More

    ತಮಿಳುನಾಡಿಗೆ ಕಾವೇರಿ- ಕರವೇ ಪ್ರತಿಭಟನೆ

    ದಾವಣಗೆರೆ: ತಮಿಳುನಾಡಿಗೆ ಕಾವೇರಿ ನೀರು ಬಿಡದಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
    ನಗರದ ಪಾಲಿಕೆ ಆವರಣದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಉಪ ವಿಭಾಗಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ನಂತರ ಅಧಿಕಾರಿಗೆ ಮನವಿ ಸಲ್ಲಿಸಿದರು.
    ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಮಾತನಾಡಿ, ಕಾವೇರಿ ಕಣಿವೆ ಭಾಗದಲ್ಲಿ ತೀವ್ರ ಸ್ವರೂಪದ ಬರದ ಸ್ಥಿತಿ ನಿರ್ಮಾಣವಾಗಿದ್ದು, ಕೆಆರ್‌ಎಸ್ ಜಲಾಶಯದಲ್ಲಿ ಕೇವಲ 20 ಟಿಎಂಸಿ ನೀರಿದೆ. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ 7 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಲು ಆದೇಶಿಸಿರುವುದು ಆಘಾತಕಾರಿ ಸಂಗತಿ ಎಂದರು.
    ಬೆಂಗಳೂರಿಗೆ ಪ್ರತಿ ತಿಂಗಳು ಕುಡಿಯಲು ಒಂದೂವರೆ ಟಿಎಂಸಿ ನೀರು ಬೇಕು. ಕಾವೇರಿ ಕಣಿವೆಯ ರೈತರ ಹೊಲಗದ್ದೆಗಳಿಗೆ ಹಾಗೂ ಕೈಗಾರಿಕೆಗಳಿಗೆ ಕೊಡಲು ನೀರಿಲ್ಲ. ಹೀಗಿರುವಾಗ ಏಳು ಟಿಎಂಸಿ ನೀರು ಎಲ್ಲಿಂದ ತರಲು ಸಾಧ್ಯ. ಮಂಡ್ಯ ಭಾಗದ ರೈತರು ನೀರಿಗೆ ಏನು ಮಾಡಬೇಕು? ಎಂದು ಪ್ರಶ್ನಿಸಿದರು.
    ರಾಜ್ಯ ಸರ್ಕಾರ ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಯಾವ ಕಾರಣಕ್ಕೂ ಪಾಲಿಸಬಾರದು. ನೀರು ಬಿಡುವುದಿಲ್ಲ ಎಂಬ ದೃಢ ಘೋಷಣೆ ಮಾಡಬೇಕು. ನೀರು ಬಿಡಲು ಮುಂದಾದರೆ ರಾಜ್ಯದ ಜನರು ದಂಗೆ ಏಳುವ ಸ್ಥಿತಿ ನಿರ್ಮಾಣವಾಗುತ್ತದೆ. ಈ ಬಗ್ಗೆ ರಾಜ್ಯದ ಎಲ್ಲ ಸಂಸದರೂ ದೆಹಲಿಯಲ್ಲಿ ಧರಣಿ ನಡೆಸಬೇಕು. ಸಂದರ್ಭ ಬಂದರೆ ರಾಜೀನಾಮೆ ನೀಡಲೂ ಸಿದ್ದರಾಗಬೇಕು. ನೀರು ಬಿಟ್ಟರೆ ವೇದಿಕೆ ಉಗ್ರ ಸ್ವರೂಪದ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಸಿದರು.
    ಪದಾಧಿಕಾರಿಗಳಾದ ಎಂ.ಡಿ. ರಫೀಕ್, ಈಶ್ವರ್, ಧರ್ಮರಾಜ್, ಬಸಮ್ಮ, ಶಾಂತಮ್ಮ, ಪಾಲಾಕ್ಷಮ್ಮ, ಮಾಲಮ್ಮ, ಶಶಿಕಲಾ. ಮಂಜುನಾಥ್, ಸುರೇಶ್, ರಾಕೇಶ್ ಇತರರು ಪ್ರತಿಭಟನೆಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts