More

    ತಗ್ಗಲಿ ಅಪಘಾತಗಳ ಪ್ರಮಾಣ  – ಎಸ್ಪಿ ಉಮಾ ಪ್ರಶಾಂತ್ – ರಸ್ತೆ ಸುರಕ್ಷಾ ಸಪ್ತಾಹ ಜಾಥಾ 

    ದಾವಣಗೆರೆ: ಜಿಲ್ಲೆಯಲ್ಲಿ ರಸ್ತೆ ಅಪಘಾತಗಳ ಪ್ರಮಾಣ ತಗ್ಗಿಸಬೇಕು. ಈ ದಿಸೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಹೇಳಿದರು.
    ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆ, ದಾವಣಗೆರೆ ಜಿಲ್ಲಾ ಸ್ಕೌಟ್ಸ್-ಗೈಡ್ಸ್ ಸಂಸ್ಥೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷಾ ಸಪ್ತಾಹ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
    2022ರಲ್ಲಿ 314 ರಸ್ತೆ ಅಪಘಾತಗಳು ಆಗಿದ್ದವು. ಕಳೆದ ವರ್ಷದಲ್ಲಿ 282 ಆಗಿವೆ. ಈ ವರ್ಷದಲ್ಲಿ ಇದರ ಪ್ರಮಾಣ ಮತ್ತಷ್ಟು ತಗ್ಗಿಸಬೇಕಿದೆ. ಅತಿವೇಗ ಮತ್ತು ಅಜಾಗರೂಕ ಚಾಲನೆಯೇ ರಸ್ತೆ ಅಪಘಾತಗಳಿಗೆ ಕಾರಣವಾಗಿದೆ. ವೇಗ ಥ್ರಿಲ್ ನೀಡಿದರೂ ಅದು ನಮ್ಮನ್ನು ಕೊಲ್ಲುತ್ತದೆ. ಹಾಗಾಗಿ ವಾಹನ ಚಲಾಯಿಸುವಾಗ ಜಾಗರೂಕತೆ ಮುಖ್ಯ ಎಂದು ಹೇಳಿದರು.
    ಈ ಸಪ್ತಾಹದಲ್ಲಿ ಜಿಲ್ಲಾದ್ಯಂತ ರಸ್ತೆ ಸುರಕ್ಷತಾ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಸಾರ್ವಜನಿಕರು ಸಂಚಾರ ನಿಯಮಗಳನ್ನು ಮೀರಬಾರದು. ವಾಹನ ಚಾಲನೆ ವೇಳೆ ಮೊಬೈಲ್ ಬಸಬಾರದು. ಕಾರಿನಲ್ಲಿ ಪ್ರಯಾಣಿಸುವಾಗ ಸೀಟ್ ಬೆಲ್ಟ್, ಬೈಕ್ ಸವಾರರು ಹೆಲ್ಮೆಟ್ ಧರಿಸಬೇಕು. ಅತಿವೇಗದ ಚಾಲನೆ ಒಳ್ಳೆಯದಲ್ಲ ಎಂದು ಹೇಳಿದರು.
    ಸಂಚಾರ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಪೊಲೀಸರು ದಂಡ ವಿಧಿಸುವ ಮುನ್ನ ಸಾರ್ವಜನಿಕರಿಗೆ ಪ್ರತಿ ವರ್ಷ ಸಂಚಾರ ನಿಯಮಗಳ ಪಾಲನೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಅತಿಯಾದ ಅಪಘಾತಗಳಾಗುವ ಸ್ಥಳಗಳನ್ನು ಅಪಘಾತ ವಲಯಗಳನ್ನಾಗಿ ಗುರುತಿಸಲಾಗುತ್ತಿದೆ. ಅಂತಹ ಸ್ಥಳಗಳಲ್ಲಿ ಸಂಚರಿಸುವ ವಾಹನ ಚಾಲಕರಿಗೆ ಮುಂಜಾಗ್ರತಾ ಕ್ರಮ ನಿಧಾನವಾಗಿ ಹಾಗೂ ಜಾಗರೂಕತೆಯಿಂದ ವಾಹನ ಚಲಾಯಿಸಲು ತಿಳಿಸಲಾಗುವುದು ಎಂದು ತಿಳಿಸಿದರು.
    ಶಾಲಾ ಮಕ್ಕಳು ರಸ್ತೆಯ ಎಡ ಭಾಗದಲ್ಲಿ ಸಂಚರಿಸಬೇಕು, ರಸ್ತೆಗಳನ್ನು ದಾಟುವಾಗ ಅತಿ ಜಾಗರೂಕತೆ ವಹಿಸಬೇಕು ಎಂದ ಅವರು, ಶಾಲಾ ವಾಹನಗಳ ಚಾಲಕರನ್ನು ನೇಮಿಸುವ ಮುನ್ನ ಅವರ ಪೂರ್ವಾಪರವನ್ನು ಪರಿಶೀಲಿಸಬೇಕಿದ್ದು ಈ ಬಗ್ಗೆ ಆದೇಶ ಬಂದಿದೆ. ಶೀಘ್ರವೇ ಈ ವಿಚಾರವಾಗಿ ಶಾಲಾ ಕಾಲೇಜು ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಗುವುದು ಎಂದರು.
    ಗುಂಡಿ ಮಹದೇವಪ್ಪ ವೃತ್ತದಿಂದ ಆರಂಭವಾದ ಜಾಥಾ, ಅಂಬೇಡ್ಕರ್ ವೃತ್ತ ಮಾರ್ಗವಾಗಿ ಹಾದು ಬಡಾವಣೆ ಠಾಣೆ ಆವರಣದಲ್ಲಿ ಅಂತ್ಯಗೊಂಡಿತು. ಬಾಪೂಜಿ, ಡಿಆರ್‌ಆರ್, ಸಿದ್ಧಗಂಗಾ, ಮಾಗನೂರು ಬಸಪ್ಪ, ಎವಿಕೆ, ಪಾಟೀಲ್ ವೀರಪ್ಪ, ಸೇಂಟ್ ಪಾಲ್ಸ್ ಶಾಲೆಯ ಸ್ಕೌಟ್ಸ್-ಗೈಡ್ಸ್ ಮಕ್ಕಳು ಪಾಲ್ಗೊಂಡು ಸಂಚಾರ ಸುರಕ್ಷತಾ ನಿಯಮಗಳ ಪಾಲನೆ ಕುರಿತು ಘೋಷಣೆಗಳನ್ನು ಕೂಗಿದರು.
    ಜಾಥಾದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ ಸಂತೋಷ್, ದಾವಣಗೆರೆ ಸ್ಮಾರ್ಟ್‌ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ವೀರೇಶ್‌ಕುಮಾರ್, ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್. ಬಸವರಾಜ, ಆರ್‌ಟಿಒ ಪ್ರಮುತೇಶ್, ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಶೆಟ್ಟಿ, ಪೊಲೀಸ್ ಅಧಿಕಾರಿಗಳಾದ ಗುರುಬಸವರಾಜ, ಮಲ್ಲಮ್ಮ ಚೌಬೆ, ಶೈಲಜಾ, ಜಿಲ್ಲಾ ಸ್ಕೌಟ್ಸ್- ಗೈಡ್ಸ್‌ನ ಜಿಲ್ಲಾ ಆಯುಕ್ತ ಷಡಾಕ್ಷರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts