಮಾರು 5 ಸಾವಿರ ಜನರು ಸಂಚಾರಿ ನಿಯಮ ಉಲ್ಲಂಘನೆ ಮಾಡುತ್ತಿರುವುದು ದೃಢವಾಗಿದ್ದು, ಮುಂದಿನ 15 ದಿನಗಳಲ್ಲಿ ದಂಡ ಹಾಕುವ ಕಾರ್ಯಕ್ಕೆ ಚಾಲನೆ ದೊರೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts