More

    ಜೂ.10ರಂದು ಜಂಗಮನಕೊಪ್ಪದಲ್ಲಿ ಭೂಮಿಪೂಜೆ

    ಹಾವೇರಿ: ತಾಲೂಕಿನ ಜಂಗಮನಕೊಪ್ಪದಲ್ಲಿ ಹಾಲು ಸಂಸ್ಕರಣೆ ಘಟಕ ಸ್ಥಾಪನೆಗೆ ಸರ್ಕಾರದಿಂದ ಸಮ್ಮತಿ ದೊರೆತಿದ್ದು, ಜೂ. 10ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭೂಮಿಪೂಜೆ ನೆರವೇರಿಸಲಿದ್ದಾರೆ. ಈ ಯೋಜನೆಯನ್ನು 18 ತಿಂಗಳೊಳಗಾಗಿ ಪೂರ್ಣಗೊಳಿಸಲಾಗುವುದು ಎಂದು ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ ತಿಳಿಸಿದರು.

    ನಗರದ ಹಾಲು ಒಕ್ಕೂಟದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆಗಾ ಡೇರಿ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಖಾಸಗಿ ಸಹಭಾಗಿತ್ವದಲ್ಲಿ 90ಕೋಟಿ ರೂ. ವೆಚ್ಚದ 1ಲಕ್ಷ ಲೀಟರ್ ಸಾಮರ್ಥ್ಯ ಹಾಲು ಸಂಸ್ಕರಣೆ ಮತ್ತು ಹೀಟ್ ಟ್ರೀಟ್​ವೆುಂಟ್ ಪ್ಯಾಕಿಂಗ್ ಘಟಕಕ್ಕೆ ಸರ್ಕಾರ 15 ಕೋಟಿ ರೂ. ಅನುದಾನ ನೀಡಲಿದೆ. ಇದರಿಂದ ಜಿಲ್ಲೆಯ ಹೈನುಗಾರರಿಗೆ ಪ್ರೋತ್ಸಾಹ ಸಿಕ್ಕಿದಂತಾಗಿದ್ದು, ಮುಂದಿನ ದಿನಗಳಲ್ಲಿ ಸಂಪೂರ್ಣ ಹೈನುಗಾರಿಕಾ ಜಿಲ್ಲೆಯಾಗಿ ಪರಿವರ್ತಿತವಾಗಲಿದೆ. ಜಿಲ್ಲೆಯ ಜನರ ಬೇಡಿಕೆಯಂತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರ ಪ್ರಯತ್ನದಿಂದ ಯೋಜನೆಗೆ ಸರ್ಕಾರದಿಂದ ಅನುಮತಿ ಸಿಕ್ಕಿದೆ. ಇದಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಂಪುಟದ ಎಲ್ಲ ಸಚಿವರನ್ನು ಅಭಿನಂದಿಸುತ್ತೇನೆ. ಶೀಘ್ರದಲ್ಲಿ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದರು.

    ಈ ಯೋಜನೆಗೆ ಹಾಲು ಮಹಾಮಂಡಳಿಯಿಂದ 5 ಕೋಟಿ ರೂಪಾಯಿ, ಧಾರವಾಡ ಒಕ್ಕೂಟದಿಂದ 5 ಕೋಟಿ ರೂ. ಬಂಡವಾಳ ತೊಡಗಿಸಿದ್ದು, ಸರ್ಕಾರದ 15 ಕೋಟಿ ರೂ. ಸೇರಿ 25 ಕೋಟಿ ರೂ. ಅನುದಾನ ಘೊಷಣೆಯಾಗಿದೆ. ಉಳಿದಂತೆ 60 ಕೋಟಿ ರೂ. ವೆಚ್ಚದಲ್ಲಿ ಕಾಂಬಿಬ್ಲಾಕ್ ಘಟಕ ಅನುಷ್ಠಾನವನ್ನು ಖಾಸಗಿ ಸಹಭಾಗಿತ್ವದಲ್ಲಿ ತ್ವರಿತವಾಗಿ ಕಾರ್ಯಾರಂಭಿಸಲಾಗುವುದು. ಜಿಲ್ಲೆಯಲ್ಲಿ 24 ಸಾವಿರ ರೈತ ಕುಟುಂಬಗಳು ಹೈನುಗಾರಿಕೆಯನ್ನು ಅವಲಂಬಿಸಿವೆ. ಧಾರವಾಡ ಒಕ್ಕೂಟ ವ್ಯಾಪ್ತಿಯಲ್ಲಿ 2.86ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಇದರಲ್ಲಿ ಜಿಲ್ಲೆಯಲ್ಲಿಯೇ 1.40ಲಕ್ಷ ಲೀಟರ್ ಹಾಲು ಬರುತ್ತಿದೆ. ಮೆಗಾ ಡೇರಿ ನಿರ್ವಣದಿಂದ 2 ಲಕ್ಷಕ್ಕೂ ಹೆಚ್ಚು ಲೀಟರ್ ಹಾಲು ಸಂಗ್ರಹವಾಗುವ ನಿರೀಕ್ಷೆಯಿದೆ. ಜಿಲ್ಲೆಯಲ್ಲಿ 440 ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ರೈತರಿಗೆ ಹೆಚ್ಚಿನ ಪ್ರೋತ್ಸಾಹಧನ ನೀಡಲು ಅನುಕೂಲವಾಗಲಿದೆ. ಜಿಲ್ಲೆಯಲ್ಲಿ ಪ್ರತಿ ದಿನ ಶೇಖರಣೆಯಾಗುವ ಹಾಲನ್ನು ಬಿಎಂಸಿ ಕೇಂದ್ರ ಮತ್ತು ಶೀತಲೀಕರಣ ಘಟಕಗಳಲ್ಲಿ ಸಂಗ್ರಹಿಸಿ ಮುಖ್ಯ ಡೇರಿ ಧಾರವಾಡಕ್ಕೆ ಸಂಸ್ಕರಣೆಗಾಗಿ ರವಾನಿಸುವುದರಿಂದ ಸಾಗಣೆಗೆ ಹೆಚ್ಚು ವ್ಯಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಸಾಗಣೆ ವೆಚ್ಚ ತಗ್ಗಲಿದೆ ಎಂದರು. ಧಾರವಾಡ ಹಾಲು ಒಕ್ಕೂಟ ಎಂಡಿ ಡಾ. ಕೆ.ಎಂ. ಲೋಹಿತೇಶ್ವರ, ನಿರ್ದೇಶಕ ಬಸನಗೌಡ ಮೇಲಿನಮನಿ ಇತರರು ಇದ್ದರು.

    ಗುಜರಾತ್ ರಾಜ್ಯದ ಆನಂದ ಡೇರಿ ಮಾದರಿಯಲ್ಲಿ ನಿರ್ವಿುಸಲಾಗುವುದು. ಖಾಸಗಿ ಸಹಭಾಗಿತ್ವಕ್ಕಾಗಿ ಶೀಘ್ರದಲ್ಲಿ ಟೆಂಡರ್ ಕರೆಯಲಾಗುವುದು. ಸ್ಥಳೀಯರಿಗೆ ಶೇ. 70ರಷ್ಟು ಉದ್ಯೋಗ ನೀಡುವ ಹಾಗೂ ನಿರ್ವಹಣೆ ಕುರಿತು ಕರಾರು ಮಾಡಿಕೊಳ್ಳಲಾಗುವುದು. ಆದರೆ, ಒಕ್ಕೂಟದಿಂದಲೇ ಹಾಲು ಸಂಗ್ರಹಿಸಲಾಗುವುದು. ಕೇವಲ ಸಂಸ್ಕರಣೆ ಮತ್ತು ಟೆಟ್ರಾ ಪ್ಯಾಕೆಟ್ ಸಿದ್ಧಪಡಿಸುವುದನ್ನು ಖಾಸಗಿಯವರಿಗೆ ವಹಿಸಲಾಗುವುದು.

    | ಬಸವರಾಜ ಅರಬಗೊಂಡ

    ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts