More

    ಡ್ರೋನ್ ಬಳಸಿ ಅರಣ್ಯದಲ್ಲಿ ಬೀಜ ಬಿತ್ತನೆ

    ಕಾರವಾರ: ಮಣ್ಣು ಸವಕಳಿ ಹಾಗೂ ಭೂ ಕುಸಿತ ತಡೆಯುವ ಸಲುವಾಗಿ ಅರಣ್ಯ ಇಲಾಖೆ ಜಿಲ್ಲೆಯಲ್ಲಿ ಮೊದಲ ಬಾರಿಗೆ ದ್ರೋನ್ ಮೂಲಕ ಅರಣ್ಯ ವೃಕ್ಷಗಳ ಬೀಜ ಬಿತ್ತನೆ ಕಾರ್ಯವನ್ನು ಕೈಗೊಂಡಿದೆ.
    ಜಿಲ್ಲೆಯಲ್ಲಿ ಕಳೆದ ಕೆಲ ವರ್ಷಗಳಿಂದ ಅಂದಾಜು 120 ಹೆಕ್ಟೇರ್ ಪ್ರದೇಶದಲ್ಲಿ ಭೂ ಕುಸಿತ ಉಂಟಾಗಿದ್ದು, ಈ ಮಳೆಗಾಲದಲ್ಲಿ ಇದುವರೆಗೆ 100 ಹೆಕ್ಟೇರ್ ಪ್ರದೇಶದಲ್ಲಿ ದ್ರೋನ್ ಮೂಲಕ ಬೀಜ ಬಿತ್ತನೆ ಮಾಡಲಾಗಿದೆ ಎಂದು ಅರಣ್ಯ ಇಲಾಖೆ ಪ್ರಕಟಣೆ ತಿಳಿಸಿದೆ.
    ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಅರಣ್ಯ ಹಾಗೂ ಜೀವವೈವಿಧ್ಯ ವ್ಯವಸ್ಥೆಯ ಮೇಲೆ ಪ್ರಕೃತಿ ಹಾಗೂ ಮಾನವ ನಿರ್ವಿುತ ಒತ್ತಡಗಳಿಂದ ಉಂಟಾದ ದುಷ್ಪರಿಣಾಮಗಳನ್ನು ಸರಿದೂಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಹಸಿರು ಆಯವ್ಯಯ ಘೊಷಿಸಿದೆ.
    ಅದರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂ ಕುಸಿತ ಉಂಟಾದ ಹಾಗೂ ಉಂಟಾಗುವ ಸಂಭವವಿರುವ ಪ್ರದೇಶಗಳ ನಿರ್ವಹಣೆ ಮಾಡುವುದೂ ಸೇರಿದೆ. ಅದರಲ್ಲಿ ಮಳೆಗಾಲದಲ್ಲಿ ಬೀಜದುಂಡೆಗಳು ತಲುಪದ ಪ್ರದೇಶಗಳಲ್ಲಿ ದ್ರೋನ್ ಮೂಲಕ ಬಿತ್ತನೆ ಮಾಡುವುದು ಸೇರಿದೆ.
    ಈ ಬಾರಿ ಇದುವರೆಗೆ ಕೆನರಾ ಅರಣ್ಯ ವೃತ್ತದ ಹೊನ್ನಾವರ ವಿಭಾಗದಲ್ಲಿ 24, ಶಿರಸಿಯಲ್ಲಿ 25, ಯಲ್ಲಾಪುರದಲ್ಲಿ 30, ಕಾರವಾರದಲ್ಲಿ 13, ಹಳಿಯಾಳದಲ್ಲಿ 7 ಹಾಗೂ ದಾಂಡೇಲಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ 21 ಹೆಕ್ಟೇರ್ ಸೇರಿ ಒಟ್ಟು 120 ಹೆಕ್ಟೇರ್ ಭೂ ಕುಸಿತವಾಗಿದ್ದು, ಇದುವರೆಗೆ 100 ಹೆಕ್ಟೇರ್ ಪ್ರದೇಶದಲ್ಲಿ ಬೀಜ ಬಿತ್ತನೆ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ.
    ಇಳಿಜಾರು ಪ್ರದೇಶ ಮತ್ತು ತಪ್ಪಲಿನಲ್ಲಿ ಗಿಡಗಳನ್ನು ನೆಟ್ಟು ನೀರಿನ ಹರಿವಿನ ವೇಗವನ್ನು ಕಡಿಮೆಗೊಳಿಸುವುದು. ಭೂ ಕುಸಿತವಾದ ಪ್ರದೇಶದಲ್ಲಿ ಹುಲ್ಲು ಹೊದಿಕೆ ಹಾಗೂ ತೆಂಗಿನ ನಾರಿನ ಜಾಲರಿಯನ್ನು ಬಳಸಿ ಇಳಿಜಾರನ್ನು ಸ್ಥಿರೀಕರಿಸುವುದು. ನಿಗದಿತ ಅಂತರದಲ್ಲಿ ಗೇಬಿಯನ್ ಗೋಡೆಯನ್ನು ತಂತಿ ಜಾಲರಿ ನಿರ್ವಿುಸುವುದೂ ಈ ಯೋಜನೆಯಲ್ಲಿ ಸೇರಿವೆ ಎಂದು ಕಾರವಾರ ಡಿಸಿಎಫ್ ಡಾ. ಪ್ರಶಾಂತಕುಮಾರ ಕೆ.ಸಿ. ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts