More

    ತಾಲೂಕುವಾರು ಕನಿಷ್ಠ 50 ಬೆಡ್ ವ್ಯವಸ್ಥೆ

    ಹಾವೇರಿ: ಜಿಲ್ಲೆಯಲ್ಲಿ ಕರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಾಗಬಹುದಾದ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಪರಿಸ್ಥಿತಿ ಎದುರಿಸಲು ಎಲ್ಲ ಸಿದ್ಧತೆಗಳನ್ನು ವಾರದೊಳಗೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಗೃಹ, ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಕೋವಿಡ್ ಪರಿಸ್ಥಿತಿ ಹಾಗೂ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಶನಿವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ತಜ್ಞರ ಪ್ರಕಾರ ಕೋವಿಡ್ ಪ್ರಕರಣಗಳು ಮುಂದಿನ ದಿನಗಳಲ್ಲಿ ಹೆಚ್ಚಳವಾಗಲಿವೆ. ದಿನಕ್ಕೆ 35 ಪ್ರಕರಣಗಳು ಪತ್ತೆಯಾದರೂ ಸೂಕ್ತ ವೈದ್ಯಕೀಯ ಚಿಕಿತ್ಸೆ, ಈ ಪ್ರಕರಣಗಳ ಪ್ರಾಥಮಿಕ ಮತ್ತು ದ್ವಿತೀಯ ಸಂರ್ಪತರನ್ನು ಕ್ವಾರಂಟೈನ್​ಗೊಳಪಡಿಸಲು ಅಗತ್ಯ ವ್ಯವಸ್ಥೆ ಕೈಗೊಳ್ಳಬೇಕು ಎಂದರು.

    ಪ್ರತಿ ತಾಲೂಕಿನಲ್ಲಿ ಕನಿಷ್ಠ 50 ಬೆಡ್​ಗಳ ಕೇಂದ್ರೀಕೃತ ಆಕ್ಸಿಜನ್ ವ್ಯವಸ್ಥೆಯುಳ್ಳ ವಾರ್ಡ್​ಗಳನ್ನು ಸಿದ್ಧಮಾಡಿಕೊಳ್ಳಬೇಕು. ಜಿಲ್ಲಾಸ್ಪತ್ರೆ ಹೊರತುಪಡಿಸಿ ಹಾವೇರಿ ತಾಲೂಕು ಸೇರಿ ಎಲ್ಲ ತಾಲೂಕುಗಳಲ್ಲಿ ಈ ವ್ಯವಸ್ಥೆಯಾಗಬೇಕು. ಕೋವಿಡ್ ಲಕ್ಷಣಗಳು ಬಂದು ಪಾಸಿಟಿವ್ ಆದ ರೋಗಿಗಳು ಕೋವಿಡ್ ಲಕ್ಷಣಗಳು ಇಲ್ಲದಿದ್ದರೂ ಪಾಸಿಟಿವ್ ಬಂದ ಪ್ರಕರಣಗಳನ್ನು ಸೂಕ್ತ ರೀತಿಯಲ್ಲಿ ಎಸ್​ಒಪಿ ಮಾನದಂಡದಂತೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಕ್ರಮವಹಿಸಬೇಕು. ಕೋವಿಡ್ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್, ಐಸೋಲೇಷನ್ ವಾರ್ಡ್, ಪ್ರಾಥಮಿಕ ಮತ್ತು ದ್ವಿತೀಯ ಸಂರ್ಪತರ ಕ್ವಾರಂಟೈನ್​ಗೆ ಈಗಿನ ವ್ಯವಸ್ಥೆ ಜೊತೆಗೆ ಹೆಚ್ಚುವರಿಯಾಗಿ ಹಾಸ್ಟೆಲ್​ಗಳನ್ನು ಗುರುತಿಸಬೇಕು. ಪ್ರತಿ ತಾಲೂಕಿಗೊಂದು ಆಂಬುಲೆನ್ಸ್ ಒದಗಿಸಬೇಕು. ಕ್ವಾರಂಟೈನ್ ಮಾಡಲು ಪ್ರಾಥಮಿಕ ಮತ್ತು ದ್ವಿತೀಯ ಸಂರ್ಪತರನ್ನು ಕರೆತರಲು ಪ್ರತಿ ತಾಲೂಕಿಗೆ ಎರಡು ವಾಹನಗಳ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಆಯಾ ತಾಲೂಕಿನ ಕೋವಿಡ್ ಸೋಂಕಿತರನ್ನು ಆಯಾ ತಾಲೂಕಿನಲ್ಲಿ ಕ್ವಾರಂಟೈನ್​ಗೆ ಒಳಪಡಿಸಬೇಕು. ಹೆಚ್ಚುವರಿಯಾದರೆ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಬೇಕು. ಜಿಲ್ಲಾಸ್ಪತ್ರೆಯಲ್ಲಿ ಈಗಿರುವ ಬೆಡ್​ಗಳ ವ್ಯವಸ್ಥೆಯನ್ನು ಹೆಚ್ಚುವರಿಯಾಗಿ ಮಾಡಿಕೊಳ್ಳಬೇಕು. ಯಾವುದೇ ಪರಿಸ್ಥಿತಿ ಬಂದರೂ ಎದುರಿಸಲು ಸನ್ನದ್ಧರಾಗಿರಬೇಕು ಎಂದರು.

    ಜಿಪಂ ಅಧ್ಯಕ್ಷ ಬಸನಗೌಡ ದೇಸಾಯಿ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿ ಕೃಷ್ಣ ಬಾಜಪೈ, ಎಸ್​ಪಿ ಕೆ.ಜಿ. ದೇವರಾಜ್, ಜಿಪಂ ಸಿಇಒ ರಮೇಶ ದೇಸಾಯಿ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಅಮರಾಪುರ, ಸದಸ್ಯ ವಿರುಪಾಕ್ಷಪ್ಪ ಕಡ್ಲಿ, ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಡಿಎಚ್​ಒ ಡಾ. ರಾಜೇಂದ್ರ ದೊಡ್ಡಮನಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ನಾಗರಾಜ ನಾಯಕ ಇತರರಿದ್ದರು.

    ನೀರಾವರಿ ಯೋಜನೆ ಪೂರ್ಣಗೊಳಿಸಲು ಸೂಚನೆ

    ಶಿಗ್ಗಾಂವಿ ಹಾಗೂ ಸವಣೂರ ಏತ ನೀರಾವರಿ ಯೋಜನೆಗಳ ಬಾಕಿ ಕಾಮಗಾರಿಗಳನ್ನು ಈ ವರ್ಷಾಂತ್ಯದೊಳಗೆ ಪೂರ್ಣಗೊಳಿಸಲು ಕರ್ನಾಟಕ ನೀರಾವರಿ ನಿಗಮದ ಇಂಜಿನಿಯರ್​ಗಳಿಗೆ ಸಚಿವ ಬಸವರಾಜ ಬೊಮ್ಮಾಯಿ ಸೂಚಿಸಿದರು.

    ಶನಿವಾರ ಶಿಗ್ಗಾಂವಿ, ಸವಣೂರ ಏತ ನೀರವಾರಿ ಯೋಜನೆಯ ಬಾಕಿ ಉಳಿದ ಕಾಮಗಾರಿಗಳು, ಪೈಪ್​ಲೈನ್ ಅಳವಡಿಕೆ, ಭೂಸ್ವಾಧೀನ ಕಾರ್ಯ, ಪರಿಹಾರ ವಿತರಣೆ ಕುರಿತು ಇಂಜಿನಿಯರ್​ಗಳೊಂದಿಗೆ ಸಭೆ ನಡೆಸಿ, ಈ ವರ್ಷದ ನವೆಂಬರ ಒಳಗೆ ಕಾಮಗಾರಿ ಮುಗಿಸಿ ನೀರು ತುಂಬಿಸುವ ಟ್ರಯಲ್ ಆರಂಭಿಸಬೇಕು ಎಂದು ತಾಕೀತು ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts