More

    ಜೂನ್ ಮೊದಲ ವಾರ ಕೋವಿಡ್ ಲ್ಯಾಬ್

    ಹಾವೇರಿ: ಜಿಲ್ಲೆಯಲ್ಲಿಯೂ ಕೋವಿಡ್ ಪರೀಕ್ಷಾ ಕೇಂದ್ರ ಸ್ಥಾಪನೆಗಾಗಿ ಸಿವಿಲ್ ಕಾಮಗಾರಿ ಪ್ರಗತಿಯಲ್ಲಿದ್ದು, ಜೂನ್ ಮೊದಲ ವಾರದಲ್ಲಿ ಲ್ಯಾಬ್ ಆರಂಭಗೊಳ್ಳಲಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

    ನಗರದಲ್ಲಿ ಮಂಗಳವಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಕರೊನಾ ಚಿಕಿತ್ಸಾ ಸೌಲಭ್ಯಗಳನ್ನು ವೀಕ್ಷಿಸಿದ ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ತದನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದಾಜು 1 ಕೋಟಿ ರೂ. ವೆಚ್ಚದಲ್ಲಿ ಲ್ಯಾಬ್ ನಿರ್ವಣಗೊಳ್ಳಲಿದೆ. ಈ ಲ್ಯಾಬ್​ನಲ್ಲಿ ಪ್ರತಿ ದಿನಕ್ಕೆ 3 ಶಿಫ್ಟ್​ಗಳ ಆಧಾರದಲ್ಲಿ 300 ಮಾದರಿಗಳ ಪರೀಕ್ಷೆ ನಡೆಸಲಾಗುವುದು’ ಎಂದರು.

    ಈಗಾಗಲೇ ಬಜೆಟ್​ನಲ್ಲಿ ಜಿಲ್ಲೆಗೆ ಮೆಡಿಕಲ್ ಕಾಲೇಜ್​ಗೆ ಕೇಂದ್ರ ಹಾಗೂ ರಾಜ್ಯದ ಶೇ. 60-40ರ ಅನುದಾನದಲ್ಲಿ ಅನುಮತಿ ದೊರೆತು, ಕಟ್ಟಡ ನಿರ್ವಣಕ್ಕೆ ಟೆಂಡರ್ ಕರೆಯಲಾಗಿದೆ. ಕರೊನಾ ಲಾಕ್​ಡೌನ್​ನಿಂದ ಕಾಮಗಾರಿ ಆರಂಭವಾಗಿಲ್ಲ. ಮೇ ಅಂತ್ಯಕ್ಕೆ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.

    ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿಸಲಾಗಿದೆ. 58 ಆಕ್ಸಿಜನ್ ಬೆಡ್​ಗಳನ್ನು ನಿರ್ವಿುಸಲಾಗಿದೆ. ಈ ಮೊದಲು 10 ಬೆಡ್ ಐಸಿಯು ಇತ್ತು. ಈಗ ಮತ್ತೆ 10 ಬೆಡ್ ಸಿದ್ಧಗೊಳಿಸಲಾಗಿದೆ. ಅಂದಾಜು 11 ವೆಂಟಿಲೇಟರ್ ಬಂದಿದ್ದು, ಅವುಗಳನ್ನು ಅಳವಡಿಸುವ ಕಾರ್ಯ ನಡೆದಿದೆ ಎಂದರು.

    ಕಳೆದ 8-10 ದಿನದಲ್ಲಿ ಮುಂಬೈನಿಂದ ಬಂದ ಮೂವರು ಜಿಲ್ಲೆಗೆ ಕೋವಿಡ್ ತಂದಿದ್ದಾರೆ. ಈಗಾಗಲೇ ಅವರ ಸಂರ್ಪತರನ್ನು ಕ್ವಾರಂಟೈನ್ ಮಾಡಲಾಗಿದೆ. ಸವಣೂರಿನಲ್ಲಿ ಪಾಸಿಟಿವ್ ರೋಗಿಗಳ ಪ್ರಾಥಮಿಕ, ದ್ವಿತೀಯ ಸಂಪರ್ಕದಲ್ಲಿದ್ದ ಎಲ್ಲರ ಮಾದರಿ ನೆಗೆಟಿವ್ ಬಂದಿವೆ. ಅಂದಲಗಿ ರೋಗಿಯ ಸಂಪರ್ಕದ ಪ್ರಥಮ, ದ್ವಿತೀಯ ಜನರ ಮಾದರಿ ಪಡೆದು ಪರೀಕ್ಷೆಗೆ ಕಳಿಸಲಾಗಿದೆ. ಈಗಿರುವ ಮೂವರು ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಲಿದ್ದಾರೆ. ಮೂವರಲ್ಲಿಯೂ ಕರೊನಾದ ಯಾವುದೇ ಲಕ್ಷಣಗಳಿಲ್ಲ. ಚಿಕಿತ್ಸೆಯ ಮೊದಲ 2 ವಾರದ ನಂತರದ ಟೆಸ್ಟ್ ವರದಿ ಇಬ್ಬರಲ್ಲಿ ನೆಗೆಟಿವ್ ಬಂದಿದ್ದು, ಇನ್ನೊಮ್ಮೆ ಪರೀಕ್ಷೆ ನಡೆಸಲಾಗುವುದು. ಶೀಘ್ರ ಹಾವೇರಿಯನ್ನು ಮತ್ತೆ ಗ್ರೀನ್ ಜೋನ್ ಮಾಡಲು ಜಿಲ್ಲಾಡಳಿತ ಎಲ್ಲ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಇದರ ಜತೆಗೆ ಕೇಂದ್ರ, ರಾಜ್ಯ ಸರ್ಕಾರ ಬಸ್ ಸಂಚಾರ ಸೇರಿ ಇತರ ಪ್ರಯಾಣ ವ್ಯವಸ್ಥೆ ಆರಂಭಿಸಿದೆ. ಹೊರರಾಜ್ಯದವರಿಗೆ ಸದ್ಯ ಪಾಸ್ ಇದ್ದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಹೊರರಾಜ್ಯದಿಂದ ಕರೊನಾ ಹರಡದಂತೆ ತಡೆಯಲು ಎಲ್ಲ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

    ರಾಣೆಬೆನ್ನೂರ ಎಪಿಎಂಸಿಗೆ ಶಿವಮೊಗ್ಗದಿಂದ ಬರುವವರ ಹಾಗೂ ದಾವಣಗೆರೆಯಿಂದ ಬಟ್ಟೆ ಖರೀದಿಸಲು ಬರುವವರ ಬಗ್ಗೆ ನಿಗಾ ವಹಿಸಲಾಗಿದೆ. ಪೊಲೀಸ್ ಇಲಾಖೆಯಿಂದಲೇ ರಾಜ್ಯ, ಜಿಲ್ಲೆಯ ಗಡಿ ಭಾಗದಲ್ಲಿ ಕಟ್ಟುನಿಟ್ಟಿನ ಕೆಲಸ ಮಾಡಲಾಗುತ್ತಿದೆ. ಕರೊನಾ ತಡೆಯುವ ಕೆಲಸದಲ್ಲಿ ನಿರತರಾದ ಎಲ್ಲ ಪೊಲೀಸರಿಗೂ ಟೆಸ್ಟ್ ಮಾಡಿಸಬೇಕು. ಎಲ್ಲೆಲ್ಲಿ ರೋಗಿಯ ಹತ್ತಿರ ಹೋಗುತ್ತಾರೆ ಅವರಿಗೆ ಪಿಪಿಇ ಕಿಟ್ ಕೊಡುವ ಕೆಲಸ ಮಾಡುತ್ತೇವೆ ಎಂದರು.

    ಆರ್ಥಿಕವಾಗಿ ಪುಟಿದೇಳಲಿದ್ದೇವೆ

    ರಾಜ್ಯವು ಆರ್ಥಿಕವಾಗಿ ಸದೃಢವಾಗಿದೆ. ಆದರೆ, ಕರೊನಾ ಲಾಕ್​ಡೌನ್​ನಿಂದ ತಾತ್ಕಾಲಿಕವಾಗಿ ಸಮಸ್ಯೆಯಾಗಿದ್ದರೂ ಮತ್ತೆ ಪುಟಿದೇಳುವ ಶಕ್ತಿಯಿದೆ. ಕೇಂದ್ರವು ಈಗಾಗಲೇ ರಾಜ್ಯಕ್ಕೆ ಒಟ್ಟು ಜಿಡಿಪಿಯ ಶೇ. 2ರಷ್ಟು ಹಣವನ್ನು ಸಾಲದ ರೂಪದಲ್ಲಿ ಕೊಡುವುದಾಗಿ ತಿಳಿಸಿದೆ. ಇದರಿಂದ ರಾಜ್ಯದಲ್ಲಿ ಲಾಕ್​ಡೌನ್ ಅವಧಿಯ ನಷ್ಟ ಸರಿದೂಗುವ ವಿಶ್ವಾಸವಿದೆ. ನಾಲ್ಕನೇ ತ್ರೖೆಮಾಸಿಕ ಅವಧಿಯಲ್ಲಿ ನಿರೀಕ್ಷಿತ ಜಿಡಿಪಿಯನ್ನು ಮುಟ್ಟುವ ಸಾಧ್ಯತೆಯೂ ಇದೆ. ಬಜೆಟ್​ನಲ್ಲಿ ಘೋಷಿಸಿದ ಎಲ್ಲ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸಿಎಂ ಈಗಾಗಲೇ ಆರ್ಥಿಕ ಇಲಾಖೆಗೆ ಸೂಚನೆ ನೀಡಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.

    ಶಿವಮೊಗ್ಗ ಪೊಲೀಸರಿಗೆ ಕ್ವಾರಂಟೈನ್

    ಶಿವಮೊಗ್ಗದಲ್ಲಿ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಗೆ ಪಾಸಿಟಿವ್ ಬಂದಿದೆ. ಪೊಲೀಸರು ಸಂತ್ರಸ್ತೆ ಮತ್ತು ಆರೋಪಿ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿ ಪೊಲೀಸ್ ಠಾಣೆಗೂ ಕರೆದುಕೊಂಡು ಬಂದಿದ್ದಾರೆ. ಹೀಗಾಗಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಮಹಜರು ಮಾಡಲು ಹೋಗಿದ್ದ ಪೊಲೀಸ್ ಅಧಿಕಾರಿ ಇಲಾಖೆಯ ಸಭೆಯಲ್ಲಿ ಭಾಗವಹಿಸಿದ್ದರು. ಹೀಗಾಗಿ ಬಹಳ ದೊಡ್ಡ ಪ್ರಮಾಣದಲ್ಲಿ ಶಿವಮೊಗ್ಗ ಪೊಲೀಸ್ ಆಡಳಿತದಲ್ಲಿ ಎಎಸ್​ಪಿ, ಡಿವೈಎಸ್​ಪಿ, ಸಿಪಿಐ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts