More

    ತಕರಾರು ಬರೀ ಹಾಫ್ ಸೆಂಚುರಿ!

    ಸಂತೋಷ ವೈದ್ಯ ಹುಬ್ಬಳ್ಳಿ

    ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್​ವಾರು ಕ್ಷೇತ್ರ ಮರು ವಿಂಗಡಣೆಗೆ ವ್ಯಾಪಕ ಅಸಮ್ಮತಿ ಇರುವುದು ಸಲ್ಲಿಕೆಯಾಗಿರುವ ಆಕ್ಷೇಪಣೆಗಳಿಂದ ಮನದಟ್ಟಾಗಿದೆ. ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಸೇರಿ 50 ತಕರಾರು ಅರ್ಜಿಗಳು ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಿವೆ.

    ಯಾವ ಕಾರಣಕ್ಕೆ ವಾರ್ಡ್​ವಾರು ಕ್ಷೇತ್ರ ವಿಂಗಡಣೆ ಪ್ರಕ್ರಿಯೆಯು ನ್ಯಾಯಾಲಯದ ಮೆಟ್ಟಿಲೇರಿತ್ತೋ ಅದು ಮರು ವಿಂಗಡಣೆಯ ಬಳಿಕವೂ ಬಗೆಹರಿದಿಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಆಕ್ಷೇಪಣೆಗಳನ್ನು ಸಲ್ಲಿಸಲು ಮಾ.10 ಕೊನೆಯ ದಿನವಾಗಿತ್ತು. ಪಾಲಿಕೆ ಮಾಜಿ ಸದಸ್ಯರು, ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಿದ್ದಾರೆ. ಕೆಲವು ಸಂಘ-ಸಂಸ್ಥೆಗಳ ಮೂಲಕವು ಆಕ್ಷೇಪಣೆ ಸಲ್ಲಿಕೆಯಾಗಿವೆ. ಶಿರಡಿನಗರ ರಹವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಗಾಯಿತ್ರಿ ಮಹಿಳಾ ಮಂಡಳ, ಬೆಂಗೇರಿಯ ಗ್ರಾಮದೇವತೆ ದೇವಸ್ಥಾನ ಟ್ರಸ್ಟ್ ಕಮಿಟಿ, ಬಾಬಾಸಾಹೇಬ ಅಂಬೇಡ್ಕರ್ ದಲಿತ ಯುವಕ ಮಂಡಳಿ ಸೇರಿ ಹಲವು ಸಂಘಟನೆಗಳು ಆಕ್ಷೇಪಣೆ ಸಲ್ಲಿಸಿವೆ.

    ಪಾಲಿಕೆಯ ವಾರ್ಡ್​ವಾರು ಕ್ಷೇತ್ರ ಮರು ವಿಂಗಡಣೆಯ ಕರಡು ಅಧಿಸೂಚನೆಯನ್ನು ಫೆ. 24ರಂದು ರಾಜ್ಯ ಸರ್ಕಾರದ ಗೆಜೆಟ್​ನಲ್ಲಿ (ಕರ್ನಾಟಕ ರಾಜ್ಯಪತ್ರ) ಪ್ರಕಟಿಸಲಾಗಿತ್ತು. ಬಳಿಕ 15ದಿನಗಳ ಕಾಲಾವಕಾಶ ನೀಡಿ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು.

    ಸಲ್ಲಿಕೆಯಾಗಿರುವ ಆಕ್ಷೇಪಣೆಗಳನ್ನು ಗಮನಿಸಿದರೆ ವಾರ್ಡ್ ವಾರು ಕ್ಷೇತ್ರ ಮರು ವಿಂಗಡಣೆ ಪ್ರಕ್ರಿಯೆ ನಡೆಸಿದ ಪಾಲಿಕೆ ಅಧಿಕಾರಿಗಳ ಸೂಕ್ತ ಕಾರ್ಯನಿರ್ವಹಣೆ ಬಗ್ಗೆ ಸಂಶಯ ಮೂಡುತ್ತದೆ. ಹಿಂದೆ ಯಾವ ತಕರಾರುಗಳು ಇದ್ದವೋ ಅವುಗಳಿಗೂ ಸ್ಪಂದಿಸಿಲ್ಲವೆಂಬ ಅಸಮಧಾನ ವ್ಯಕ್ತವಾಗಿದೆ. ಪಾಲಿಕೆ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಜನಸಂಖ್ಯೆಯನ್ನು ತಲೆಯಲ್ಲಿ ಇಟ್ಟುಕೊಂಡು ಮರು ವಿಂಗಡಣೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. 2017ರಲ್ಲಿ ವಾರ್ಡ್ ವಿಂಗಡಣೆ ಪ್ರಕ್ರಿಯೆ ಜರುಗಿಸಿದಾಗ ಪಾಲಿಕೆಯ ವಾರ್ಡ್ ಸಂಖ್ಯೆಯನ್ನು 67ರಿಂದ 82ಕ್ಕೆ ಏರಿಕೆ ಮಾಡಲಾಗಿತ್ತು. ಈ ಬಾರಿ ಮರು ವಿಂಗಡಣೆ ಪ್ರಕ್ರಿಯೆ ವೇಳೆ ವಾರ್ಡ್​ಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 2017ರಲ್ಲಿ ವಾರ್ಡ್ ವಿಂಗಡಣೆ ಮಾಡುವಾಗ ಅಧಿಕಾರಿಗಳು ಸಾಕಷ್ಟು ತಪ್ಪುಗಳನ್ನು ಮಾಡಿದ್ದರಿಂದ ಹಲವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಕರ್ನಾಟಕ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠ 2020ರ ಡಿಸೆಂಬರ್ 17ರಂದು ನೀಡಿದ ತೀರ್ಪಿನನ್ವಯ ಹು-ಧಾ ಮಹಾನಗರ ಪಾಲಿಕೆಯ ವಾರ್ಡ್​ವಾರು ಕ್ಷೇತ್ರ ಮರು ವಿಂಗಡಣೆ ಪ್ರಕ್ರಿಯೆ ಜರುಗಿಸಲಾಗಿದೆ. ಫೆ. 1ರಂದು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಅವರು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು.

    ‘6 ವಾರಗಳಲ್ಲಿ ವಾರ್ಡ್​ಗಳ ಮರು ವಿಂಗಡಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಅದಾದ 2 ತಿಂಗಳಲ್ಲಿ ವಾರ್ಡ್ ಮೀಸಲಾತಿ ಪ್ರಕಟಿಸಬೇಕು. ನಂತರದ 2 ತಿಂಗಳಲ್ಲಿ ಚುನಾವಣೆ ಆಯೋಗ ಮತದಾರರ ಪಟ್ಟಿ ಸಿದ್ಧಪಡಿಸಬೇಕು. ಮತದಾರರ ಪಟ್ಟಿ ಪ್ರಕಟಿಸಿದ 45 ದಿನಗಳ ಬಳಿಕ ಚುನಾವಣೆ ವೇಳಾಪಟ್ಟಿ ಪ್ರಕಟಿಸಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ಹೈಕೋರ್ಟ್ ವಿಭಾಗೀಯ ಪೀಠ ತೀರ್ಪಿನಲ್ಲಿ ಹೇಳಿತ್ತು. 2019ರ ಮಾರ್ಚ್ 6ರಂದು ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಕೊನೆಗೊಂಡಿದೆ. ಅಂದರೆ, ಕಳೆದ 2 ವರ್ಷಗಳಿಂದ ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತ ನಡೆದಿದೆ. ಹಿಂದೆ ವಾರ್ಡ್ ಸಂಖ್ಯೆ 43 ಇತ್ತು. ಹು-ಧಾ ಪೂರ್ವ ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ಸೇರಿತ್ತು. ಇದೀಗ ವಾರ್ಡ್ ಸಂಖ್ಯೆ 60 ಆಗಿದೆ. ಹು-ಧಾ ಸೆಂಟ್ರಲ್ ವಿಧಾನಸಭೆ ಕ್ಷೇತ್ರಕ್ಕೆ ಸೇರಿಸಿದ್ದಾರೆ. ಸುಮಾರು 1500 ಮತದಾರರಿದ್ದ ಮಸ್ತಾನ ಸೋಫಾ ಪ್ರದೇಶವನ್ನು ಹೊಸ ವಾರ್ಡ್ ಸಂಖ್ಯೆ 72ಕ್ಕೆ ಸೇರಿಸಿದ್ದಾರೆ. ಸೆಂಟ್ರಲ್ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಗುಡಿ ಓಣಿಯನ್ನು ನಮಗೆ ಸೇರಿಸಿದ್ದಾರೆ. | ಬಶೀರ್ ಗುಡಮಾಲ್ ಪಾಲಿಕೆ ಮಾಜಿ ಸದಸ್ಯ

    ನವಲೂರ ಗ್ರಾಮದ 3500 ಮತದಾರರನ್ನು 23ನೇ ವಾರ್ಡ್ ಗೆ ಹಾಗೂ ರಾಯಾಪುರದ 2500 ಮತದಾರರನ್ನು 24ನೇ ವಾರ್ಡ್​ಗೆ ಸೇರ್ಪಡೆ ಮಾಡಲಾಗಿದೆ. ರಾಯಾಪುರದ ವಲಯ ಕಚೇರಿ ನವನಗರದಲ್ಲಿರುತ್ತದೆ. ನವಲೂರ ವಲಯ ಕಚೇರಿ ಕಟ್ಟಡ ಧಾರವಾಡ ಕಲಾಭವನದಲ್ಲಿದೆ. ಈ ರೀತಿಯಿಂದ ಎರಡೂ ವಾರ್ಡಿನ ಬಡವರಿಗೆ, ಕೂಲಿ ಕಾರ್ವಿುಕರಿಗೆ ಬಹಳ ಅನನುಕೂಲವಾಗುತ್ತದೆ. ನವಲೂರ ಗ್ರಾಮದಲ್ಲಿ 10500 ಮತದಾರರಿದ್ದು ಒಂದೇ ವಾರ್ಡ್ ರಚಿಸಬೇಕು. ಮತದಾರರ ಸಂಖ್ಯೆ ಕಡಿಮೆಯೆನಿಸಿದರೆ ರಾಯಾಪುರ ಭಾಗವನ್ನು ಸೇರಿಸಬಹುದು. | ಮಹಾವೀರ ಶಿವಣ್ಣವರ ಪಾಲಿಕೆ ಮಾಜಿ ಸದಸ್ಯ

    ಹು-ಧಾ ಮಹಾನಗರ ಪಾಲಿಕೆಯ ವಾರ್ಡ್​ವಾರು ಕ್ಷೇತ್ರ ಮರು ವಿಂಗಡಣೆಗೆ ಸಂಬಂಧಿಸಿದಂತೆ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಸೇರಿ 50 ಆಕ್ಷೇಪಣೆಗಳು ಸಲ್ಲಿಕೆಯಾಗಿದೆ. ಎಲ್ಲ ಆಕ್ಷೇಪಣೆಗಳನ್ನು ಪಟ್ಟಿ ಮಾಡಿ ಸರ್ಕಾರಕ್ಕೆ ಕಳುಹಿಸಲಾಗುವುದು. | ನಿತೇಶ ಪಾಟೀಲ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts