More

    ಡಿ.ದೇವರಾಜು ಅರಸು ಜಯಂತಿ, ಪೀಟರ್ ಅಲೆಕ್ಸಾಂಡರ್‌ಗೆ ಸಿಕ್ತು ಪ್ರಶಸ್ತಿ, ಬಿಸಿಎಂ ಇಲಾಖೆಯಿಂದ ಕಾರ್ಯಕ್ರಮದ ರೂಪುರೇಷೆ ಬಿಡುಗಡೆ

    ವಿಜಯಪುರ: ಹಿಂದುಳಿದ ವರ್ಗಗಗಳ ಧೀಮಂತ ನಾಯಕ, ಸಾಮಾಜಿಕ ಪರಿವರ್ತನೆ ಹರಿಕಾರ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ 107ನೇ ಜನ್ಮ ದಿನವನ್ನು ಈ ಬಾರಿ ಹಿಂದುಳಿದ ವರ್ಗಗಗಳ ಕಲ್ಯಾಣ ಇಲಾಖೆಯಿಂದ ಅದ್ದೂರಿಯಾಗಿ, ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.

    ಇದೇ ಮೊದಲ ಬಾರಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡವರಿಗೆ ಡಿ.ದೇವರಾಜ ಅರಸು ಪ್ರಶಸ್ತಿ ನೀಡಲಾಗುತ್ತಿದ್ದು, ಜಿಲ್ಲಾ ಮಟ್ಟದ ಪ್ರಶಸ್ತಿಗೆ ಸಾಮಾಜಿಕ ಹೋರಾಟಗಾರ ಪೀಟರ್ ಅಲೆಕ್ಸಾಂಡರ್ ಆಯ್ಕೆಯಾಗಿದ್ದಾರೆ. ಎಲ್ಲ ಹಿಂದುಳಿದ ವರ್ಗಗಳನ್ನು ಗಮನದಲ್ಲಿರಿಸಿಕೊಂಡು ಕಾರ್ಯಕ್ರಮ ಆಯೋಜಿಸಲಾಗಿದ್ದು, ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಆ.20ರಿಂದ 22ರವರೆಗೆ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನೆರವೇರಲಿವೆ.

    ಆ.20ರಂದು ದಿವಂಗತ ಡಿ.ದೇವರಾಜ ಅರಸು ರವರ ಜನ್ಮ ದಿನಾಚರಣೆ ಕಾರ್ಯಕ್ರಮ, ಡಿ.ದೇವರಾಜ ಅರಸು ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರದಾನ ಹಾಗೂ ಹಿಂದುಳಿದ ವರ್ಗಗಳ ವಿವಿಧ ಕಾಯಕ ಸಮುದಾಯದವರಾದ ಬಡಗಿ, ನೇಕಾರ, ಕಮ್ಮಾರ, ಕುಂಬಾರ, ವಿಶ್ವಕರ್ಮ, ಇತ್ಯಾದಿ ಕುಲಕಸುಬುದಾರರು ತಯಾರಿಸಿರುವ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಾರಾಟ ನಡೆಯಲಿದೆ.

    ಆ. 21ರಂದು ಜಿಲ್ಲಾ ಮಟ್ಟದಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ವಿದ್ಯಾರ್ಥಿ ನಿಲಯಗಳ ಮಕ್ಕಳಿಗೆ ಯೋಗ ಹಾಗೂ ವಿವಿಧ ಕ್ರೀಡೆಗಳಲ್ಲಿ ಸ್ಪರ್ಧೆ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ.
    ಆ.22ರಂದು ಶಾಲಾ ಮಕ್ಕಳಿಗೆ ಅರಣ್ಯದ ಮಹತ್ವದ ಬಗ್ಗೆ ತಿಳಿವಳಿಕೆ ಮತ್ತು ಗಿಡ ನೆಡುವ ಕಾರ್ಯಕ್ರಮ, ವಾರ್ತಾ ಇಲಾಖೆಯಿಂದ ಛಾಯಾಚಿತ್ರ ಪ್ರದರ್ಶನ ಮತ್ತು ಸಮಾರೋಪ ಸಮಾರಂಭ- ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

    ಡಿ.ದೇವರಾಜ ಅರಸು ಅವರ ಜನ್ಮದಿನವನ್ನು ಅರಸು ಅವರ ದೂರದೃಷ್ಟಿ ಮತ್ತು ಹಿಂದುಳಿದ ವರ್ಗದವರ ಏಳಿಗೆಯ ಬಗ್ಗೆ ಅವರಿಗಿದ್ದ ಬದ್ಧತೆಯ ಹಿನ್ನೆಲೆಯಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಹಾಗೂ ವಿಶಿಷ್ಠತೆಯಿಂದ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಲಾಖೆ ಕಾರ್ಯಕ್ರಮಗಳ ಜಾಗೃತಿ, ಪ್ರದರ್ಶನ ಮತ್ತು ಇತರೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸ್ಪರ್ಧಾ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ.

    ಆಯಾ ವಿಷಯದ ಕಾರ್ಯಕ್ರಮಗಳ ಅನುಸಾರವಾಗಿ ವಸತಿ ನಿಲಯಾರ್ಥಿಗಳಿಗೆ ವಿವಿಧ ಕಾರ್ಯಕ್ರಮಗಳಾದ ಕ್ರೀಡೆ, ಭಕ್ತಿಗೀತೆ, ಪ್ರಬಂಧ ಸ್ಪರ್ಧೆ, ಜಾನಪದ ಸ್ಪರ್ಧೆ, ರಸಪ್ರಶ್ನೆ ಹಾಗೂ ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪ್ರಮಾಣ ಪತ್ರ ವಿತರಣೆ ಮಾಡಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಈರಪ್ಪ ಆಶಾಪುರ ತಿಳಿಸಿದ್ದಾರೆ.

    ಸಚಿವ ಕತ್ತಿಯಿಂದ ಉದ್ಘಾಟನೆ:
    ಮೂರು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಉದ್ಘಾಟಿಸುವರು. ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಧ್ಯಕ್ಷತೆ ವಹಿಸಿವರು. ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಎ.ಎಸ್. ಪಾಟೀಲ ನಡಹಳ್ಳಿ, ಪ್ರಕಾಶ ರಾಠೋಡ, ಡಾ.ಎಂ.ಬಿ. ಪಾಟೀಲ, ಶಿವಾನಂದ ಎಸ್. ಪಾಟೀಲ, ಯಶವಂತರಾಯಗೌಡ ವಿ.ಪಾಟೀಲ, ಹಣಮಂತ ನಿರಾಣಿ, ಸೋಮನಗೌಡ ಪಾಟೀಲ ಸಾಸನೂರ, ಡಾ.ದೇವಾನಂದ ಚವಾಣ್, ಸುನೀಲಗೌಡ ಪಾಟೀಲ, ರಮೇಶ ಭೂಸನೂರ, ಪಿ.ಎಚ್. ಪೂಜಾರ, ಪ್ರಕಾಶ ಹುಕ್ಕೇರಿ, ರಾಜ್ಯ ಬೀಜ ಹಾಗೂ ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಚಂದ್ರಶೇಖರ ಕವಟಗಿ, ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಅಕ್ಕಮಹಾದೇವಿ ಮಹಿಳಾ ವಿವಿಯ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ.ವಿಷ್ಣು ಶಿಂಧೆ ಉಪನ್ಯಾಸ ನೀಡುವರೆಂದು ಆಶಾಪುರ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts