More

    ಡಿಸಿ ಮನವೊಲಿಕೆ ವಿಫಲ -ಹರತಾಳ ನಿಲ್ಲಿಸಲು ರೈತರ ನಕಾರ  

    ದಾವಣಗೆರೆ: ಭದ್ರಾ ನೀರಿನ ವಿಚಾರವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎರಡು ತಾಸಿಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಯಾವುದೇ ತೀರ್ಮಾನವಾಗಲಿಲ್ಲ. ಮನವೊಲಿಕೆಗೆ ಬಗ್ಗದ ರೈತರು ‘ಹಿಂದಿನ ಐಸಿಸಿ ನಿರ್ಧಾರದಂತೆ ನೀರು ಹರಿಸುವವರೆಗೂ ಹೋರಾಟ ನಿಲ್ಲದು’ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.
    ರೈತರ ಅಹವಾಲು ಆಲಿಸಿದ ಡಿಸಿ ಡಾ.ಎಂ.ವಿ.ವೆಂಕಟೇಶ್, ಡಿಸಿಎಂ ಸಂಪರ್ಕಕ್ಕೆ ಯತ್ನಿಸಿದರು. ಡಿಸಿ ದೂರವಾಣಿ ಕರೆಗೆ ಪ್ರತಿಕ್ರಿಯಿಸಿದ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ‘ಡಿಸಿಎಂ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಕಾವೇರಿ ವಿಷಯವಾಗಿ ದೆಹಲಿಗೆ ತೆರಳಿದ್ದಾರೆ. ಅವರು ವಾಪಾಸ್ ಆಗುವವರೆಗೆ ಈ ಬಗ್ಗೆ ನಿರ್ಧಾರ ಸಾಧ್ಯವಿಲ್ಲ’ ಎಂದು ಹೇಳಿದರು.
    ಈ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿದ ರೈತ ಮುಖಂಡ ಶಾಮನೂರು ಎಚ್.ಆರ್. ಲಿಂಗರಾಜ್, ‘ಸರ್ಕಾರವಿರೋದು ಕೇವಲ ಮಂಡ್ಯಕ್ಕಷ್ಟೇ ಅಲ್ಲ, ಮಧ್ಯಕರ್ನಾಟಕದ ಬಗ್ಗೆಯೂ ಗಮನ ಹರಿಸಬೇಕು’ ಎಂದರು.
    ನಾಲೆಯುದ್ದಕ್ಕೂ 20-25 ಸಾವಿರ ಅಕ್ರಮ ಪಂಪ್‌ಸೆಟ್‌ಗಳಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮವಾಗಬೇಕು ಎಂದು ರೈತರು ಹೇಳಿದಾಗ ಡಿಸಿ ಸಮ್ಮತಿಸಿದರು.
    ಈಗಾಗಲೇ ನಾಲೆಗಳಲ್ಲಿ ನೀರು ನಿಲ್ಲಿಸಲಾಗಿದೆ. ನಿರ್ಧಾರ ಮತ್ತಷ್ಟು ವಿಳಂಬವಾದರೆ ಜಿಲ್ಲೆಯ 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನಾಟಿಯಾದ ಭತ್ತ ನಾಶವಾಗಲಿದೆ. ಆನ್ ಆ್ಯಂಡ್ ಆಫ್ ವ್ಯವಸ್ಥೆಯಡಿ ನೀರು ಬಿಟ್ಟರೆ ಕೊನೆಯ ಭಾಗಕ್ಕೆ ತಲುಪಲು ಕನಿಷ್ಠ 15 ದಿನಗಳು ಬೇಕಾಗುತ್ತದೆ. ಹರಿವಿನ ಪ್ರಮಾಣ ಇಳಿಸಿಯಾದರೂ ನೀರು ಕೊಡಲೇಬೇಕು ರೈತ ಮುಖಂಡರು ತಾಕೀತು ಮಾಡಿದರು.
    ಶುಕ್ರವಾರ ಮಧ್ಯಾಹ್ನದ ಒಳಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು. ನಂತರವೂ ರೈತಪರ ನಿರ್ಣಯ ಬಾರದಿದ್ದರೆ ಪರಿಸ್ಥಿತಿ ಕೈ ಮೀರಬಹುದು. ಇದಕ್ಕೆ ಅಧಿಕಾರಿಗಳೇ ಹೊಣೆಯಾಗಲಿದ್ದಾರೆ ಎಂದೂ ರೈತರು ಎಚ್ಚರಿಕೆ ನೀಡಿದರು.
    ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ನಂದಿಗಾವಿ ಶ್ರೀನಿವಾಸ್ ಮಾತನಾಡಿ, ನೀರು ಹರಿಸದಿದ್ದಲ್ಲಿ ರೈತರ ಹೋರಾಟ ತೀವ್ರವಾಗಲಿದೆ. ನಾಲೆಗಳಲ್ಲಿ ನಿರಂತರ ನೀರು ಹರಿಸದಿದ್ದರೆ ನಷ್ಟ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.
    ರೈತ ಮುಖಂಡ ನಾಗೇಶ್ವರರಾವ್ ಮಾತನಾಡಿ, ಭದ್ರಾ ಅಣೆಕಟ್ಟೆಯಲ್ಲಿ ನೀರಿನ ಕೊರತೆ ಇಲ್ಲ. ಅಧಿಕಾರಿಗಳೇ ಹೇಳಿದಂತೆ ಕೃಷಿ ಉದ್ದೇಶಕ್ಕೆ 22 ಟಿಎಂಸಿ ನೀರು ಲಭ್ಯವಿದೆ. ಇದರಲ್ಲಿ 15 ಟಿಎಂಸಿ ನೀರು ಬಳಸಿದರೂ 100 ದಿನ ನಿರಂತರ ನೀರು ಕೊಡಬಹುದು. ನೀರಿದ್ದೂ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    2650 ಕ್ಯೂಸೆಕ್ ಬದಲಾಗಿ 500 ಕ್ಯೂಸೆಕ್ ಇಳಿಕೆ ಮಾಡಿ ನೀರು ಹರಿಸುವುದಾಗಿ ಭರವಸೆ ನೀಡಲಾಗಿತ್ತು. ಅದನ್ನಾದರೂ ಮಾಡಬೇಕು ಎಂದು ರೈತ ಮುಖಂಡ ಕೊಳೇನಹಳ್ಳಿ ಸತೀಶ್ ಒತ್ತಾಯಿಸಿದರು.
    ಸಭೆಯಲ್ಲಿ ಎಸ್ಪಿ ಉಮಾ ಪ್ರಶಾಂತ್, ಜಿ.ಪಂ. ಸಿಇಒ ಸುರೇಶ್ ಇಟ್ನಾಳ್, ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರ್ ಸುಜಾತಾಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ತಹಸೀಲ್ದಾರ್ ಅಶ್ವತ್ಥ್, ಎಎಸ್ಪಿ ರಾಮಗೊಂಡ ಬಸರಗಿ ಹಾಗೂ ರೈತ ಮುಖಂಡರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts