More

    ತಂಬಾಕು ನಿಯಂತ್ರಣ ಕ್ರಮ ವರದಿ ಕಡ್ಡಾಯ – ಅಧಿಕಾರಿಗಳಿಗೆ ಎಡಿಸಿ  ಪಿ.ಎನ್.ಲೋಕೇಶ್ ಸೂಚನೆ

    ದಾವಣಗೆರೆ: ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಪ್ರತಿ ತಿಂಗಳು ತಂಬಾಕು ನಿಯಂತ್ರಣಕ್ಕೆ ಕೈಗೊಂಡ ಕಾರ್ಯಕ್ರಮ ಕುರಿತ ಛಾಯಾಚಿತ್ರ ಮತ್ತು ವರದಿ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
    ಆರೋಗ್ಯ ರಕ್ಷಣೆಗೆ ಹೆಚ್ಚು ಆದ್ಯತೆ ನೀಡಲು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕ್ರಮ ಕೈಗೊಳ್ಳಬೇಕು. ಶೈಕ್ಷಣಿಕ ಸಂಸ್ಥೆ ವತಿಯಿಂದ ಕನಿಷ್ಠ ಒಂದು ಬಾರಿಯಾದರೂ ತಂಬಾಕು ನಿಯಂತ್ರಣ ಬಗ್ಗೆ ಆರು ತಿಂಗಳಿಗೊಮ್ಮೆ ಚಟುವಟಿಕೆ ನಡೆಸಿರುವ ಕುರಿತು ಮಾಹಿತಿ ನೀಡಬೇಕು. ಹೋಟೆಲ್ ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ಧೂಮಪಾನಕ್ಕೆ ಒಂದು ಪ್ರತ್ಯೇಕ ಕೊಠಡಿ ಇರಿಸಬೇಕು ಎಂದು ಸೂಚನೆ ನೀಡಿದರು.
    ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿಯೂ ಪಿ.ಡಿ.ಒಗಳು ತಂಬಾಕು ನಿಯಂತ್ರಣ ಕುರಿತು ಪ್ರಚಾರ ಪಡಿಸಬೇಕು. ತಾಲೂಕು ಮಟ್ಟದಲ್ಲಿ ತಹಸೀಲ್ದಾರ್, ಟಿಎಚ್‌ಒ, ಬಿಇಒಗಳು ಶಾಲಾ-ಕಾಲೇಜು ಆವರಣದಿಂದ 100 ಮೀ.ಒಳಗೆ ತಂಬಾಕು ಉತ್ಪನ್ನ ಮಾರುವ ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸಬೇಕು ಎಂದು ತಿಳಿಸಿದರು.
    ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಎಂ .ಕರೆಣ್ಣವರ ಮಾತನಾಡಿ ಪರಿಣಾಮಕಾರಿ ಕೋಟ್ಪಾ ಅನುಷ್ಠಾನಗೊಳಿಸಲು ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ಶೈಕ್ಷಣಿಕ ಸಂಸ್ಥೆಗಳಲ್ಲಿ ತಂಬಾಕು ನಿಯಂತ್ರಣ ಸಮಿತಿಗಳನ್ನು ರಚಿಸಿ ಅರಿವು ಕಾರ್ಯಕ್ರಮ ನಡೆಸಬೇಕು. ಹರಿಹರೆಯದ ವಯಸ್ಸಿನವರು ತಂಬಾಕು ವ್ಯಸನಕ್ಕೆ ಬಲಿಯಾಗದಂತೆ ಜಾಗೃತಿ ಮೂಡಿಸಬೇಕಿದೆ ಎಂದರು.
    ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ್ ಮಾತನಾಡಿ ಜಿಲ್ಲೆಯಲ್ಲಿ ಇದುವರೆಗೂ ಜನವರಿಯಿಂದ ಜೂನ್‌ವರೆಗೆ ಒಟ್ಟಾರೆ 363 ಪ್ರಕರಣಗಳನ್ನು ದಾಖಲಿಸಿ, 53030 ರೂ. ದಂಡ ವಿಧಿಸಲಾಗಿದೆ ಎಂದು ಮಾಹಿತಿ ನೀಡಿದರು.
    ಬಹುಮಾನ ವಿತರಣೆ : ವಿಶ್ವ ತಂಬಾಕು ದಿನದ ಪ್ರಯುಕ್ತ ಅರಿವು ಮೂಡಿಸುವ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. 2023-24 ನೇ ಸಾಲಿನಲ್ಲಿ ತಂಬಾಕು ಮುಕ್ತ ಶಿಕ್ಷಣ ಸಂಸ್ಥೆಯ ಮಾರ್ಗಸೂಚಿ ಅಡಿಯಲ್ಲಿ ನಿಗದಿಪಡಿಸಿದ ಮಾನದಂಡಗಳನ್ನು ಅನುಸರಿಸಿದ ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಕಪ್ಪು ಕೋಟ್‌ಅನ್ನು ಅನಾವರಣಗೊಳಿಸಲಾಯಿತು.
    ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗರಾಜ್, ಡಿವೈಎಸ್ಪಿ ಬಸವರಾಜ್, ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್, ದೂಡಾ ಆಯುಕ್ತ ಬಸನಗೌಡ ಕೋಟೂರ, ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ವಿಭಾಗೀಯ ಸಂಯೋಜಕ ಮಹಾಂತೇಶ್ ಉಳ್ಳಾಗಡ್ಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts