More

    ತನಿಖಾ ಸಂಸ್ಥೆಗಳಂತೆ ವರ್ತಿಸದೆ ಜನರ ಕೆಲಸ ಮಾಡಿಕೊಡಿ

    ಪಾಂಡವಪುರ: ತಾಲೂಕು ಕಚೇರಿ ಅಧಿಕಾರಿಗಳು ತನಿಖಾ ಸಂಸ್ಥೆಗಳ ರೀತಿಯಲ್ಲಿ ಕೆಲಸ ಮಾಡುವುದನ್ನು ಬಿಟ್ಟು ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆಸದೆ ದಾಖಲೆಗಳ ಆಧಾರದ ಮೇಲೆ ಕೆಲಸ ಮಾಡಿಕೊಡುವಂತೆ ಜಿಲ್ಲಾಧಿಕಾರಿ ಡಾ.ಕುಮಾರ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

    ಪಟ್ಟಣದ ತಾಲೂಕು ಕಚೇರಿಗೆ ಬುಧವಾರ ಭೇಟಿ ನೀಡಿ ತಾಲೂಕು ಮಟ್ಟದ ಅಧಿಕಾರಿಗಳ ಕೆಲಸ ಕಾರ್ಯಗಳ ಪರಿಶೀಲನೆ ವೇಳೆ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಹೆಚ್ಚಾಗಿ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಬೇಸರಗೊಂಡ ಜಿಲ್ಲಾಧಿಕಾರಿಗಳು ಗ್ರಾಮಲೆಕ್ಕಿಗರು, ಕಂದಾಯ ನಿರೀಕ್ಷಕರು ಹಾಗೂ ವಿಷಯ ನಿರ್ವಾಹಕ(ಕೇಸ್ ವರ್ಕರ್) ರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

    ಕಂದಾಯ ಇಲಾಖೆ ಅಧಿಕಾರಿಗಳು ಕರ್ತವ್ಯ ನಿರ್ವಹಣೆಯಲ್ಲಿ ತೋರಿದ್ದ ನಿರ್ಲಕ್ಷ್ಯ ಹಾಗೂ ನ್ಯೂನತೆಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಲು ಅಧಿಕಾರಿಗಳು ತಡಬಡಾಯಿಸಿದ ಹಿನ್ನೆಲೆಯಲ್ಲಿ ಸಿಡಿಮಿಡಿಗೊಂಡ ಜಿಲ್ಲಾಧಿಕಾರಿ ಕುಮಾರ್, ಯಾರ‌್ರೀ ನೀವು? ಎಷ್ಟು ವರ್ಷದಿಂದ ಕೆಲಸ ಮಾಡುತ್ತಿದ್ದೀರಾ? ಈ ರೀತಿ ಕೆಲಸ ಮಾಡಲು ನಾಚಿಕೆಯಾಗಲ್ವ, ನೀವು ಸಾರ್ವಜನಿಕರ ಸ್ಥಿತಿಯಲ್ಲಿದ್ದಿದ್ದರೆ ಏನೂ ಮಾಡುತ್ತಿದ್ರಿ, ಒಂದು ಕೆಲಸಕ್ಕಾಗಿ 2-3 ವರ್ಷ ನಿಮ್ಮ ಬಳಿ ಅಲೆಯಬೇಕಾ? ಕಾರಣವಿಲ್ಲದೆ ಜನರನ್ನು ಯಾಕ್ರೀ ವಿಎ ಮತ್ತು ಆರ್‌ಐಗಳ ಬಳಿ ಅಲೆಸುತ್ತೀರಾ? ಸುಖಾಸುಮ್ಮನೆ ವರದಿ ಕೇಳಬೇಡಿ, ದಾಖಲೆ ಸರಿಯಿದ್ದರೆ ತಕ್ಷಣ ಕೆಲಸ ಮಾಡಿಕೊಡಿ ಎಂದು ಗದರಿದರು.

    ಕಂದಾಯ ಇಲಾಖೆ ಅಧಿಕಾರಿಗಳು ದಾಖಲೆ ಕ್ರಮವಾಗಿದ್ದರು ಇಲ್ಲಸಲ್ಲದ ಸಬೂಬು ನೀಡಿ ಜನರನ್ನು ಕಚೇರಿಗೆ ಅಲೆಸುತ್ತಿದ್ದಾರೆ. ಗ್ರಾಮಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರು ಕೇಂದ್ರ ಸ್ಥಾನದಲ್ಲಿ ಇರುವುದಿಲ್ಲ. ಹೀಗಾಗಿ ಅವರನ್ನು ಎಲ್ಲಿ, ಯಾವಾಗ ಭೇಟಿಯಾಗಬೇಕು ಎಂಬುದು ನಮಗೆ ತಿಳಿಯದಾಗಿದೆ. ಅಧಿಕಾರಿಗಳ ಬಳಿಗೆ ಮೂರು, ಮೂರು ದಿನಕ್ಕೊಮ್ಮೆ ಸುತ್ತಿ ಹಣವನ್ನು ಕಳೆದುಕೊಂಡಿದ್ದೇವೆ. ಅಧಿಕಾರಿಗಳು ಒಬ್ಬರ ಮೇಲೆ ಒಬ್ಬರು ಕಾರಣ ಹೇಳಿಕೊಂಡು ಕೆಲಸ ಮಾಡಿಕೊಡಲು ಸತಾಯಿಸುತ್ತಾರೆ. ಹೇಮಾವತಿ ನಾಲೆಯನ್ನು ಮುಚ್ಚಿ ಹಾಕಿದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮಕೈಗೊಂಡಿಲ್ಲ ಎಂಬಿತ್ಯಾದಿಯಾಗಿ ಸಾರ್ವಜನಿಕರು ಜಿಲ್ಲಾಧಿಕಾರಿಗೆ ದೂರುಗಳ ಸುರಿಮಳೆಗೈದರು.

    ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿ, ಕೆಲ ಪ್ರಕರಣಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದರೆ ಮತ್ತೆ ಕೆಲವು ಪ್ರಕರಣಗಳನ್ನು ಪರಿಶೀಲಿಸಿ ತಕ್ಷಣ ಪರಿಹರಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ತಾಲೂಕು ಕಚೇರಿಯಲ್ಲಿ ದಲ್ಲಾಳಿಗಳ ಅವಶ್ಯಕತೆ ಇರುವುದಿಲ್ಲ. ಆದರೂ ಅವರು ಯಾಕೆ ಬರುತ್ತಾರೆ ಎಂದು ಗೊತ್ತಿಲ್ಲ. ಸಾರ್ವಜನಿಕರು ಕೂಡ ತಮ್ಮ ಕೆಲಸ ಕಾರ್ಯಗಳಿಗೆ ದಲ್ಲಾಳಿಗಳನ್ನು ಅವಲಂಬಿಸಬಾರದು. ಕಂದಾಯ ಇಲಾಖೆ ಸಂಪೂರ್ಣ ಗಣಕೀಕೃತವಾಗಿದ್ದು ದಲ್ಲಾಳಿಗಳು ಪಾತ್ರ ಇರುವುದಿಲ್ಲ. ಈ ಬಗ್ಗೆ ಉಪವಿಭಾಗಾಧಿಕಾರಿಗಳು ಗಮನಹರಿಸುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
    ಮೇಲುಕೋಟೆ ದೇವಸ್ಥಾನಕ್ಕೆ ಸೇರಿದ ಜಾಗ ಒತ್ತುವರಿಯಾಗಿರುವ ಬಗ್ಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ. ಸರ್ಕಾರಿ ಮತ್ತು ದೇವಸ್ಥಾನದ ಜಾಗ ಸರ್ಕಾರಕ್ಕೆ ಸೇರಿದ್ದಾಗಿರುತ್ತದೆ. ಹೀಗಾಗಿ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

    ಉಪವಿಭಾಗಾಧಿಕಾರಿ ನಂದೀಶ್, ಪ್ರಭಾರ ತಹಸೀಲ್ದಾರ್ ಆರ್.ನಯೀಂ ಉನ್ನೀಸಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts