More

    ತಳ ಸಮುದಾಯ ಸಂಘಟಿಸಿ ಕೈ ಬಲಪಡಿಸಿ -ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ದ್ವಾರಕನಾಥ್  

    ದಾವಣಗೆರೆ: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಳ ಸಮುದಾಯಗಳನ್ನು ಸಂಘಟಿಸಿ ಕಾಂಗ್ರೆಸ್ ಸದೃಢಗೊಳಿಸುವ ಕೆಲಸ ಮಾಡಬೇಕು ಎಂದು ಕೆಪಿಸಿಸಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಿ.ಎಸ್. ದ್ವಾರಕನಾಥ್ ಸಲಹೆ ನೀಡಿದರು.
    ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಸಾಮಾಜಿಕ ನ್ಯಾಯ ಸಮಿತಿ ರಚನಾ ಸಭೆಯಲ್ಲಿ ಅವರು ಮಾತನಾಡಿದರು.
    ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಅತಿಹೆಚ್ಚು ಸಂಸದರನ್ನು ಚುನಾಯಿಸಿ ಕಳುಹಿಸಬೇಕೆಂಬುದು ಎಐಸಿಸಿ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ನಿರೀಕ್ಷೆಯಾಗಿದೆ. ಪಕ್ಷದಲ್ಲಿ ಸಾಮಾಜಿಕ ನ್ಯಾಯವನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಸಿದಂತೆಲ್ಲ ಪಕ್ಷ ಹೆಚ್ಚು ಸದೃಢ ಆಗಲಿದೆ. ಜತೆಗೆ, ಹೆಚ್ಚು ಲೋಕಸಭಾ ಸದಸ್ಯರನ್ನು ಗೆಲ್ಲಿಸಬಹುದು ಎಂದು ಹೇಳಿದರು.
    ಅಲ್ಲದೇ ಅವಕಾಶ ವಂಚಿತ ತಳ ಸಮುದಾಯದ ಜನರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಸಂಘಟನೆಯಲ್ಲಿ ತೊಡಗಿಸುವುದರಿಂದ ಲೋಕಸಭಾ ಚುನಾವಣೆ ಜತೆಗೆ ಮುಂಬರುವ ಜಿಲ್ಲಾ, ತಾಲೂಕು, ಗ್ರಾಪಂ, ನಗರಸಭೆ ಹಾಗೂ ಪಾಲಿಕೆ ಚುನಾವಣೆಗಳಲ್ಲಿ ಪಕ್ಷಕ್ಕೆ ಹೆಚ್ಚು ಲಾಭವಾಗಲಿದೆ. ಈ ಸಮುದಾಯಗಳ ಶೇ.8ರಷ್ಟು ಮತಗಳ ಪೈಕಿ ಶೇ.3ರಿಂದ 5ರಷ್ಟು ವೋಟ್ ಹೆಚ್ಚಿಸಿಕೊಳ್ಳಬಹುದು ಎಂದು ತಿಳಿಸಿದರು.
    ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಕೇವಲ 45 ದಿನಗಳಲ್ಲಿಯೇ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಾಮಾಜಿಕ ನ್ಯಾಯ ಜಿಲ್ಲಾ ಮತ್ತು ಬ್ಲಾಕ್ ಸಮಿತಿ ರಚನೆ ಮಾಡಬೇಕೆಂದು ಕೆಪಿಸಿಸಿ ಅಧ್ಯಕ್ಷರು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡುವ ಮೂಲಕ ಪಕ್ಷದ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಸಣ್ಣ ಸಮುದಾಯಗಳಿಗೆ ಮಾನ್ಯತೆ ನೀಡಿ ಸಾಮಾಜಿಕ ನ್ಯಾಯ ಸಮಿತಿ ರಚನೆ ಮಾಡಲಾಗುತ್ತಿದೆ. ಸಮಿತಿಯಲ್ಲಿ ಶೇ.50ರಷ್ಟು ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
    ರಾಜ್ಯ ಕಾಂಗ್ರೆಸ್ ಸಾಮಾಜಿಕ ನ್ಯಾಯ ಸಮಿತಿ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಸೇರಿ ಸುಮಾರು 17 ಜಿಲ್ಲೆಗಳಲ್ಲಿ ಸಂಚರಿಸಿ ಅಲ್ಲಿರುವ ಆದಿವಾಸಿಗಳು ಮತ್ತು ಅಲೆಮಾರಿ ಜನರನ್ನು ಸಂಘಟಿಸಿ ಪಕ್ಷಕ್ಕೆ ಕರೆತರುವ ಪ್ರಯತ್ನ ನಡೆಸಿತು. ಇದರಿಂದ ನಾವು ಸುತ್ತಾಡಿದ ಕಡೆಗಳಲ್ಲಿ ಶೇ.3ರಿಂದ 5ರಷ್ಟು ಮತಗಳು ಕಾಂಗ್ರೆಸ್‌ಗೆ ಹೆಚ್ಚಾಗಿ ಲಭಿಸಿದವು ಎಂದು ಹೇಳಿದರು.
    ದೇಶದಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿಗಳಾಗಿದ್ದ ಸಂದರ್ಭ ಬಾಲಕೃಷ್ಣ ವೇದಿಕೆ ಎಂಬ ಆಯೋಗ ರಚಿಸಿದ್ದರಿಂದ ಅಲೆಮಾರಿ ಜನಾಂಗದವರ ಬಗ್ಗೆ ದೊಡ್ಡ ಸಂಶೋಧನೆ ನಡೆಸಲು ಸಾಧ್ಯವಾಯಿತು. ಆಗ ಕರ್ನಾಟಕದಲ್ಲಿ ಶೇ.8ರಷ್ಟು ಅಲೆಮಾರಿ ಜನಾಂಗದವರಿದ್ದಾರೆ ಎಂಬುದು ಬೆಳಕಿಗೆ ಬಂತು. ಭಾರತದ ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಅಲೆಮಾರಿ ಜನಾಂಗದವರಿದ್ದು, ಕರ್ನಾಟಕ 2ನೇ ರಾಜ್ಯವಾಗಿದೆ ಎಂದು ತಿಳಿಸಿದರು.
    ಇನ್ನು ಹಿಂದುಳಿದ ವರ್ಗಗಳಲ್ಲಿರುವ ಪ್ರವರ್ಗ 1ರಲ್ಲಿ 95 ಜಾತಿಗಳು ಹಾಗೂ ಪ್ರವರ್ಗ 2ಎನಲ್ಲಿ 102 ಜಾತಿಗಳಿದ್ದು, ಎರಡೂ ವರ್ಗಗಳಲ್ಲಿನ 197 ಸಮುದಾಯಗಳ ಒಟ್ಟಾರೆ ಜನಸಂಖ್ಯೆ ಶೇ.56ರಷ್ಟಿದೆ. ಪಕ್ಷವು ಈ ಸಮುದಾಯಗಳಿಗೆ ಒಂದು ಅಸ್ಮಿತೆ ತೋರಿಸಿದರೆ ಮುಂದಿನ ರಾಜಕಾರಣ ಹೇಗಾಗಬಹುದು ಎಂಬುದನ್ನು ನೀವೇ ಯೋಚಿಸಿ ಎಂದರು.
    ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಒಂದು ಬೇಸ್ ಇದೆ. ಡಾ.ಶಾಮನೂರು ಶಿವಶಂಕರಪ್ಪ ಅವರಂತಹ ಹಿರಿಯರು ಪಕ್ಷಕ್ಕೆ ಒಂದು ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಬೇರೆ ಜಿಲ್ಲೆಗಳ ಬಗ್ಗೆಯೂ ಈ ಕುರಿತು ಯೋಚನೆ ಮಾಡಬೇಕಾಗಿದೆ ಎಂದರು.
    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಸಾಮಾಜಿಕ ನ್ಯಾಯ ವಿಭಾಗದ ಉಪಾಧ್ಯಕ್ಷೆ ವಿ. ಪದ್ಮಾವತಿ, ಪ್ರಧಾನ ಕಾರ್ಯದರ್ಶಿಗಳಾದ ಚಮನ್ ಪಾರ್ಜನಾ, ನಾಗರಾಜ್, ಉತ್ತರ ವಲಯ ಅಧ್ಯಕ್ಷ ಕೆ.ಜಿ. ಶಿವಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅನಿತಾಬಾಯಿ ಮಾಲತೇಶ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts