More

    ತಾಯಿ ಹೆಸರಿಗೆ ಮತ್ತೆ ಆಸ್ತಿ ದಾಖಲು

    ಹಾನಗಲ್ಲ: ತಾಯಿಯ ಹೆಸರಿನಲ್ಲಿದ್ದ ಆಸ್ತಿಯನ್ನು ಮಕ್ಕಳು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡು, ಕೊನೆಗೆ ತಾಯಿಯನ್ನೇ ಮನೆಯಿಂದ ಹೊರಹಾಕಿದ ಪ್ರಕರಣದಲ್ಲಿ ಇಡೀ ಆಸ್ತಿಯನ್ನು ಉಪವಿಭಾಗಾಧಿಕಾರಿ ಮರಳಿ ತಾಯಿಯ ಹೆಸರಿಗೆ ದಾಖಲು ಮಾಡಿದ ಘಟನೆ ತಾಲೂಕಿನ ಚಿಕ್ಕಹುಲ್ಲಾಳ ಗ್ರಾಮದಲ್ಲಿ ನಡೆದಿದೆ.

    ಚಿಕ್ಕಹುಲ್ಲಾಳ ಗ್ರಾಮದ ಯಲ್ಲವ್ವ ಧರ್ಮಗೌಡ ಪಾಟೀಲ ಎಂಬ ವೃದ್ಧೆಗೆ ಆಕೆಯ ಪತಿಯಿಂದ ಮರಣಾನಂತರ 6.23 ಎಕರೆ ಕೃಷಿ ಜಮೀನು ಬಂದಿತ್ತು. 2011-12ರಲ್ಲಿ ವೃದ್ಧೆ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ವಾರಸುದಾರರಾಗಿ ಪಹಣಿಯಲ್ಲಿ ದಾಖಲಾಗಿದ್ದರು. ನಂತರ ನಾಲ್ವರು ಮಕ್ಕಳು ತಲಾ ಒಂದೊಂದು ಎಕರೆ ಹಂಚಿಕೊಂಡು, ತಾಯಿ ಹೆಸರಿಗೆ 2.23 ಎಕರೆ ಇಟ್ಟಿದ್ದರು. 2014-15ರಲ್ಲಿ ಇಬ್ಬರು ಪುತ್ರರು ತಾಯಿಯ ಹೆಸರಿನಲ್ಲಿದ್ದ ಜಮೀನನ್ನು ತಮ್ಮ ಹೆಸರಿಗೆ ಹಕ್ಕು ಬಿಟ್ಟುಕೊಟ್ಟ ಪತ್ರ ಮಾಡಿಸಿಕೊಂಡಿದ್ದರು. ಅಲ್ಲದೆ, ತಾಯಿಯ ಪಾಲನೆ-ಪೋಷಣೆ ಮಾಡದೇ ಮನೆಯಿಂದ ಹೊರಗಟ್ಟಿದ್ದರು. ಈ ಕುರಿತಂತೆ ಗ್ರಾಮದ ಹಿರಿಯರ ಮಟ್ಟದಲ್ಲಿ ಒಂದಷ್ಟು ರಾಜೀ ಪಂಚಾಯಿತಿಗಳೂ ನಡೆದಿದ್ದರೂ, ತಾಯಿಯನ್ನು ನೋಡಿಕೊಳ್ಳಲು ಪುತ್ರರು ನಿರಾಕರಿಸಿದ್ದರು.

    ಸ್ವಾಧಾರ ಗೃಹ ಸೇರಿದ್ದ ವೃದ್ಧೆ: ಈ ಹಿನ್ನೆಲೆಯಲ್ಲಿ ವೃದ್ಧೆ ಯಲ್ಲವ್ವ ತನ್ನ ಪುತ್ರಿಯರ ಸಹಾಯದಿಂದ ಹಾವೇರಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ಸ್ವಾಧಾರ ಕೇಂದ್ರಕ್ಕೆ ಸೇರಿದ್ದಳು. ತನ್ನ ಹೆಸರಿನಲ್ಲಿದ್ದ ಆಸ್ತಿಯನ್ನು ಪುತ್ರರು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡು, ತನ್ನನ್ನು ಹೊರಗಟ್ಟಿರುವ ಕುರಿತು ಕೇಂದ್ರದ ಅಧ್ಯಕ್ಷೆ ಪರಿಮಳಾ ಜೈನ್ ಅವರ ಮಾರ್ಗದರ್ಶನದಂತೆ ದೂರು ದಾಖಲಿಸಿದ್ದಳು. ತನಗಾಗಿರುವ ಅನ್ಯಾಯ ಸರಿಪಡಿಸುವಂತೆ ಸವಣೂರು ಉಪವಿಭಾಗಾಧಿಕಾರಿಗೆ ಮನವಿ ಮಾಡಿದ್ದಳು.

    2019ರ ಫೆ. 14ರಂದು ಹಿರಿಯ ನಾಗರಿಕರ ರಕ್ಷಣಾ ನ್ಯಾಯ ಮಂಡಳಿ, ವೃದ್ಧೆಯ ಜೀವನ ನಿರ್ವಹಣೆಗೆ ಮಾಸಿಕ ತಲಾ 5 ಸಾವಿರ ರೂ. ನೀಡುವಂತೆ ಇಬ್ಬರು ಪುತ್ರರಿಗೆ ಆದೇಶ ನೀಡಿತ್ತು. ಈ ಆದೇಶದಂತೆ ಕೆಲವು ತಿಂಗಳು ಮಾತ್ರ ಹಣ ಕಳುಹಿಸಿದ ಪುತ್ರರು, ನಂತರ ನಿರ್ಲಕ್ಷಿಸಿದ್ದರು. ಹೀಗಾಗಿ, ಮತ್ತೆ ವೃದ್ಧೆ ಉಪವಿಭಾಗಾಧಿಕಾರಿ ಗಮನಕ್ಕೆ ತಂದಿದ್ದರು.

    ವೃದ್ಧೆ ಹೆಸರಿಗೆ ಆಸ್ತಿ ದಾಖಲು: ದೂರು ಪರಿಶೀಲಿಸಿದ ಸವಣೂರು ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ, ಪಾಲಕರ ಹಾಗೂ ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆಯಡಿ ಯಲ್ಲವ್ವನ ಮಕ್ಕಳಿಬ್ಬರಿಗೂ ನೋಟಿಸ್ ಜಾರಿ ಮಾಡಿ ಹೇಳಿಕೆ ನೀಡುವಂತೆ ಸೂಚಿಸಿದ್ದರು. ಆದರೆ, ಇಬ್ಬರು ಮಕ್ಕಳಿಂದಲೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಪತಿ ಧರ್ಮಗೌಡನಿಂದ ಬಂದಿರುವ 6.23 ಎಕರೆ ಕೃಷಿ ಭೂಮಿಯನ್ನು ಮತ್ತೆ ಯಲ್ಲವ್ವಳ ಹೆಸರಿಗೆ ದಾಖಲಿಸಿದ್ದರು. ಇದರ ಪಹಣಿಯನ್ನು ವೃದ್ಧೆ ಯಲ್ಲವ್ವಳಿಗೆ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ, ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ, ಪಿಎಸ್​ಐ ಆಂಜನೇಯ ಸಮ್ಮುಖದಲ್ಲಿ ಹಸ್ತಾಂತರಿಸಿದ್ದಾರೆ.

    ಸ್ವಾಧಾರ ಗೃಹಕ್ಕೆ ಯಲ್ಲವ್ವ ಬಂದ ನಂತರ ನಮ್ಮ ಸಂಸ್ಥೆಯಲ್ಲಿನ ಗರ್ಭಿಣಿಯರು ಹೆರಿಗೆ ಸಮಯದಲ್ಲಿ ಎದುರಿಸುತ್ತಿದ್ದ ಸಮಸ್ಯೆಗಳ ಪರಿಹಾರಕ್ಕೆ ಸಹಾಯವಾಗಿದೆ. ಅವರ ಆರೋಗ್ಯ ಕಾಪಾಡುವಲ್ಲಿ ಮುತುವರ್ಜಿ ವಹಿಸುತ್ತಿದ್ದಾಳೆ. ಸೂಲಗಿತ್ತಿಯಾಗಿ ಹತ್ತಾರು ಸರಳ ಹೆರಿಗೆ ಮಾಡಿಸಿದ್ದಾಳೆ. ಇವಳನ್ನು ಮತ್ತೆ ಅವಳ ಗ್ರಾಮಕ್ಕೆ ಕಳುಹಿಸಿಕೊಡುವುದಕ್ಕೆ ಮನಸ್ಸೇ ಬರುತ್ತಿಲ್ಲ. ಇಂಥವಳಿಗೆ ಮಕ್ಕಳಿಂದಲೇ ಅನ್ಯಾಯವಾಗಿರುವುದು ಖಂಡನೀಯ. ಅಧಿಕಾರಿಗಳು ಉತ್ತಮ ಕಾರ್ಯ ಕೈಗೊಂಡಿದ್ದಾರೆ. ಎಲ್ಲರಿಗೂ ಇದೊಂದು ಪಾಠವಾಗಬೇಕಿದೆ.
    | ಪರಿಮಳಾ ಜೈನ್, ಅಧ್ಯಕ್ಷೆ ಮಹಿಳಾ ಸ್ವಾಧಾರ ಗೃಹ ಹಾವೇರಿ

    ಯಲ್ಲವ್ವನ ಆಸ್ತಿಯನ್ನು ಮರಳಿ ಅವರ ಹೆಸರಿಗೆ ದಾಖಲಿಸಲಾಗಿದೆ. ಯಲ್ಲವ್ವಳ ಸ್ವಗ್ರಾಮ ಚಿಕ್ಕಹುಲ್ಲಾಳಕ್ಕೆ ತೆರಳಿ ದಾಖಲೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಯಲ್ಲವ್ವಳಿಗೆ ಯಾವುದೇ ರೀತಿಯ ಸಮಸ್ಯೆ ಮಾಡದಂತೆ ಮಕ್ಕಳಿಗೆ ತಾಕೀತು ಮಾಡಲಾಗಿದೆ. ಗ್ರಾಪಂ ಮೂಲಕ ಯಲ್ಲವ್ವಳಿಗೆ ಆಶ್ರಯ ಯೋಜನೆಯಡಿ ಪ್ರತ್ಯೇಕ ಮನೆ ನಿರ್ವಿುಸಿಕೊಡುವಂತೆ ಪಿಡಿಒ ಅವರಿಗೂ ಸೂಚಿಸಲಾಗಿದೆ.
    | ಪಿ.ಎಸ್. ಎರ್ರಿಸ್ವಾಮಿ ತಹಸೀಲ್ದಾರ್ ಹಾನಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts