More

    ಡೈಮಂಡ್ ಪ್ರಿನ್ಸಸ್ ಹಡಗಿನಲ್ಲಿ ಸಿಲುಕಿಕೊಂಡಿದ್ದ ಅಭಿಷೇಕ ಮಗರ್​ ಮರಳಿ ಮನೆಗೆ

    ವಿಜಯವಾಣಿ ಸುದ್ದಿಜಾಲ ಕಾರವಾರ: ಕರೊನಾ ವೈರಸ್ ಇರುವವರೇ ಹೆಚ್ಚಿದ್ದ ಡೈಮಂಡ್ ಪ್ರಿನ್ಸಸ್ ಎಂಬ ಐಶಾರಾಮಿ ಹಡಗಿನಲ್ಲಿ 21 ದಿನ ಕಳೆದ ಕಾರವಾರದ ಅಭಿಷೇಕ ಮಗರ್ ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ. ಗೋವಾ ವಾಸ್ಕೋ ವಿಮಾನ ನಿಲ್ದಾಣದ ಮೂಲಕ ಶುಕ್ರವಾರ ರಾತ್ರಿ ಕಾರವಾರ ಪದ್ಮನಾಭನಗರದ ಕೆನರಾ ಬ್ಯಾಂಕ್ ಕಾಲನಿಯಲ್ಲಿರುವ ತಮ್ಮ ಮನೆಗೆ ಅಭಿಷೇಕ ತಲುಪಿದರು. ತಂದೆ ಬಾಲಕೃಷ್ಣ ಮಗರ್ ಹಾಗೂ ತಾಯಿ ರೂಪಾಲಿ ಮತ್ತು ಸ್ನೇಹಿತರು ಅಭಿಷೇಕ್​ನನ್ನು ಸ್ವಾಗತಿಸಿ, ಸಂತಸಪಟ್ಟರು.

    ಚೀನಾದಿಂದ ಜಪಾನ್​ನ ಟೋಕಿಯೋಗೆ ಹೊರಟ ಡೈಮಂಡ್ ಪ್ರಿನ್ಸಸ್ ಎಂಬ ಹಡಗನ್ನು ಜಪಾನ್ ಸರ್ಕಾರ ಕರೊನಾ ಭೀತಿಯ ಹಿನ್ನೆಲೆಯಲ್ಲಿ ಗುರಿ ತಲುಪುವ ಮುಂಚೆಯೇ ಫೆ. 5 ರಂದು ತಡೆ ಹಿಡಿದಿತ್ತು. ಅದರಲ್ಲಿದ್ದ ಜನರು ಕೆಳಗಿಳಿಯದಂತೆ ಸೂಚಿಸಿತ್ತು. ಹಡಗಿನಲ್ಲಿದ್ದವರಿಗೆ ಅತಿ ವೇಗವಾಗಿ ಸೋಂಕು ಹರಡಲಾರಂಭಿಸಿತ್ತು. ಫೆ. 26 ರಂದು ಭಾರತದ ವಿಮಾನ ತೆರಳಿ ಅಭಿಷೇಕ್ ಸೇರಿ ಎಲ್ಲ ಭಾರತೀಯರನ್ನೂ ವಾಪಸ್ ಕರೆ ತಂದಿತು. ಫೆ. 27 ರಿಂದ 14 ದಿನ ಹರಿಯಾಣದ ಮಿಲಿಟರಿ ಆಸ್ಪತ್ರೆಯಲ್ಲಿ ಅಭಿಷೇಕ ಸೇರಿ ಎಲ್ಲರನ್ನೂ ಪರಿವೀಕ್ಷಣೆಯಲ್ಲಿಡಲಾಗಿತ್ತು. ನಂತರ ‘ಅವರು ಸಂಪೂರ್ಣ ಆರೋಗ್ಯವಾಗಿದ್ದಾರೆ. ಯಾವುದೇ ಸೋಂಕು ಇಲ್ಲ ಎಂಬುದನ್ನು ಖಚಿತ ಮಾಡಿಕೊಂಡು, ಪ್ರಮಾಣಪತ್ರ ನೀಡಿ ಅವರನ್ನು ಕಳಿಸಲಾಗಿದೆ.

    ಒಮ್ಮೆ ಆತಂಕವಾಗಿತ್ತು: ತಮ್ಮ ಅನುಭವವನ್ನು ‘ವಿಜಯವಾಣಿ’ಯೊಂದಿಗೆ ಹಂಚಿಕೊಂಡ ಅಭಿಷೇಕ್, ಹಡಗನ್ನು ತಡೆ ಹಿಡಿದು ಸಿಬ್ಬಂದಿಯನ್ನು ಇಳಿಯಲು ಬಿಡದಿದ್ದರಿಂದ ಆತಂಕಕ್ಕೆ ಕಾರಣವಾಗಿತ್ತು. ಮೊದಲ ದಿನ ತಪಾಸಣೆ ಮಾಡಿದಾಗ 10 ಇದ್ದ ಸೋಂಕಿತರ ಸಂಖ್ಯೆ ನಾಲ್ಕೇ ದಿನದಲ್ಲಿ 60 ಕ್ಕೆ ಏರಿಕೆಯಾಗಿತ್ತು. ದಿನದಿಂದ ದಿನಕ್ಕೆ ಏರುತ್ತ ಹೋಯಿತು. ನಮ್ಮನ್ನು ರಕ್ಷಣೆ ಮಾಡುವಂತೆ ಭಾರತ ರಾಯಭಾರ ಕಚೇರಿಯಿಂದ ಇ ಮೇಲ್ ಬಂದಿತ್ತು. ವಾರ ಕಳೆದರೂ ಹಡಗಿನಿಂದ ರಕ್ಷಿಸುವ ವ್ಯವಸ್ಥೆ ಆಗದಾಗ ಆತಂಕ, ಬೇಸರವಾಗಿತ್ತು. ನಂತರ ಭಾರತ ಸರ್ಕಾರ ನಮ್ಮನ್ನು ಸುರಕ್ಷಿತವಾಗಿ ಕರೆತಂದಿರುವುದಕ್ಕೆ ಸಂತಸವಾಗಿದೆ. ಭಾರತ ಸರ್ಕಾರಕ್ಕೆ ಅಭಿನಂದನೆಗಳು ಎಂದಿದ್ದಾರೆ.

    ಎಚ್ಚರ ವಹಿಸಬೇಕು: ಕರೊನಾ ಅಪಾಯಕಾರಿ ನಿಜ. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಿಗೆ ಬರುತ್ತದೆ. ಸರಿಯಾದ ಚಿಕಿತ್ಸೆ ಸಿಕ್ಕರೆ ಗುಣವಾಗುತ್ತದ ೆ. ಈ ಕುರಿತು ಎಚ್ಚರ ವಹಿಸಬೇಕು ಎಂಬುದು ಅಭಿಷೇಕ್ ಅನುಭವದ ಮಾತು. ಒಟ್ಟು 136 ಭಾರತೀಯ ಹಡಗಿನಲ್ಲಿದ್ದರು. ಅದರಲ್ಲಿ ಐದಾರು ಜನರಿಗೆ ಸೋಂಕು ತಗುಲಿತ್ತು ಅವರೆಲ್ಲರೂ ಗುಣಮುಖರಾಗಿ ನಮಗಿಂತ ಮುಂಚೆಯೇ ಭಾರತಕ್ಕೆ ಮರಳಿದ್ದಾರೆ ಎನ್ನುತ್ತಾರೆ ಅವರು.

    ಜಿಲ್ಲೆಯ ಇನ್ನಿಬ್ಬರು: ಅಭಿಷೇಕ್ ಇದ್ದ ಡೈಮಂಡ್ ಪ್ರಿನ್ಸಸ್ ಹಡಗಿನಲ್ಲಿ ಶಿರಸಿಯ ಜಾಸ್ವಿನ್ ಹಾಗೂ ಕಾರವಾರದ ಹಳಗಾದ ನಿಹಾಲ್ ಎಂಬ ಇಬ್ಬರು ಇದ್ದು, ಸುರಕ್ಷಿತವಾಗಿ ವಾಪಸಾಗಿದ್ದಾರೆ ಎಂಬ ಅಂಶ ತಡವಾಗಿ ಬೆಳಕಿಗೆ ಬಂದಿದೆ. ಹಡಗಿನಲ್ಲಿದ್ದ ಜನರು ಕೆಳಗೆ ಇಳಿಯದಂತೆ ಜಪಾನ್ ಸರ್ಕಾರ ತಡೆದ ನಂತರ ಅಭಿಷೇಕ್ ತಂದೆ ಬಾಲಕೃಷ್ಣ ಮಗರ್ ತಮ್ಮ ಪುತ್ರನನ್ನು ರಕ್ಷಿಸುವಂತೆ ಜಿಲ್ಲಾಧಿಕಾರಿ ಮೂಲಕ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದರು. ಆ ಮೂಲಕ ಅಭಿಷೇಕ್ ಸಂಕಷ್ಟದಲ್ಲಿರುವುದು ಪತ್ತೆಯಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts