More

    ಡಿ.ಪೌಲ್ ಅಕಾಡೆಮಿಕ್ ಆಂಗ್ಲ ಮಾಧ್ಯಮ ಶಾಲೆ ಪ್ರವೇಶಕ್ಕೆ ನಿರ್ಬಂಧ

    ರೋಣ: ಪಟ್ಟಣದ ನರಗುಂದ ರಸ್ತೆಯಲ್ಲಿರುವ ಡಿ.ಪೌಲ್ ಅಕಾಡೆಮಿಕ್ ಆಂಗ್ಲ ಮಾಧ್ಯಮ ಶಾಲೆಯನ್ನು ಸರ್ಕಾರದ ನಿಯಮ ಉಲ್ಲಂಘಿಸಿ ಸ್ಥಳಾಂತರಿಸಲಾಗಿದೆ. ಹೀಗಾಗಿ, ಡಿಡಿಪಿಐ ಅವರ ಆದೇಶದ ಮೇರೆಗೆ ಈ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ 1ರಿಂದ 5ನೇ ತರಗತಿಗೆ ಯಾರೂ ಪ್ರವೇಶ ಪಡೆಯಬಾರದು ಎಂದು ಬಿಇಒ ಎನ್. ನಂಜುಂಡಯ್ಯ ಬುಧವಾರ ತಿಳಿಸಿದ್ದಾರೆ.

    ಶಿಕ್ಷಣ ಸಂಸ್ಥೆಯೊಂದು ಪಟ್ಟಣ ಪ್ರದೇಶದಲ್ಲಿ ಶಾಲೆ ನಡೆಸಲು ಅನುಮತಿ ಪಡೆದಿದ್ದರೆ, ಯಾವುದೇ ಕಾರಣಕ್ಕೂ ಗ್ರಾಮೀಣ ಪ್ರದೇಶಕ್ಕೆ ಸ್ಥಳಾಂತಗೊಳ್ಳಬಾರದು. ಒಂದು ವೇಳೆ ಸ್ಥಳಾಂತರದ ಅಗತ್ಯವಿದ್ದರೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅನುಮತಿ ಪಡೆಯಬೇಕು ಎಂಬ ನಿಯಮವಿದೆ. ಆದರೆ, ಡಿ.ಪೌಲ್ ಆಂಗ್ಲ ಮಾಧ್ಯಮ ಶಾಲೆಯು ಈ ನಿಯಮವನ್ನು ಪಾಲಿಸದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಇಒ ತಿಳಿಸಿದ್ದಾರೆ. ಡಿ. ಪೌಲ್ ಅಕಾಡೆಮಿಕ್ ಆಂಗ್ಲ ಮಾಧ್ಯಮ ಶಾಲೆಯು 2010ರಲ್ಲಿ ರೋಣ ಪಟ್ಟಣದ ಬಾಡಿಗೆ ಕಟ್ಟಡವೊಂದರಲ್ಲಿ ಶುರುವಾಗಿತ್ತು. 2015ರಲ್ಲಿ ಪಟ್ಟಣದ ನರಗುಂದ ರಸ್ತೆಯಲ್ಲಿರುವ ರಿ.ಸ.ನಂ 23/3 ಬಾಚಲಾಪೂರ ಗ್ರಾಮದ ವ್ಯಾಪ್ತಿಗೆ ಒಳಪಡುವ ಜಮೀನಿನಲ್ಲಿ ನಿರ್ವಿುಸಲಾಗಿರುವ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಈ ಶಾಲೆಯನ್ನು ಅನಧಿಕೃತವಾಗಿ ನಡೆಸಲಾಗುತ್ತಿದೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಅದರ ಸತ್ಯಾಸತ್ಯತೆ ತಿಳಿಯಲು ತ್ರಿಸದಸ್ಯ ಸಮಿತಿ ರಚಿಸಲಾಗಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿದ ಸಮಿತಿಯು ಶಾಲೆಯು ಅನಧಿಕೃತವಾಗಿ ಸ್ಥಳಾಂತರಗೊಂಡಿರುವ ಬಗ್ಗೆ ವರದಿ ಸಲ್ಲಿಸಿತ್ತು. ಹೀಗಾಗಿ, ಶಾಲೆಗೆ ನೋಟಿಸ್ ನೀಡಲಾಗಿದೆ ಎಂದು ಡಿಡಿಪಿಐ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಡಿ.ಪೌಲ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಜೋಮೇಶ ಅವರು, ‘ನೂತನ ಸ್ಥಳದಲ್ಲಿ ಶಾಲೆ ನಡೆಸಲು ಅವಕಾಶ ನೀಡುವಂತೆ ಕೋರಿ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿದ್ದು, ಈ ಮನವಿ ಇನ್ನೂ ವಿಚಾರಣೆಯ ಹಂತದಲ್ಲಿದೆ’ ಎಂದು ತಿಳಿಸಿದ್ದಾರೆ.

    ಶಾಲೆ ಸ್ಥಳಾಂತರದ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಇದರ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಅನುದಾನ ರಹಿತ ಶಾಲಾ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಶಶಿಧರ ದಿಂಡೂರ ಆಗ್ರಹಿಸಿದ್ದಾರೆ.

    ಪಟ್ಟಣದ ಡಿ.ಪೌಲ್ ಆಕಾಡೆಮಿ ಕಿರಿಯ ಪ್ರಾಥಮಿಕ ಶಾಲೆಯು ಶಿಕ್ಷಣ ಇಲಾಖೆಯ ಯಾವುದೇ ಅನುಮತಿ ಪಡೆಯದೇ 2015 ರಲ್ಲಿ ಸ್ಥಳಾಂತರಗೊಂಡಿವ ಬಗ್ಗೆ ದೂರಿನ ಹಿನ್ನೆಲೆಯಲ್ಲಿ ನಮ್ಮ ಇಲಾಖೆಯ ತ್ರಿಸಮಿತಿ ಸದಸ್ಯರ ಮೂಲಕ ಪರಿಶೀಲಿಸಲಾಗಿ ಡಿ.ಪೌಲ್ ಆಕಾಡೆಮಿ ಕಿರಿಯ ಪ್ರಾಥಮಿಕ ಯಾವುದೇ ಅನುಮತಿ ಪಡೆಯದೇ ಸ್ಥಳಾಂತರಗೊಂಡಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದಿಂದ 1 ರಿಂದ 5 ನೇ ತರಗತಿಗೆ ಈ ಶಾಲೆಯಲ್ಲಿ ಯಾವುದೇ ಪ್ರವೇಶಾತಿ ಪಡೆಯದಂತೆ ನೋಟಿಸ್ ನೀಡಿದ್ದೇನೆ. 2015ರಿಂದ ಇಲ್ಲಿಯವರೆಗೂ ಅನಧಿಕೃತವಾಗಿ ನಡೆಯುತ್ತಿರುವ ಈ ಶಾಲೆಯ ಬಗ್ಗೆ ಕ್ರಮದ ಜರುಗಿಸದೆ, ಇದಕ್ಕೆ ಸಹಕರಿಸಿದ ನಮ್ಮ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಗೂ ಕಾನೂನು ರೀತಿ ಶಿಕ್ಷೆಯಾಗಲಿದೆ.
    | ಜಿ.ಎಂ. ಬಸಲಿಂಗಪ್ಪ ಡಿಡಿಪಿಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts