More

    ತಿಂಗಳು ಮುಳುಗಿದವೋ.. -ಜಿಲ್ಲೆಯ 28.97 ಲಕ್ಷ ಸ್ತ್ರೀ’ಶಕ್ತಿ’ ಪ್ರಯಾಣ – ಕೆಎಸ್‌ಆರ್‌ಟಿಸಿಗೆ 7.55 ಕೋಟಿ ರೂ. ವರಮಾನ 

    ಡಿ.ಎಂ.ಮಹೇಶ್, ದಾವಣಗೆರೆ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ ಬರೋಬ್ಬರಿ ಒಂದು ತಿಂಗಳ ಯಶಸ್ಸನ್ನು ಕ್ರಮಿಸಿದೆ. ಕೆಲವು ಜಿಲ್ಲೆಗಳಲ್ಲಿ ಇದು ಗದ್ದಲದ ವೇದಿಕೆಯಾಗಿದ್ದರೂ ದಾವಣಗೆರೆ ಜಿಲ್ಲೆಯಲ್ಲಿ ಮಹಿಳೆಯರು ಶಾಂತಿ ಮಂತ್ರ ಪಠಿಸಿದ್ದಾರೆ.
    ಬಾಲೆಯರಿಂದ ಹಿಡಿದು ಅಜ್ಜಿಯವರೆಗೆ, ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಂದ ಹಿಡಿದು ಆಗಷ್ಟೇ ಹಸೆಮಣೆ ಏರಿದ ಯುವತಿಯರವರೆಗೂ ಸರ್ಕಾರಿ ಬಸ್‌ಗಳಲ್ಲಿ ಸುಖಕರ ಸಂಚಾರದ ಹಿತಾನುಭವ ಸವಿದಿದ್ದಾರೆ.
    ಜಿಲ್ಲೆಯ 28.97 ಲಕ್ಷ ಮಹಿಳೆಯರು ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಲಾಭ ಪಡೆದು ಖುಷಿ ಪಟ್ಟಿದ್ದಾರೆ. ಇದರಲ್ಲಿ 28.57 ಲಕ್ಷ ವಯಸ್ಕರು, 40553 ಮಂದಿ ಬಾಲಕಿಯರಿದ್ದಾರೆ.
    ವೇಗಧೂತ, ಸಾಮಾನ್ಯ ಹಾಗೂ ನಗರ ಸಾರಿಗೆ ಬಸ್‌ಗಳಲ್ಲಿ ಹೆಣ್ಣುಮಕ್ಕಳು ಸಂಚಾರ ಮಾಡಿದ್ದು ದಾವಣಗೆರೆ ಕೆಎಸ್ಸಾರ್ಟಿಸಿ ಜಿಲ್ಲೆ ವ್ಯಾಪ್ತಿಯಲ್ಲಿ ತಿಂಗಳೊಂದರಲ್ಲಿ ನೀಡಲಾದ ಶೂನ್ಯ ದರದ ಟಿಕೆಟ್‌ಗಳಿಂದ ಒಟ್ಟು 7.55 ಕೋಟಿ ರೂ. ವರಮಾನ ಸಂಗ್ರಹವಾಗಿದೆ.
    ಜೂ.11ರಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹಾಗೂ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಯೋಜನೆಗೆ ಶಕ್ತಿಗೆ ಚಾಲನೆ ನೀಡಿದ್ದರು. ಅಲ್ಲಿಂದ ಇದುವರೆಗೆ ಮಾನಿನಿಯರು- ಪುರುಷರು 60-40ರ ಅನುಪಾತದಲ್ಲಿ ಓಡಾಟ ನಡೆಸಿದ್ದಾರೆ.
    ಜಿಲ್ಲಾದ್ಯಂತ ಶಕ್ತಿ ಯೋಜನೆಯಡಿ 306 ಬಸ್‌ಗಳು ಕಾರ್ಯಾಚರಣೆ ಮಾಡುತ್ತಿದ್ದು, ಇದರಲ್ಲಿ ನಗರ ಸಾರಿಗೆಯ 58 ಬಸ್ಸುಗಳಿವೆ. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಬೇಡಿಕೆ ಕೇಳಿಬಂದಿದೆ. ಹೆಚ್ಚು ಸಂದಣಿಯಾಗುವ ಹಿನ್ನೆಲೆಯಲ್ಲಿ ವಾರಾಂತ್ಯದ ಶನಿವಾರ-ಭಾನುವಾರಗಳಂದು ಮೂರು ಪಾಳಿಗಳಲ್ಲಿ ಸಿಬ್ಬಂದಿ ಬಳಸಿಕೊಳ್ಳಲಾಗಿದೆ. ಇರುವ ಬಸ್‌ಗಳನ್ನೇ ಬಳಸುತ್ತಿದ್ದು ಹೆಚ್ಚುವರಿ ಬಸ್‌ಗಳಿಗೆ ಬೇಡಿಕೆ ಇಟ್ಟಿಲ್ಲ ಎನ್ನಲಾಗಿದೆ.
    ಶಕ್ತಿಯಿಂದ ಹೊರತಾಗಿ ಜಿಲ್ಲೆಯಲ್ಲಿ 12 ಎಲೆಕ್ಟ್ರಿಕ್, 12 ವೋಲ್ವೋ, 29 ರಾಜಹಂಸ, 6 ಹವಾನಿಯಂತ್ರಣವಲ್ಲದ ಬಸ್‌ಗಳು ಓಡುತ್ತಿದ್ದು, ಕೆಲವು ಬಸ್‌ಗಳಿಗೆ ಶೇ.8ರಿಂದ 10ರಷ್ಟು ಆದಾಯ ಕುಂಠಿತವಾಗಿದೆ ಎನ್ನುತ್ತವೆ ಇಲಾಖೆ ಮೂಲಗಳು.
    ಆರಂಭದಲ್ಲಿದ್ದ ಜನದಟ್ಟಣೆ ಕ್ರಮೇಣ ಕಡಿಮೆಯಾಗಿದೆ. ಕೆಲವರು ಅನಗತ್ಯವಾಗಿ ಹೊರ ಜಿಲ್ಲೆಗಳಿಗೆ ತೆರಳಿ ಬಂದಿದ್ದಾರೆ. ಸದ್ಯಕ್ಕೆ ಆಧಾರ್ ಕಾರ್ಡ್, ವೋಟರ್ ಐಡಿ ಪ್ರದರ್ಶಿಸಿ ಶೂನ್ಯದರದ ಟಿಕೆಟ್ ಪಡೆದುಕೊಳ್ಳುತ್ತಿದ್ದಾರೆ. ಸ್ಮಾರ್ಟ್ ಕಾರ್ಡ್ ಬಗ್ಗೆ ಸರ್ಕಾರದಿಂದ ಇದುವರೆಗೆ ಯಾವುದೇ ಮಾರ್ಗಸೂಚಿ ಬಂದಿಲ್ಲ ಎನ್ನಲಾಗಿದೆ.
    ಉಚಿತ ಪ್ರಯಾಣದಿಂದಾಗಿ ಬಡ ಮಹಿಳೆಯರಿಗೆ ಆರ್ಥಿಕ ಉಳಿತಾಯಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಕಳೆದ ಬಾರಿ ಬಸ್‌ಪಾಸ್ ಮಾಡಿಸಿದ್ದ ಅಂದಾಜು 11 ಸಾವಿರ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಶಕ್ತಿ ಯೋಜನೆ ರಹದಾರಿಯಾಗಿದೆ. ಕಚೇರಿ, ಶಾಲೆ ಹಾಗೂ ಅಗತ್ಯ ಕೆಲಸಕ್ಕೆ ತೆರಳುತ್ತಿದ್ದ ಮಹಿಳಾ ಉದ್ಯೋಗಿಗಳು ಈಗ ಬಸ್ ನೆಚ್ಚಿಕೊಂಡಿದ್ದಾರೆ. ಇದರಿಂದ ಸ್ವಂತ ವಾಹನಗಳಿಗೆ ಬಳಸುತ್ತಿದ್ದ ಇಂಧನದ ಉಳಿತಾಯವೂ ಸಾಧ್ಯವಾಗಿದೆ. ವಾಯು ಮಾಲಿನ್ಯ ತಗ್ಗಲು ಕೊಡುಗೆ ನೀಡಿದಂತಾಗಿದೆ.
    ಕೊನೆ ಮಾತು. ‘ಇರುವ ಭಾಗ್ಯವ ನೆನೆದು ಬಾರೆನೆಂಬುದನ್ನು ಬಿಡು, ಹರುಷಕ್ಕಿದೆ ದಾರಿ’ ಎಂಬುದು ಕವಿ ಡಿ.ವಿ. ಗುಂಡಪ್ಪನವರ ಘೋಷಣೆ. ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಡ್ರೈವರ್ ಸೀಟಿನ ಹಿಂಬದಿಯಲ್ಲಿ ರಾರಾಜಿಸುವ ಈ ಸಾಲುಗಳು ಈಗಿನ ಮಹಿಳೆಯರಿಗೆ ಅನ್ವರ್ಥಕದಂತಿದೆೆ!
    —-

    * ಮಹಿಳಾ ಪ್ರಯಾಣಿಕರ ವಿವರ
    ಬಸ್‌ನ ವಿಧ ವಯಸ್ಕರು ಮಕ್ಕಳು ಒಟ್ಟು ವರಮಾನ
    ————————————–
    ವೇಗದೂತ 10,08,182 12,330 10,20,512 2,29,86,123
    ಸಾಮಾನ್ಯ 10,38,840 17,811 10,56,651 3,57,80,668
    ನಗರ ಸಾರಿಗೆ 8,10,380 10,412 8,20,792 1,68,01,798
    ————————————–
    ಒಟ್ಟು 28,57,402 40,553 28,97,955 7,55,68,589
    ————————————–

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts