More

    ತಳಮಟ್ಟದಿಂದ ಜೆಡಿಎಸ್, ಬಿಜೆಪಿ ಮೈತ್ರಿಯಾಗಲಿ

    ನಾಗಮಂಗಲ: ಯಾವುದೇ ಒಂದು ಕ್ಷೇತ್ರಕ್ಕೆ ಅಥವಾ ಒಂದು ಸೀಟಿಗೋಸ್ಕರ ಜೆಡಿಎಸ್‌ನೊಂದಿಗೆ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳದೆ, ಬಹಳ ಎಚ್ಚರಿಕೆಯಿಂದ ತಳಮಟ್ಟದಿಂದ ಹೊಂದಾಣಿಕೆ ಮಾಡಿಕೊಂಡರೆ ನಮ್ಮದೇನು ಅಭ್ಯಂತರವಿಲ್ಲ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹೇಳಿದರು

    ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಎಚ್.ಡಿ.ಕುಮಾರಸ್ವಾಮಿ ಸದನದಲ್ಲಿ ಇಬ್ಬರೂ ಒಗ್ಗಟ್ಟಾಗಿ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತಿರುವುದನ್ನು ನೋಡಿದರೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗುವ ಮುನ್ಸೂಚನೆ ಇದ್ದಂತೆ ಕಾಣುತ್ತದೆ. ಎರಡೂ ಪಕ್ಷಗಳು ಮೈತ್ರಿಯಾಗುವುದಾದರೆ ನಮ್ಮದೇನು ತಕರಾರಿಲ್ಲ. ಆದರೆ ಹೊಂದಾಣಿಕೆ ಮಾಡಿಕೊಳ್ಳುವುದಾದರೆ ಕೆಳಹಂತದಿಂದ ಹೊಂದಾಣಿಕೆ ಮಾಡಿಕೊಳ್ಳಲಿ. ಅದನ್ನು ಹೊರತುಪಡಿಸಿ ಕೆಲವು ಕ್ಷೇತ್ರಗಳಿಗೆ ಅಥವಾ ಸ್ಥಾನಗಳಿಗೆ ಮಾತ್ರ ಮೈತ್ರಿ ಮಾಡಿಕೊಳ್ಳುವುದಾದರೆ ಬೇಡ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ತಳಮಟ್ಟದಿಂದ ಮೈತ್ರಿಮಾಡಿಕೊಳ್ಳದಿದ್ದರೆ ಬಿಜೆಪಿಯನ್ನು ಜೆಡಿಎಸ್ ಮುಗಿಸುತ್ತದೆ. ಬಿಜೆಪಿಗೆ ಜೆಡಿಎಸ್ ಅನಿವಾರ್ಯವಲ್ಲ. ಆದರೆ ಜೆಡಿಎಸ್‌ಗೆ ಬಿಜೆಪಿ ಅನಿವಾರ್ಯವಾಗಿದೆ. ಎಚ್.ಡಿ.ಕುಮಾರಸ್ವಾಮಿ ಮೈತ್ರಿ ಮಾಡಿಕೊಳ್ಳುವುದಾದರೆ ಎರಡೂ ಪಕ್ಷದವರನ್ನು ಸಮನಾಗಿ ನೋಡಿಕೊಳ್ಳಲಿ ಎಂದರು.
    ಮುಂದಿನ ಲೋಕಸಭೆ ಚುನಾವಣೆಯ ಸ್ಪರ್ಧೆ ಬಗ್ಗೆ ನಾನು ಇನ್ನು ತೀರ್ಮಾನಿಸಿಲ್ಲ. ಆ ಸಂದರ್ಭ ಬಂದಾಗ ನಾನೇ ತಿಳಿಸುತ್ತೇನೆ. ಎರಡೂ ಪಕ್ಷಗಳು ಮೈತ್ರಿಯಾದರೆ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಜೆಡಿಎಸ್ ಮಾಜಿ ಶಾಸಕ ಸುರೇಶ್‌ಗೌಡ ಹಾಗೂ ನಾನು ಇಬ್ಬರೂ ಒಗ್ಗಟ್ಟಾಗಿ ಪ್ರಚಾರ ಮಾಡುವ ಮೂಲಕ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಶ್ರಮಿಸುತ್ತೇನೆ. ತಾಲೂಕಿನಲ್ಲಿಯೂ ಸ್ಥಾನಗಳು ಎರಡೂ ಪಕ್ಷಕ್ಕೆ ಹಂಚಿಕೆಯಾಗಲಿ ಎಂದರು.

    ಬಿಜೆಪಿ ರಾಷ್ಟ್ರ ಮಾತ್ರವಲ್ಲದೆ ವಿಶ್ವಮನ್ನಣೆಯನ್ನು ಪಡೆದಿರುವ ಪಕ್ಷವಾಗಿ ಬೆಳೆದಿದೆ. ರಾಜ್ಯದಲ್ಲಿ ವಿರೋಧಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲವೆಂದು ಕಾಂಗ್ರೆಸ್‌ನವರು ಟೀಕೆ ಮಾಡುತ್ತಿದ್ದಾರೆ. ಹೊಸ ಸರ್ಕಾರ ರಚನೆಯಾಗಿರುವುದರಿಂದ ಮತ್ತಷ್ಟು ಕಾಲಾವಕಾಶ ನೀಡಿ ತದನಂತರ ಮಾತನಾಡೊಣ ಎಂದು ನಾವು ಕಾಯುತ್ತಿದ್ದೇವೆ. ಸರ್ಕಾರದ ಲೋಪಗಳನ್ನು ಕಂಡುಹಿಡಿದು ವಿರೋಧ ಪಕ್ಷವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುವುದು. ನಾವು ತಾಲೂಕಿನಲ್ಲಿ ಮತಗಳಿಂದ ಸೋತಿರಬಹುದು. ಆದರೆ ಜನರ ಮನಸ್ಸಿನಿಂದ ಸೋತಿಲ್ಲ. ಜನರ ಕಷ್ಟ, ಸುಖಗಳಲ್ಲಿ ಭಾಗಿಯಾಗಿ ಜನರ ಮಧ್ಯೆ ಇರಲಿದ್ದೇನೆ ಎಂದರು.
    ಮುಖಂಡರಾದ ಎಲ್.ಎಸ್.ಚೇತನ್‌ಗೌಡ, ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ, ತಾಪಂ ಮಾಜಿ ಸದಸ್ಯ ಹೇಮರಾಜು, ಬಿದರಕೆರೆ ಮಂಜೇಗೌಡ, ಮಂಜುನಾಥ್, ಪಾಳ್ಯರಘು, ಟಿ.ಕೆ.ರಾಮೇಗೌಡ ಇದ್ದರು.

    ತಮ್ಮ ಅಸ್ತಿತ್ವಕ್ಕಾಗಿ ಹೋರಾಟ: ತಾಲೂಕಿನಲ್ಲಿ ಹಾಲಿ ಮತ್ತು ಮಾಜಿ ಶಾಸಕರಿಬ್ಬರೂ ಜನಪರವಾದ ಕೆಲಸಗಳಿಗೆ ಹೋರಾಟ ಮಾಡದೆ, ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಸಾರಿಗೆ ಇಲಾಖೆ ನೌಕರನ ಪ್ರಕರಣದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ತಮ್ಮ ಶಿಫಾರಸ್ಸು ಪತ್ರ ನೀಡಿ ವರ್ಗಾವಣೆ ಮಾಡಿಸಿದ್ದರೆ ಹಾಗೂ ಮಾಜಿ ಶಾಸಕ ಸುರೇಶ್‌ಗೌಡ ಆಂಬುಲೆನ್ಸ್ ಅನ್ನು ಉದ್ದೇಶಪೂರಕವಾಗಿ ತಡೆದಿದ್ದು, ಇಬ್ಬರಿಗೂ ತಕ್ಕ ಪ್ರತಿಫಲ ಆಗಲಿ. ಅಧಿಕಾರಿಗಳು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಸತ್ಯಾಂಶ ಹೊರಹಾಕಬೇಕಿದೆ ಎಂದು ಒತ್ತಾಯಿಸಿದರು.
    ತಾಲೂಕಿನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮೊದಲಿದ್ದಂತಹ ಪರಿಸ್ಥಿತಿ ಈಗಲೂ ಇದೆ. ಜಿಲ್ಲಾ ಉಸ್ತುವಾರಿ ಸಚಿವರು ಲಂಚಮುಕ್ತ ಜಿಲ್ಲೆಯನ್ನಾಗಿಸಲು ಕ್ರಮವಹಿಸಬೇಕು. ಅದನ್ನು ನಾಗಮಂಗಲ ತಾಲೂಕಿನಿಂದಲೇ ಆರಂಭಿಸಬೇಕು. ಹಿಂದೆ ಇದ್ದಂತಹ ಏಜೆಂಟ್ ರೀತಿಯ ಅಧಿಕಾರಿಗಳು ಕಚೇರಿಗಳಲ್ಲಿ ಅದೇ ಹುದ್ದೆಯಲ್ಲಿಯೇ ಟಿಕಾಣಿ ಹೂಡಿದ್ದಾರೆ. ಅವರನ್ನು ಮೊದಲು ಸರಿದಾರಿಗೆ ತರುವ ಕೆಲಸವನ್ನು ಮಾಡಲಿ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts